ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ತಾರ್ಕಿಕ ಅಂತ್ಯ ಕಾಣದೇ ಮುಷ್ಕರ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರವನ್ನು ಬಿಗಿಗೊಳಿಸಲು ಪ್ರಯತ್ನಿಸುತ್ತಿರುವ ಸಾರಿಗೆ ನೌಕರರು ಬೇರೆ ಬೇರೆ ವಲಯದವರನ್ನು ತಲುಪುವ ಮೂಲಕ ಬೆಂಬಲ ಪಡೆಯುತ್ತಿದ್ದಾರೆ. ನಿನ್ನೆ ಸ್ಯಾಂಡಲ್ವುಡ್ನ ಬಹುಬೇಡಿಕೆ ನಟ, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಾರಿಗೆ ನೌಕರರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಹರಿದಾಡಿತ್ತು. ಮುಷ್ಕರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದ ಆ ಪತ್ರದಲ್ಲಿ ನಿಮ್ಮ ತಂದೆಯವರೂ ಬಿಎಂಟಿಸಿ ನಿವೃತ್ತ ಚಾಲಕರು ಹೀಗಾಗಿ ಸಾರಿಗೆ ನೌಕರರ ಕುಟುಂಬದ ಹಿನ್ನೆಲೆಯುಳ್ಳ ನೀವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಲಾಗಿತ್ತು. ಇದೀಗ ಸ್ವತಃ ಯಶ್ ಈ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಹೆಸರಿನಲ್ಲಿ ಪತ್ರ ಬರೆಯಲಾಗಿರುವ ಪತ್ರವು ಯಶ್, ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ ಎಂಬ ಒಕ್ಕಣೆಯಿಂದ ಆರಂಭವಾಗಿದೆ. ಅಲ್ಲದೇ ಪತ್ರವು ಯಾವುದೇ ಅಧಿಕೃತ ಮುದ್ರೆಯನ್ನಾಗಲೀ, ಸಹಿಯನ್ನಾಗಲೀ, ದಿನಾಂಕವನ್ನಾಗಲೀ ಹೊಂದಿಲ್ಲ. ಇದನ್ನು ಯಶ್ ಅವರಿಗೆ ರವಾನೆ ಮಾಡಿದ್ದಾರೋ, ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟನೆ ಸಿಕ್ಕಿಲ್ಲ. ಆದರೆ, ಇದೀಗ ಯಶ್ ಎರಡೂ ಕೈ ಜೋಡಿಸುವ ಇಮೋಜಿಯೊಂದಿಗೆ ಪತ್ರದ ಚಿತ್ರವನ್ನು ಟ್ವೀಟ್ ಮಾಡಿರುವುದು ಹಲವು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ.
ಯಶ್ ಅವರ ತಂದೆ ಸಾರಿಗೆ ನೌಕರರಾಗಿದ್ದರು ಎಂಬ ವಿಷಯವನ್ನಿಟ್ಟುಕೊಂಡು, ನಿಮ್ಮ ತಂದೆಯವರು ಅವರ ಅನುಭವ, ನೋವನ್ನು ನಿಮ್ಮ ಜತೆ ಹಂಚಿಕೊಂಡಿರಬಹುದು. ನೀವು ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದೀರಿ. ಈಗ ನಮಗೆ ಬೆಂಬಲಿಸಿ ಎಂಬ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಸದ್ಯ ಈ ಪತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆದರೆ, ಪತ್ರಕ್ಕೆ ಸಂಬಂಧಿಸಿದಂತೆ ಇಮೋಜಿಯ ಹೊರತಾಗಿ ಯಾವುದೇ ಸಾಲುಗಳನ್ನು ಬರೆದುಕೊಂಡಿಲ್ಲವಾದ್ದರಿಂದ ಅವರ ನಿಲುವು ಏನು? ಮುಷ್ಕರಕ್ಕೆ ಬೆಂಬಲ ಸೂಚಿಸುತ್ತಾರಾ? ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
— Yash (@TheNameIsYash) April 15, 2021
ಆರನೇ ವೇತನ ಆಯೋಗದ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಎಷ್ಟೇ ಬಿಗಿಪಟ್ಟು ಹಿಡಿದರೂ ಸರ್ಕಾರ ಮಾತ್ರ ಕಟ್ಟುನಿಟ್ಟಾಗಿ ಅದು ಸಾಧ್ಯವೇ ಇಲ್ಲ ಎಂದು ತಿಳಿಸಿದೆ. ಆದರೆ, ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲು ಒಪ್ಪದ ನೌಕರರು ಬೇಡಿಕೆ ಈಡೇರುವ ತನಕವೂ ಮುಷ್ಕರ ಮಾಡುವುದಾಗಿ ಎಚ್ಚರಿಸಿದ್ದಾರೆ. ಏತನ್ಮಧ್ಯೆ ಯಶ್ ಅಂಥವರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದೇ ಆದಲ್ಲಿ ಸಾರಿಗೆ ನೌಕರರಿಗೆ ಆನೆ ಬಲ ಬಂದಂತಾಗಲಿದೆ.
ಇದನ್ನೂ ಓದಿ:
ನಿವೃತ್ತ ಬಸ್ ಚಾಲಕರ ಪುತ್ರರಾದ ಯಶ್ ಅವರೇ.. ನಮ್ಮ ಮುಷ್ಕರವನ್ನು ಬೆಂಬಲಿಸಿ: ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು
Published On - 11:41 am, Thu, 15 April 21