Kabzaa Movie: ‘ಕಬ್ಜ’ ತಡವಾಗುತ್ತಿರುವುದು ಏಕೆ? ಟೀಸರ್ ರಿಲೀಸ್ ಯಾವಾಗ? ಇಲ್ಲಿದೆ ಉತ್ತರ
Upendra | Kichcha Sudeep | R Chandru: ಕಿಚ್ಚ ಸುದೀಪ್ ಹಾಗೂ ಉಪೇಂದ್ರ ನಟನೆಯ ‘ಕಬ್ಜ’ ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. 7 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಕೆಲಸಗಳು ಕಳೆದ 3 ವರ್ಷಗಳಿಂದ ನಡೆಯುತ್ತಿದೆ. ಚಿತ್ರ ಏಕೆ ತಡವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಆರ್.ಚಂದ್ರು. ಜತೆಗೆ ಟೀಸರ್ ರಿಲೀಸ್ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.
‘ಕಬ್ಜ’ ಚಿತ್ರದ (Kabzaa Movie) ಕೆಲಸಗಳು ಕಳೆದ ಮೂರು ವರ್ಷಗಳಿಂದ ನಡೆಯುತ್ತಿವೆ. ‘ಮುಕುಂದ ಮುರಾರಿ’ ನಂತರ ಕಿಚ್ಚ ಸುದೀಪ್ (Kichcha Sudeep) ಹಾಗೂ ಉಪೇಂದ್ರ (Upendra) ಜತೆಯಾಗಿ ನಟಿಸುತ್ತಿರುವ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇತ್ತೀಚೆಗೆ ಚಿತ್ರದ ನಾಯಕಿಯಾಗಿ ಬಹುಭಾಷಾ ನಟಿ ಶ್ರಿಯಾ ಶರಣ್ರನ್ನು ಚಿತ್ರತಂಡ ಪರಿಚಯಿಸಿತ್ತು. ದಿನದಿಂದ ದಿನಕ್ಕೆ ಚಿತ್ರದ ತಾರಾಗಣ ಹಿರಿದಾಗುತ್ತಿದೆ. ಇದರೊಂದಿಗೆ ಚಿತ್ರದ ಕ್ಯಾನ್ವಾಸ್ ದೊಡ್ಡದಾಗುತ್ತಿದೆ. ‘ಕಬ್ಜ’ದ ಅಪ್ಡೇಟ್ ಬಗ್ಗೆ ಅಭಿಮಾನಿಗಳು ಬಹಳ ಕಾಲದಿಂದ ಪ್ರಶ್ನಿಸುತ್ತಿದ್ದಾರೆ. ಜತೆಗೆ ಚಿತ್ರವನ್ನು ಯಾವಾಗ ತೆರೆಕಾಣಿಸುತ್ತೀರಿ ಎಂದೂ ಕೇಳುತ್ತಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ನಿರ್ದೇಶಕ ಆರ್.ಚಂದ್ರು (R Chandru) ಉತ್ತರ ನೀಡಿದ್ದಾರೆ. ‘ಕಬ್ಜ’ ಚಿತ್ರ ಪ್ರಸ್ತುತ ಯಾವ ಹಂತದಲ್ಲಿದೆ ಎಂದು ವಿವರಿಸಿರುವ ಅವರು, ಸಿನಿಮಾದ ಕೊನೆಯ ಶೆಡ್ಯೂಲ್ ಮುಗಿದಿದ್ದು, ಹಾಡು ಹಾಗೂ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ. ಪ್ರಸ್ತುತ ಡಬ್ಬಿಂಗ್ ಕೆಲಸಕ್ಕೆ ತಯಾರಿ ನಡೆಯುತ್ತಿದ್ದು, ಎಡಿಟಿಂಗ್ ನಡೆಯುತ್ತಿದೆ. ಮೇ 27ರಿಂದ ಡಬ್ಬಿಂಗ್ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
‘ಕಬ್ಜ’ ಸಿನಿಮಾ ತಡವಾಗುತ್ತಿರುವುದು ಏಕೆ ಎಂದು ವಿವರಿಸಿರುವ ಅವರು, ಕಳೆದ ಮೂರು ವರ್ಷದಿಂದ ತಯಾರಾಗುತ್ತಿರುವ ಚಿತ್ರವು 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ಏಳು ಸಿನಿಮಾಗಳ ಪರಿಶ್ರಮ ಇದೊಂದೇ ಚಿತ್ರಕ್ಕೆ ಖರ್ಚಾಗುತ್ತಿದೆ ಎಂದಿದ್ದಾರೆ.
‘ಕಬ್ಜ’ ಟೀಸರ್ ರಿಲೀಸ್ ಯಾವಾಗ?
ಚಿತ್ರದ ಟೀಸರ್ ಬಗ್ಗೆ ಮಾಹಿತಿ ನೀಡಿದ ಆರ್.ಚಂದ್ರು ಪ್ರಸ್ತುತ ಕನ್ನಡ ಚಿತ್ರರಂಗ ದೊಡ್ಡ ಎತ್ತರಕ್ಕೆ ಬೆಳೆದಿದೆ. ಪ್ರೇಕ್ಷಕರು ಬುದ್ಧಿವಂತರಾಗಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಟೀಸರ್ ನೀಡಬೇಕಿದೆ. ಡಬ್ಬಿಂಗ್ ಮುಗಿಸಿದ ತಕ್ಷಣ ಟೀಸರ್ ರಿಲೀಸ್ ಆಗಲಿದೆ. ಜನರು ಇಷ್ಟ ಪಡುವಂತಹ ಟೀಸರ್ ನೀಡುತ್ತೇನೆ ಎಂದಿದ್ದಾರೆ.
ಆದರೆ ಈಗಾಗಲೇ ಅಭಿಮಾನಿಗಳು ಚಿತ್ರದ ಟೀಸರ್ ರಿಲೀಸ್ ಡೇಟ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ‘ಕಬ್ಜ’ ಟೀಸರ್ ರಿಲೀಸ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದಷ್ಟು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಾಗುವುದು. ಜತೆಗೆ ಸಿನಿಮಾ ರಿಲೀಸ್ ಬಗ್ಗೆಯೂ ಟೀಸರ್ನಲ್ಲಿ ಮಾಹಿತಿ ನೀಡಲು ಪ್ರಯತ್ನಿಸಲಾಗುವುದು ಎಂದಿದ್ದಾರೆ.
‘ಕಬ್ಜ’ದಲ್ಲಿ ಬಿಟೌನ್ ನಟಿಯೋರ್ವರು ಕಾಣಿಸಿಕೊಳ್ಳುವ ಸುಳಿವು ನೀಡಿರುವ ನಿರ್ದೇಶಕರು. ಮತ್ತೋರ್ವ ನಾಯಕಿ ಹಾಗೂ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಅದ್ದೂರಿಯಾಗಿ ಚಿತ್ರೀಕರಣ ನಡೆಸುವ ಪ್ಲಾನ್ ಇದೆ. ಹಿಂದಿಗೆ ಸಲ್ಲುವಂತಹ ಹೀರೋಯಿನ್ ಪಾತ್ರ ಅದಾಗಿರಲಿದೆ ಎಂದಿದ್ದಾರೆ. ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರ ಭಾಗದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ. ಉಳಿದಂತೆ ಎಲ್ಲವೂ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ ಆರ್.ಚಂದ್ರು.
ಆರ್.ಚಂದ್ರು ಮಾತುಗಳು ಇಲ್ಲಿವೆ:
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಕಾಮರಾಜನ್(ಐ ಸಿನಿಮಾ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕೆನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 am, Tue, 24 May 22