Yash: ಮೃತ ಅಭಿಮಾನಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ತಲುಪಿಸಿದ ಯಶ್
ಅಭಿಮಾನಿಗಳ ನಿಧನದ ಬಳಿಕ ಯಶ್ ಅವರು ಮೃತರ ಮನೆಗಳಿಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರಿಗೆ ಪರಿಹಾರ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್ ತಿಳಿಸಿದ್ದರು. ಈಗ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿರುವುದು ತಿಳಿದುಬಂದಿದೆ.
ನಟ ಯಶ್ (Yash) ಅವರ ಜನ್ಮದಿನದ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಅಭಿಮಾನಿಗಳು ನಿಧನರಾದ ನೋವು ಇನ್ನೂ ಹಸಿಯಾಗಿದೆ. ಮೃತ ಅಭಿಮಾನಿಗಳಾದ (Yash Fans) ಮುರಳಿ, ನವೀನ್ ಮತ್ತು ಹನುಮಂತ ಅವರ ಕುಟುಂಬದವರಿಗೆ ಪರಿಹಾರ ಹಣ ತಲುಪಿಸಲಾಗಿದೆ. ಯಶ್ ಆಪ್ತರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ತೆರಳಿ ಪರಿಹಾರದ ಚೆಕ್ ನೀಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ. ಯಶ್ ಸ್ನೇಹಿತರು ಬಂದು ಪರಿಹಾರ ಹಣ ನೀಡಿದ್ದಾಗ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಕ್ಕಳನ್ನು ಕಳೆದುಕೊಂಡ ನೋವು ಪೋಷಕರನ್ನು ಕಾಡುತ್ತಿದೆ.
ಘಟನೆ ಹಿನ್ನೆಲೆ:
ಯಶ್ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಪ್ರತಿ ವರ್ಷ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗದಗ ಜಿಲ್ಲೆಯ ಸೊರಣಗಿ ಗ್ರಾಮದ ಅಭಿಮಾನಿಗಳು ಈ ಬಾರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾಗ ದುರ್ಘಟನೆ ನಡೆಯಿತು. ಬ್ಯಾನರ್ ಕಟ್ಟುವಾಗ ವಿದ್ಯುತ್ ತಂತಿ ತಗುಲಿದ್ದರಿಂದ ಮುರಳಿ, ನವೀನ್ ಮತ್ತು ಹನುಮಂತ ಮೃತರಾದರು.
ಇದನ್ನೂ ಓದಿ: ‘ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ’: ಜನ್ಮದಿನದಂದೇ ಫ್ಯಾನ್ಸ್ ಸತ್ತಿದ್ದಕ್ಕೆ ಯಶ್ ನೋವಿನ ನುಡಿ
ಅಭಿಮಾನಿಗಳ ಸಾವಿನ ಸುದ್ದಿ ತಿಳಿದು ಯಶ್ ಅವರು ಕಂಬನಿ ಮಿಡಿದರು. ಮರುದಿನ ಅವರು ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತರ ಮನೆಗಳಿಗೆ ತೆರಳಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರಿಗೆ ಪರಿಹಾರ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ತಮ್ಮ ಕೈಲಾದ ಸಹಾಯ ಮಾಡುವುದಾಗಿ ಯಶ್ ತಿಳಿಸಿದ್ದರು. ಈಗ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೀಡಿರುವುದು ತಿಳಿದುಬಂದಿದೆ.
ಈ ವರ್ಷ ಕೊವಿಡ್ ಹೊಸ ಪ್ರಕರಣಗಳು ಕಂಡುಬರುತ್ತಿರುವ ಕಾರಣದಿಂದ ಯಶ್ ಅವರು ಅಭಿಮಾನಿಗಳ ಜೊತೆ ಬರ್ತ್ಡೇ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದರು. ಎಲ್ಲರ ಯೋಗಕ್ಷೇಮದ ಬಗ್ಗೆ ಅವರು ಕಾಳಜಿ ವಹಿಸಿದ್ದರು. ಆದರೆ ತಮ್ಮ ಹುಟ್ಟುಹಬ್ಬದ ದಿನವೇ ಅಭಿಮಾನಿಗಳ ದುರ್ಮರಣ ಆಗಿದ್ದು ಅವರಿಗೆ ತೀವ್ರ ನೋವು ಉಂಟು ಮಾಡಿತು. ಅಭಿಮಾನಿಗಳೆಲ್ಲರೂ ಎಚ್ಚರದಿಂದ ಇರಬೇಕು ಎಂದು ಅವರು ಬುದ್ಧಿಮಾತು ಹೇಳಿದರು. ಸದ್ಯ ಅವರು ‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Wed, 17 January 24