ಸಿನಿಮಾ ಹಾಗೂ ಕಿರುತೆರೆಯಲ್ಲಿ ನಿರ್ದೇಶಕರಾಗಿ ಗುರಿತಿಸಿಕೊಂಡಿದ್ದ ವಿನೋದ್ ದೊಂಡಾಳೆ ಇಂದು ನಿಧನ ಹೊಂದಿದ್ದಾರೆ. ನಾಗವಾರದ ತಮ್ಮ ಮನೆಯಲ್ಲಿ ವಿನೋದ್ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿನಿಮಾಕ್ಕಾಗಿ ಮಾಡಿದ್ದ ಸಾಲ ಅತಿಯಾಗಿ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವಿನೋದ್ ನಿಧನದ ಬೆನ್ನಲ್ಲಿನಲ್ಲಿಯೇ ಚಿತ್ರರಂಗದ ಹಲವರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನಿರ್ಮಿಸಬೇಕೆಂಬ ಕನಸೇ ಇಂದು ನಿರ್ದೇಶಕನನ್ನು ಬಲಿ ತೆಗೆದುಕೊಂಡಿದೆ ಎಂದು ಕತೆಗಾರ್ತಿ ಕುಸುಮಾ ಆಯರಹಳ್ಳಿ ಬರೆದುಕೊಂಡಿದ್ದಾರೆ. ಜೊತೆಗೆ ವಿನೋದ್ ದೋಂಡಾಳೆ ನಿರ್ದೇಶಿಸುತ್ತಿದ್ದ ‘ಅಶೋಕ ಬ್ಲೇಡ್’ ಸಿನಿಮಾ ಹೇಗೆ ಅವರನ್ನು ಬಲಿ ತೆಗೆದುಕೊಂಡಿತು ಎಂದು ಸಹ ಸೂಕ್ಷ್ಮವಾಗಿ ತಿಳಿಸಿದ್ದಾರೆ.
ವಿನೋದ್ ದೋಂಡಾಳೆ ಎಂಬ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ; ಅವರದೇ ಸಿನೆಮಾ. ‘ಅಶೋಕ ಬ್ಲೇಡ್’ ಅಂತ ಹೆಸರಿಟ್ಟಿದ್ದರು. ಅದು ಬದುಕನ್ನು ಕುಯ್ದು ಕೊಂದಿತು. ಪಿ ಶೇಷಾದ್ರಿ ಅವರ ಜೊತೆ 8 ವರ್ಷ ಸಿನೆಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ದಾರಾವಾಹಿಗೆ ಟಿ ಎನ್ ಸೀತಾರಾಮ್ ಸರ್ ಜೊತೆಯಾದವರು ವಿನೋದ್. ಅಲ್ಲಿಂದ ನರಹರಿರಾವ್, ದೀಪಕ್ ಮತ್ತು ವಿನೋದ್ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. ಒಬ್ಬ ಕೆಮರಾಮನ್, ಒಬ್ಬ ನಿರ್ದೇಶಕ ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್ . ಈ ಕಾಂಬಿನೇಶನ್ ವರ್ಕಾಗುವಾಗ ದೀಪಕ್ ಇಲ್ಲವಾದರು. ವಿನೋದ್ ಮತ್ತು ನರಹರಿ ಮುಂದುವರೆದರು. ಯಶಸ್ವೀ ಧಾರಾವಾಹಿಗಳನ್ನು ನೀಡಿದರು. ಟಿಸಿಲೊಡೆದು, ಛಲ ಬಿಡದೆ ಅವರು ಮುಂದುವರೆಯುವಾಗ ಎಲ್ಲರಿಗೂ ಖುಷಿಯಾಗಿತ್ತು. ಯಾವುದೋ ಧಾರಾವಾಹಿ ಮಾಡುವ ಬಗ್ಗೆ ಕೆಲವ ತಿಂಗಳ ಹಿಂದೆ ಮಾತಾಡಿದಾಗ, ಈ ಸಿನೆಮಾ ಮುಗಿಯಲಿ ಅಂದಿದ್ದರು. ಧಾರಾವಾಹಿಯ ಮೂಲಕ ಸ್ವಂತ ಸಿನೆಮಾ ಮಾಡುವಷ್ಟು ಬೆಳೆದರಲ್ಲಾ ಅಂತ ಬಹಳ ಖುಷಿಯಾಗಿತ್ತು. ಬಹುಶಃ ಧಾರಾವಾಹಿಯೇ ಮಾಡಿಕೊಂಡಿದ್ದರೆ ಎಲ್ಲವೂ ಚೆನ್ನಾಗೇ ಇರುತ್ತಿತ್ತೇನೋ. ಆದರೆ…ಸಿನೆಮಾ ಕನಸು ಅಂತೊಂದಿದೆಯಲ್ಲಾ…ಅದು ಎಲ್ಲರ ಪಾಲಿಗೂ ನನಸಾಗುವ ಸವಿಗನಸೇ ಅಲ್ಲ, ದುಃಸ್ವಪ್ನವೂ ಆಗಬಹುದು. ಅದಕ್ಕೆ ವಿನೋದ್ ಸರ್ ಸಾವು ಉದಾಹರಣೆಯಾಗಬಾರದಿತ್ತು.
ನೀನಾಸಂ ಸತೀಶ್ ನಾಯಕರಾಗಿ, ಮುಕ್ಕಾಲು ಮುಗಿದಿದ್ದ ಸಿನೆಮಾ ಇನ್ನೂ ಕೊಡು, ಮತ್ತೂ ಕೊಡು ಅಂತ ಕೋಟಿಗಳನ್ನು ಕೇಳುತ್ತಲೇ ಇತ್ತು. ‘ಅಶೋಕ ಬ್ಲೇಡ್’ ಸಾಲಗಾರರ ರೂಪದಲ್ಲಿ ದಿನವೂ ಎದೆ ಇರಿಯುತ್ತಿತ್ತು. ಇಂದು ಎಲ್ಲವೂ ಮುಗಿಯಿತು!
ಸಿನೆಮಾ ಕನಸು ಹೊತ್ತವರು ಕಲಿಯಬೇಕಾದ ಒಂದಷ್ಟು ಪಾಠಗಳಿವೆ.
1. ಯಾವ್ದೋ ಟಿವಿ ಸಂದರ್ಶನದಲ್ಲಿ ಕೂತು ನಾನು ಮೊದಲ ಸಿನೆಮಾ ಮಾಡಿ ಎರಡು ಮನೆಮಾರಿದೆ. ಎರಡನೆ ಸಿನೆಮಾ ಭರ್ಜರಿ ಹಿಟ್ ಅಂತ ಹೇಳುವವನ ನಸೀಬು ನಮ್ಮದೂ ಆಗುತ್ತದೆ ಅಂತ ಯಾವ ಪ್ರೊಡ್ಯೂಸರೂ ಅಂದುಕೊಳ್ಳಬಾರದು. ನೂರಾರು ಕೋಟಿ ಇದ್ದವರು ಹತ್ತಾರು ಕೋಟಿಗಳ ಸಿನೆಮಾ ಮಾಡಬಹುದು. ಕಷ್ಟಪಟ್ಟು ಕೂಡಿಟ್ಟ ಹಣದೊಂದಿಗೆ ಸಿನೆಮಾ ಎಂಬ ಜೂಜಾಡಬಾರದು.ಮನೆ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸಿ ಜೀವ ಬಿಡುವ ಸ್ಥಿತಿ ಬಂದರೂ ಬರಬಹುದು.
2. ನನ್ನ ಪರಿಚಯದಲ್ಲೆ ಕನಿಷ್ಟ 50 ಜನ ಕನಸುಗಣ್ಣಿನ ಪ್ರತಿಭಾವಂತ ನಿರ್ದೇಶಕರಿದ್ದಾರೆ. ಮನೆಯಿಂದ ಹೊರಗಿದ್ದಾರೆ. ಮದುವೆಯಿಲ್ಲ. ತಂದೆತಾಯಿಯೋ ಅಣ್ಣನೋ ತಂಗಿಯೋ ಪ್ರೇಮಿಯೋ ಇಂದಲ್ಲ ನಾಳೆ ದೊಡ್ಡ ಡೈರೆಕ್ಟರಾಗಬಹುದೆಂದು ದೂರದ ಆಸೆ ಇಟ್ಟುಕೊಂಡು ಅವರ ಖರ್ಚಿಗೆ ಕಾಸು ಕೊಡುತ್ತಾರೆ. ಇವರೂ ಸಿಕ್ಕ ಸಿನೆಮಾಗಳಿಗೆ ಅಸಿಸ್ಟಂಟ್, ಅಸೋಸಿಯೇಟ್ ಆಗುತ್ತಾ ಸಣ್ಣ ಪುಟ್ಟ ಖರ್ಚು ದೂಡುತ್ತಾ, ತನ್ನ ಕನಸಿನ ಸಿನೆಮಾ ಕತೆ ಇಟ್ಟುಕೊಂಡು ಪ್ರೊಡ್ಯೂಸರ್ಗಾಗಿ ಹೀರೋ ಡೇಟಿಗಾಗಿ ಹುಡುಕುತ್ತಾ ವರ್ಷಗಳನ್ನು ದೂಡುತ್ತಿದ್ದಾರೆ. ಕನಸು ತಪ್ಪಲ್ಲ, ಸಣ್ಣಪುಟ್ಟ ಕಷ್ಟಗಳೂ ಇದ್ದದ್ದೇ. ಆದರೆ…ಕುಟುಂಬ ನಿರ್ಲಕ್ಷಿಸುತ್ತಾ, ಇವತ್ತಿಗಾಯ್ತು, ನಾಳೆಗೇನು? ಅನ್ನುವ ಸ್ಥಿತಿಯಲ್ಲಿ ಯಾರೋ ಒಬ್ಬ ನಿರ್ದೇಶಕನಿಗೆ ಒಂದು ಸಿನೆಮಾದಿಂದ ಸಿಕ್ಕ ಯಶಸ್ಸಿನ ಲಾಟರಿ ನಮಗೂ ಹೊಡೆಯುತ್ತದೆ ಎಂಬ ಭ್ರಮೆ ದಯವಿಟ್ಟು ಬೇಡ.
ಇದನ್ನೂ ಓದಿ:‘ಅಶೋಕ ಬ್ಲೇಡ್’ ಸಿನಿಮಾ ನಿರ್ದೇಶಕ ನಿರ್ದೇಶಕ ವಿನೋದ್ ದೋಂಡಾಲೆ ಸಾವು
3. ಇನ್ನು ನಟರಾಗುವ ಕನಸು ಹೊತ್ತವರು. Once again ಯಾರೋ ನಟ ನಾನು ಆವತ್ತು ಗತಿ ಇಲ್ಲದೇ ಬಸ್ಟಾಂಡಿನಲ್ಲಿ ಮಲಗಿ ಕಟೌಟಿನ ಕನಸು ಕಾಣುತ್ತಿದ್ದೆ ಅಂತ ಹೇಳಿದ್ದನ್ನೆ ತಲೆಯಲ್ಲಿಟ್ಟುಕೊಳ್ಳಬೇಡಿ. ಸಿನೆಮಾಗಾಗಿ ಊರಿಂದ ಬಂದು ಹಾಗೆ ಎಲ್ಲೋ ಹೇಗೋ ಕಾಲಕಳೆದು, ಏನೂಮಾಡಲಾರದೇ ಸೋತವರ ಲೆಕ್ಕ ಗೊತ್ತೇ? ಒಬ್ಬನ ಯಶಸ್ಸಿನ ಕತೆಮಾತ್ರ ಕೇಳುತ್ತೇವೆ ನಾವು. ಅವನೂ ಸೋತಿದ್ದರೆ ಬಸ್ಟಾಂಡಿನಲ್ಲಿ ಮಲಗೆದ್ದವರ ಹೆಸರಿರದ ಪಟ್ಟಿಯಲ್ಲಿ ಅವನೂ ಹೆಸರಿರದ ವ್ಯಕ್ತಿಯಾಗಿರುತ್ತಿದ್ದ. ಗೆದ್ದವರ ಭಾಷಣಗಳಿಂದ ಸ್ಪೂರ್ತಿ ಪಡೆಯುವುದು ತಪ್ಪಲ್ಲ. ಆದರೆ ಮಿತಿ, ಎಚ್ಚರಗಳನು ಮೀರಿ, ವೈಯಕ್ತಿಕ ಬದುಕಿನ ಕನಿಷ್ಟ ಕರ್ತವ್ಯಗಳನ್ನು ನಿರ್ಲಕ್ಷಿಸಿ ಅವನಂತಾ ಕಷ್ಟ ಇಂದು ನನಗೂ ಬಂದಿದೆ, ನಾಳೆ ಅವನಂತದೇ ಗೆಲುವು ನನ್ನದೂ ಆಗುತ್ತದೆ ಎಂಬ ಭ್ರಮೆಯ ಬೆನ್ನು ಹತ್ತಬೇಡಿ. ಇಷ್ಟಕ್ಕೂ ಗೆಲುವೆಂಬುದು ಬದುಕು ನಮಗೆ ಕೊಡುವ ಅವಕಾಶಗಳ ಮೊತ್ತವಷ್ಟೆ.
ಬದುಕಿಗಿಂತ ದೊಡ್ಡದೇನ್ರೀ ಸಿನೆಮಾ? ಈಗ ಹೋದ ಜೀವವನ್ನು ಯಾವ ಸಿನೆಮಾ ತಂದುಕೊಡುತ್ತದೆ? ಮೂರು ಚಿಕ್ಕ ಮಕ್ಕಳು ಏನು ಮಾಡಬೇಕು? ಜೋಡಿ ವ್ಯವಹಾರದಲ್ಲಿ ಉಳಿದ ಮತ್ತೊಬ್ಬ ಏನುಮಾಡಬೇಕು? ಸಿನೆಮಾ ಎಂಬ ಮಾಯೆ ಮತ್ತೊಂದು ಜೀವವನ್ನು ಮುಗಿಸಿತು. ಜಗತ್ತಿನಲ್ಲಿ ಕೋಟಿಗಳಿಗೆ ಟೋಪಿ ಹಾಕಿ ಭಂಡತನದಿಂದ ಬದುಕುವ ಜನರೆಷ್ಟಿಲ್ಲ? ಕಂಡವರ ಹಣ ತಿಂದು ನಿದ್ದೆ ಹೇಗೆ ಮಾಡುತ್ತಾರೆ? ಅಂತ ನಾವಂದುಕೊಳ್ಳುವಾಗ ಅವರು ಭರ್ಜರಿ ಗೊರಕೆ ಹೊಡೆದಿರುತ್ತಾರೆ. ಆದರೆ ಪಾಪ ವಿನೋದ್ ಸರ್ ಹಾಗಲ್ಲ. ಮನಸ್ಸು ಮಾಡಿದ್ದರೆ ಎಲ್ಲಾದರೂ ಎರಡು ವರ್ಷ ಮರೆಯಾಗಬಹುದಿತ್ತು. ‘ಹೌದು, ಕೊಟ್ಟಿದೀರ. ಈಗಿಲ್ಲ ಏನ್ಮಾಡ್ಲಿ?’ ಅಂತ ಭಂಡರಾಗಬಹುದಿತ್ತು. ಮನುಷ್ಯನ ವ್ಯಕ್ತಿತ್ವದ ಸೂಕ್ಷ್ಮ ತೆಯೂ ಯಾವ ಅಶೋಕ ಬ್ಲೇಡಿಗೂ ಕಮ್ಮಿ ಇಲ್ಲ. ಸದ್ದಿಲ್ಲದೇ , ಒಳಗೇ ಮುಗಿಸಿಹಾಕುತ್ತದೆ.
ಕಡು ಕಷ್ಟದಿಂದ ಬಂದು, ಯಶಸ್ವೀ ನಿರ್ದೇಶಕರಾಗಿದ್ದ ವಿನೋದ್ ಸರ್ ಕನಸು ಮತ್ತು ಎಲ್ಲ ಬಾದೆಗಳೆರಡಕ್ಕೂ ಸಾವಿನೊಂದಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ನಿಮ್ಮ ಸಿನೆಮಾ ಕನಸು ಕನಸಾಗೇ ಉಳಿದದ್ದಕ್ಕೆ, ಈ ದುರಂತ ಅಂತ್ಯಕ್ಕೆ ವಿಷಾದವಿದೆ. ನಿಮ್ಮ ಸಾವು ಎಲ್ಲ ಸಿನೆಮಾ ಕನಸುಗಾರರಿಗೆ “ಸಿನೆಮಾಗಿಂದ ಬದುಕು ದೊಡ್ಡದು” ಎಂಬ ಪಾಠವಾಗಬೇಕಷ್ಟೆ. ಅಥವಾ ಹೆಚ್ಚು ಸೂಕ್ಷ್ಮವಾಗಬಾರದು ಕೊಂಚ ಭಂಡತನವಿರಬೇಕೆಂಬ ಪಾಠವೋ? ನಮ್ಮ ಕನಸುಗಳು ಯಾವಾಗಲೂ ಇಲ್ಲಿಂದೆಲ್ಲಿಗೋ ಒಯ್ಯುವ ಏಣಿಯೇ ಆಗಬೇಕಿಲ್ಲ. ನಮ್ಮ ಕನಸುಗಳೇ ನಮ್ಮನ್ನು ಇರಿದು ಕೊಲ್ಲಲೂಬಹುದೆಂಬ ಪಾಠವೋ? ಏನೂ ತೋಚದಾಗಿದೆ ಎಂದಿದ್ದಾರೆ ಕುಸುಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ