‘ರಾಕಿಂಗ್ ಸ್ಟಾರ್’ ಯಶ್ ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಎಲ್ಲರಲ್ಲೂ ಕೌತುಕ ಇದೆ. ಸದ್ಯ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. 2022ರ ಏಪ್ರಿಲ್ 14ರಂದು ಈ ಚಿತ್ರ ರಿಲೀಸ್ ಆಗಲಿದೆ. ಸದ್ಯ ಕೊನೆ ಹಂತದ ಕೆಲಸಗಳು ನಡೆಯುತ್ತಿವೆ. ನಿರ್ದೇಶಕ ಪ್ರಶಾಂತ್ ನೀಲ್ ಕಸುಬುದಾರಿಕೆಯ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಹಾಗಾದರೆ ‘ಕೆಜಿಎಫ್ 2’ ಬಳಿಕ ಯಶ್ ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ? ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೂ ಮುನ್ನವೇ ‘ಭೀಮ’ ಸಿನಿಮಾದ ಟ್ರೇಲರ್ಗೆ ಯೂಟ್ಯೂಬ್ನಲ್ಲಿ ಲಕ್ಷಾಂತರ ವೀವ್ಸ್ ಸಿಗುತ್ತಿದೆ. ಇದೊಂದು ನಕಲಿ ಸಿನಿಮಾ ಮತ್ತು ನಕಲಿ ಟ್ರೇಲರ್ ಎಂಬುದು ಗಮನಿಸಬೇಕಾದ ಅಂಶ!
ಯಾವುದಾದರೂ ಹೊಸ ಸಿನಿಮಾ ಘೋಷಣೆ ಆದಾಗ ಅದರ ಫ್ಯಾನ್ ಮೇಡ್ ಪೋಸ್ಟರ್, ಟೀಸರ್, ಟ್ರೇಲರ್ಗಳು ಯೂಟ್ಯೂಬ್ನಲ್ಲಿ ಸದ್ದು ಮಾಡುವುದು ಸಹಜ. ಅವುಗಳನ್ನು ಕಂಡು ಕೆಲವೊಮ್ಮೆ ಚಿತ್ರತಂಡದವರು ಕೂಡ ಬೆನ್ನುತಟ್ಟಿದ ಉದಾಹರಣೆ ಇದೆ. ಆದರೆ ಈಗ ವೈರಲ್ ಆಗುತ್ತಿರುವ ‘ಭೀಮ’ ಎಂಬ ಸಿನಿಮಾ ಘೋಷಣೆಯೇ ಆಗಿಲ್ಲ. ಅಸಲಿಗೆ ಅಂತಹ ಪ್ಲ್ಯಾನ್ ಕೂಡ ಇಲ್ಲ. ಆದರೆ ಯೂಟ್ಯೂಬ್ನಲ್ಲಿ ಇಂಥದ್ದೊಂದು ಕಾಲ್ಪನಿಕ ಚಿತ್ರದ ಟ್ರೇಲರ್ ಎಡಿಟ್ ಮಾಡಿ ಹರಿಬಿಡಲಾಗಿದೆ.
ಭೀಮನ ಪಾತ್ರದಲ್ಲಿ ಯಶ್ ನಟಿಸುತ್ತಾರೆ. ಅದಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಈ ನಕಲಿ ಟ್ರೇಲರ್ನಲ್ಲಿ ತಿಳಿಸಲಾಗಿದೆ. ಯಶ್ ನಟಿಸಿದ ಖಾಸಗಿ ಕಂಪನಿಯ ಜಾಹೀರಾತಿನ ಕೆಲವು ತುಣುಕುಗಳನ್ನು ಬಳಸಿಕೊಂಡು ಈ ಟ್ರೇಲರ್ ಎಡಿಟ್ ಮಾಡಲಾಗಿದೆ. ಹೆಡ್ಡಿಂಗ್ನಲ್ಲಿ ‘ಭೀಮ ಅಫೀಶಿಯಲ್ ಟ್ರೇಲರ್’ ಎಂದು ಬರೆಯಲಾಗಿದೆ. ಆದರೆ ಅದರ ಡಿಸ್ಕ್ರಿಪ್ಷನ್ನಲ್ಲಿ ಹೋಗಿ ನೋಡಿದರೆ ಮಾತ್ರ ಈ ಟ್ರೇಲರ್ ಹಿಂದಿನ ಅಸಲಿಯತ್ತು ಏನು ಎಂಬುದು ಗೊತ್ತಾಗುತ್ತದೆ. ಇದೊಂದು ಕಾಲ್ಪನಿಕ ಪ್ರಾಜೆಕ್ಟ್ನ ನಕಲಿ ಟ್ರೇಲರ್ ಎಂಬುದನ್ನು ಸ್ಪಷ್ಟವಾಗಿ ಬರೆಯಲಾಗಿದೆ.
ಸದ್ಯ ಈ ನಕಲಿ ಸಿನಿಮಾದ ನಕಲಿ ಟ್ರೇಲರ್ ಕಂಡು ಅಭಿಮಾನಿಗಳು ಫಿದಾ ಆಗಿರುವುದು ನಿಜ. ಪ್ರಶಾಂತ್ ನೀಲ್ ಮತ್ತು ಯಶ್ ಕಾಂಬಿನೇಷನ್ನಲ್ಲಿ ನಿಜವಾಗಿಯೂ ಇಂಥ ಒಂದು ಸಿನಿಮಾ ಮೂಡಿಬರಲಿ ಎಂದು ಅನೇಕರು ಆಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಯಶ್ ರಿಜೆಕ್ಟ್ ಮಾಡಿದ್ದ ಚಿತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿ ಹೀನಾಯವಾಗಿ ಸೋತರು; ಯಾವುದು ಆ ಸಿನಿಮಾ?
‘ಸಿಲ್ಲಿ ಲಲ್ಲಿ ಸೀರಿಯಲ್ನಲ್ಲಿ ಯಶ್ ನಟಿಸಿದ್ರು, ಇಂದು ಐಕಾನ್ ಆಗಿದ್ದಾರೆ’: ಹಾಸ್ಯ ನಟ ಮಿತ್ರ