ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗಲಿಲ್ಲ ಏಕೆ? ಯಶ್ ಕೊಟ್ಟರು ಕಾರಣ

Yash: 2021 ರಲ್ಲಿ ಮಂಡ್ಯ ತಾಲ್ಲೂಕು ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಯಶ್ ಹಾಗೂ ಸಿದ್ದರಾಮಯ್ಯ ಅಂತ್ಯಸಂಸ್ಕಾರಕ್ಕೆ ಬರಬೇಕೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಿದ್ದರಾಮಯ್ಯ ಅವರು ಖುದ್ದು ಅಂತ್ಯಸಂಸ್ಕಾರದಲ್ಲಿ ಭಾಗಿ ಆಗಿದ್ದರು. ಆದರೆ ಯಶ್ ಭಾಗಿ ಆಗಿರಲಿಲ್ಲ. ಅದಕ್ಕೆ ಈಗ ಸ್ಪಷ್ಟನೆ ನೀಡಿದ್ದಾರೆ ನಟ ಯಶ್.

ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗಲಿಲ್ಲ ಏಕೆ? ಯಶ್ ಕೊಟ್ಟರು ಕಾರಣ
Yash Fan

Updated on: Aug 14, 2026 | 1:20 PM

ಮುಖ್ಯಾಂಶಗಳು

  • 2021 ರಲ್ಲಿ ಯಶ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ
  • ಯಶ್ ತನ್ನ ಅಂತ್ಯಸಂಸ್ಕಾರಕ್ಕೆ ಬರಬೇಕೆಂಬುದು ಅವನ ಕೊನೆ ಆಸೆಯಾಗಿತ್ತು.
  • ಯಶ್, ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ, ಅದಕ್ಕೆ ಕಾರಣ ಕೊಟ್ಟಿದ್ದಾರೆ ನಟ

ಯಶ್ (Yash), ಪ್ಯಾನ್ ಇಂಡಿಯಾ ಸ್ಟಾರ್ ನಟ. ಕೋಟ್ಯಂತರ ಅಭಿಮಾನಿಗಳನ್ನು ಯಶ್ ಹೊಂದಿದ್ದಾರೆ. ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ದೇಶದ ಉದ್ದಗಲಕ್ಕೂ ಅವರಿಗೆ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಬಗ್ಗೆ ಖುದ್ದು ಯಶ್ ಅವರಿಗೆ ಸಾಕಷ್ಟು ಕಾಳಜಿ ಮತ್ತು ಪ್ರೀತಿ ಇದೆ. ಆದರೆ ಕೆಲ ವರ್ಷಗಳ ಹಿಂದೆ ಯಶ್ ಅವರ ಅಭಿಮಾನಿಯೊಬ್ಬ, ತನ್ನ ಅಂತ್ಯಸಂಸ್ಕಾರಕ್ಕೆ ಯಶ್ ಮತ್ತು ಆಗ ವಿಪಕ್ಷ ನಾಯಕ ಆಗಿದ್ದ ಸಿದ್ದರಾಮಯ್ಯ ಬರಬೇಕೆಂದು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಯಶ್ ಆ ಅಭಿಮಾನಿಯ ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ.

2021 ರಲ್ಲಿ ಮಂಡ್ಯ ತಾಲ್ಲೂಕು ಕೆರೆಗೋಡು ಹೋಬಳಿ ಕೊಡಿದೊಡ್ಡಿ ಗ್ರಾಮದ ಯುವಕ ಕೃಷ್ಣ ಎಂಬಾತ ಯಶ್ ಹಾಗೂ ಸಿದ್ದರಾಮಯ್ಯ ಅಂತ್ಯಸಂಸ್ಕಾರಕ್ಕೆ ಬರಬೇಕೆಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಿದ್ದರಾಮಯ್ಯ ಅವರು ಖುದ್ದು ಅಂತ್ಯಸಂಸ್ಕಾರದಲ್ಲಿ ಭಾಗಿ ಆಗಿದ್ದರು. ಆದರೆ ಯಶ್ ಭಾಗಿ ಆಗಿರಲಿಲ್ಲ. ಈ ಬಗ್ಗೆ ಇದೀಗ ‘ಆಪ್​​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಯಶ್ ಅವರನ್ನು ಪತ್ರಕರ್ತ ರಜತ್ ಶರ್ಮಾ ಪ್ರಶ್ನೆ ಮಾಡಿದ್ದು, ತಾವೇಕೆ ಅಂದು ಆ ಯುವಕನ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಲಿಲ್ಲ ಎಂದು ಯಶ್ ಉತ್ತರ ನೀಡಿದ್ದಾರೆ.

‘ನನಗೆ ಬಹಳ ದುಃಖವಾಗಿತ್ತು, ಆದರೆ ನಾನು ಉದ್ದೇಶಪೂರ್ವಕವಾಗಿ ಆ ಯುವಕನ ಅಂತ್ಯ ಸಂಸ್ಕಾರದಲ್ಲಿ ಭಾಗಿ ಆಗಲಿಲ್ಲ. ನಾನು ಅಂದು ಆ ಯುವಕನ ಅಂತ್ಯಸಂಸ್ಕಾರದಲ್ಲಿ ಭಾಗಿ ಆಗಿದ್ದರೆ, ಬೇರೆ ಅಭಿಮಾನಿಗಳಿಗೆ ಒಂದು ಋಣಾತ್ಮಕ ಸಂದೇಶ ನೀಡಿದಂತಾಗುತ್ತಿತ್ತು. ಒಂದೊಮ್ಮೆ ನಾವು ಹೀಗೆ ಮಾಡಿದರೆ ಯಶ್ ಅನ್ನು ಕರೆಸಬಹುದು ಎಂಬ ಯೋಚನೆ ಅವರ ತಲೆಗೆ ಬರುವ ಸಾಧ್ಯತೆ ಇತ್ತು. ಅದು ನನಗೆ ಬೇಕಿರಲಿಲ್ಲ. ಹಾಗಾಗಿ ನಾನು ಆ ಯುವಕನ ಅಂತ್ಯಸಂಸ್ಕಾರಕ್ಕೆ ಹೋಗಲಿಲ್ಲ’ ಎಂದರು ಯಶ್.

ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರದ ಅವಧಿ ಇಷ್ಟೊಂದು ದೀರ್ಘವೇ? ಫ್ಯಾನ್ಸ್​​ಗೆ ಹಬ್ಬ

‘ನೀವು ಸಾಧನೆ ಮಾಡಿ, ಸಾಧನೆ ಮಾಡಿ ನನ್ನನ್ನು ಕರೆಯಿರಿ, ಖಂಡಿತ ನಾನು ಬರುತ್ತೇನೆ. ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ ಆದರೆ ಈ ರೀತಿ ಮಾಡಿ ಕರೆದರೆ ಬರುವ ಮನಸ್ಸಾಗುವುದಿಲ್ಲ. ನಾನು ಬಂದರೆ ಸಹ ಅದು ತಪ್ಪು ಸಂದೇಶವನ್ನು ನೀಡಿದಂತೆ ಆಗುತ್ತದೆ. ನಾನು ಹೋಗಿದ್ದರೆ ಬೇರೆ ಕೆಲವರಿಗೂ ಅದು ಸ್ಪೂರ್ತಿ ನೀಡಿ, ಯಶ್ ಅನ್ನು ಕರೆಸಬೇಕೆಂದರೆ ಹೀಗೆ ಮಾಡಬಹುದು (ಆತ್ಮಹತ್ಯೆ) ಎಂದು ಅನಿಸುವ ಸಾಧ್ಯತೆ ಇದೆ, ಹಾಗಾಗಿ ನಾನು ಅಂದು ಕಠಿಣ ನಿರ್ಧಾರ ಮಾಡಿ ಆ ಯುವಕನ ಅಂತ್ಯ ಸಂಸ್ಕಾರಕ್ಕೆ ಹೋಗಲಿಲ್ಲ’ ಎಂದಿದ್ದಾರೆ ನಟ ಯಶ್.

ಅದೇ ಸಂದರ್ಶನದಲ್ಲಿ ತಮಗೆ ಅಭಿಮಾನಿಗಳ ಬಗ್ಗೆ ಇರುವ ಪ್ರೀತಿಯ ಬಗ್ಗೆ ಮಾತನಾಡಿರುವ ಯಶ್, ‘ನಾನು ಅಭಿಮಾನಿಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೇನೆ. ಅವರನ್ನು ಭೇಟಿ ಆಗಬೇಕೆಂದರೆ ಸಮಯ ಮಾಡಿಕೊಂಡು ಭೇಟಿ ಮಾಡುತ್ತೇನೆ. ಪ್ರತಿಯೊಬ್ಬರೊಟ್ಟಿಗೆ ಖುದ್ದು ನಿಂತು ಫೋಟೊಗಳನ್ನು ತೆಗೆಸಿಕೊಳ್ಳುತ್ತೇನೆ’ ಎಂದು ಯಶ್ ಹೇಳಿದ್ದಾರೆ. ಯಶ್ ಸಾಮಾನ್ಯವಾಗಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಎಲ್ಲರೊಟ್ಟಿಗೆ ಪ್ರತ್ಯೇಕವಾಗಿ ಫೋಟೊಗಳನ್ನು ತೆಗೆಸಿಕೊಳ್ಳುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us