Salaga: ದುನಿಯಾ ವಿಜಯ್​ಗೆ ಹೊಸ ಲೈಫ್​ ಕೊಡುತ್ತಾ ‘ಸಲಗ’? ಒಂದು ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ

| Updated By: ಮದನ್​ ಕುಮಾರ್​

Updated on: Oct 14, 2021 | 8:06 AM

Duniya Vijay: ‘ಸಲಗ’ ಸೂಪರ್ ಹಿಟ್​ ಆದರೆ ದುನಿಯಾ ವಿಜಯ್​ ಅವರು ಗಾಂಧಿನಗರದಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿಯೂ ವೃತ್ತಿಜೀವನ ಭದ್ರ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಗೆಲುವು ವಿಜಯ್​ಗೆ​ ತುಂಬ ಮುಖ್ಯವಾಗಿದೆ.

Salaga: ದುನಿಯಾ ವಿಜಯ್​ಗೆ ಹೊಸ ಲೈಫ್​ ಕೊಡುತ್ತಾ ‘ಸಲಗ’? ಒಂದು ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ
‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್
Follow us on

ನಟ ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯವಾಗಿರುವ ಅವರಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಈಗ ಅವರು ‘ಸಲಗ’ ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿ ಇದ್ದಾರೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ದುನಿಯಾ ವಿಜಯ್​ ವೃತ್ತಿಜೀವನದಲ್ಲಿ ಈ ಸಿನಿಮಾ ಬಹಳ ಪ್ರಮುಖ ಎನಿಸಿಕೊಳ್ಳಲಿದೆ. ಅದಕ್ಕೆ ಕಾರಣಗಳು ಇಲ್ಲಿವೆ…

 

ನಿರ್ದೇಶಕನಾಗಿ ಸವಾಲು ಸ್ವೀಕರಿಸಿದ ವಿಜಯ್​:

ಇಷ್ಟು ದಿನ ನಟನಾಗಿದ್ದ ದುನಿಯಾ ವಿಜಯ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ನಿರ್ದೇಶನ ಮಾಡುವುದು ನಿಜಕ್ಕೂ ದೊಡ್ಡ ಜವಾಬ್ದಾರಿ. ಇಷ್ಟು ವರ್ಷಗಳ ತಮ್ಮ ಅನುಭವವನ್ನು ಇಟ್ಟುಕೊಂಡು ಅವರು ಈಗ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಗಾಗಿ ಅವರ ಮೇಲೆ ನಿರೀಕ್ಷೆ ಹೆಚ್ಚಿದೆ. ನಟನಾಗಿ ಉತ್ತಮ ಅಂಕ ಗಳಿಸಿರುವ ಅವರು ನಿರ್ದೇಶನದಲ್ಲಿ ಪಾಸ್​ ಆಗುತ್ತಾರೋ ಇಲ್ಲವೋ ಎಂಬುದು ಈಗ ಅಭಿಮಾನಿಗಳು ನೀಡುವ ಫಲಿತಾಂಶದ ಮೇಲೆ ನಿಂತಿದೆ. ಹಾಗಾಗಿ ಈ ಸಿನಿಮಾ ದುನಿಯಾ ವಿಜಯ್​ ಕರಿಯರ್​ಗೆ ಬಹಳ ಮುಖ್ಯವಾಗಲಿದೆ.

ಒಳ್ಳೆಯ ನಿರ್ದೇಶಕರಿಗೆ ಡಿಮ್ಯಾಂಡ್​:

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ನಿರ್ದೇಶಕರಿಗೆ ಬೇಡಿಕೆ ಇದೆ. ಅನೇಕ ನಟರು ತಾವೇ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಂಥ ಯಶಸ್ವಿ ನಿರ್ದೇಶಕರ ಸಾಲಿಗೆ ವಿಜಯ್​ ಕೂಡ ಸೇರ್ಪಡೆ ಆಗುತ್ತಾರೋ ಇಲ್ಲವೋ ಎಂಬ ಕೌತುಕ ಮನೆ ಮನೆಮಾಡಿದೆ. ಒಂದು ವೇಳೆ ‘ಸಲಗ’ ಸೂಪರ್ ಹಿಟ್​ ಆದರೆ ದುನಿಯಾ ವಿಜಯ್​ ಅವರು ಗಾಂಧಿನಗರದಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿಯೂ ವೃತ್ತಿಜೀವನ ಭದ್ರ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಈ ಸಿನಿಮಾದ ಗೆಲುವು ವಿಜಯ್​ಗೆ​ ತುಂಬ ಮುಖ್ಯವಾಗಿದೆ.

ನಿರ್ಮಾಪಕರಿಂದ ವಿಜಯ್​ಗೆ ಸಿಕ್ಕಿದೆ ದೊಡ್ಡ ಬೆಂಬಲ:

‘ಸಲಗ’ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್​ ಸೃಷ್ಟಿ ಮಾಡಿದೆ. ಈ ಮಟ್ಟಕ್ಕೆ ಕ್ರೇಜ್​ ಶುರುವಾಗಲು ಪ್ರಮುಖ ಕಾರಣವೇ ಪ್ರಚಾರ. ನಿರ್ಮಾಪಕ ಕೆಪಿ ಶ್ರೀಕಾಂತ್​ ಅವರು ಪ್ರಚಾರದ ವಿಚಾರದಲ್ಲಿ ಕಿಂಚಿತ್ತೂ ರಾಜಿ ಆಗಿಲ್ಲ. ಎಲ್ಲಿ ಸಾಧ್ಯವೋ ಆ ಎಲ್ಲಾ ಕಡೆಗಳಲ್ಲಿ ಈ ಸಿನಿಮಾವನ್ನು ಅವರು ಪ್ರಮೋಟ್​ ಮಾಡಿದ್ದಾರೆ. ಈಗಲೂ ಭರ್ಜರಿಯಾಗಿಯೇ ಪ್ರಚಾರ ಕಾರ್ಯ ನಡೆಯುತ್ತಿದೆ. ಇದರ ಬಲದಿಂದ ಜನರನ್ನು ಥಿಯೇಟರ್​ನತ್ತ ಕರೆಸುವಲ್ಲಿ ಕೆಪಿ ಶ್ರೀಕಾಂತ್​ ಯಶಸ್ವಿ ಆಗಿದ್ದಾರೆ. ಇನ್ನೇನಿದ್ದರೂ ದುನಿಯಾ ವಿಜಯ್​ ಕೆಲಸ ನೋಡಿದ ಮೇಲೆ ಚಿತ್ರದ ಭವಿಷ್ಯವನ್ನು ಪ್ರೇಕ್ಷಕರು ನಿರ್ಧರಿಸಲಿದ್ದಾರೆ.

ಚರಣ್​ ರಾಜ್​ ಈಗಾಗಲೇ ಗೆದ್ದಾಯ್ತು..

ಸಂಗೀತ ನಿರ್ದೇಶಕ ಚರಣ್​ ರಾಜ್​ ಅವರು ‘ಸಲಗ’ ಸಿನಿಮಾದ ದೊಡ್ಡ ಶಕ್ತಿ ಎಂದರೂ ತಪ್ಪಿಲ್ಲ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಎಲ್ಲ ಹಾಡುಗಳು ಈಗಾಗಲೇ ಧೂಳೆಬ್ಬಿಸಿವೆ. ‘ಸೂರಿಯಣ್ಣ..’, ‘ಟಿಣಿಂಗ್​ ಮಿಣಿಂಗ್​ ಟಿಶ್ಯಾ..’ ಗೀತೆಗಳಂತೂ ಸಿಕ್ಕಾಪಟ್ಟೆ ಜನಮೆಚ್ಚುಗೆ ಗಳಿಸಿವೆ. ಅವುಗಳನ್ನು ಮೆಚ್ಚಿಕೊಂಡ ಅನೇಕ ಪ್ರೇಕ್ಷಕರು ಚಿತ್ರಮಂದಿರಕ್ಕೆ ಕಾಲಿಡಲಿದ್ದಾರೆ. ಆ ನಿರೀಕ್ಷೆಗೆ ತಕ್ಕಂತೆ ದುನಿಯಾ ವಿಜಯ್​ ‘ಸಲಗ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರಾ? ಚಿತ್ರ ನೋಡಿದ ಪ್ರೇಕ್ಷಕರೇ ಈ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಆ ಉತ್ತರದ ಮೇಲೆ ‘ನಿರ್ದೇಶಕ ದುನಿಯಾ ವಿಜಯ್​’ ಭವಿಷ್ಯ ಗೊತ್ತಾಗಲಿದೆ.

ಇದನ್ನೂ ಓದಿ:

‘ಶಿವಣ್ಣನಿಗೆ ನಾನು ಡೈರೆಕ್ಷನ್​ ಮಾಡ್ತೀನಿ’; ಸಲಗ ರಿಲೀಸ್​ಗೂ ಮೊದಲು ದುನಿಯಾ ವಿಜಯ್​ ಘೋಷಣೆ

‘ಚರಂಡಿ ಕ್ಲೀನ್​ ಮಾಡುವವನ ಪಾತ್ರ ಮಾಡ್ತೀನಿ’: ದುನಿಯಾ ವಿಜಯ್​ ನಿರ್ದೇಶನದಲ್ಲಿ ಶಿವಣ್ಣನಿಗೆ ನಟಿಸುವ ಆಸೆ

Published On - 8:06 am, Thu, 14 October 21