‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಬಿಡುಗಡೆ

2026ರ ಮಾರ್ಚ್ 19ರಂದು ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಲಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಈ ಚಿತ್ರದ ಪ್ರಚಾರ ಕಾರ್ಯ ಈಗಾಗಲೇ ಶುರು ಆಗಿದೆ. ಯಶ್ ನಟನೆಯ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಅವರ ಫಸ್ಟ್ ಲುಕ್ ರಿಲೀಸ್ ಆಗಿದೆ.

‘ಟಾಕ್ಸಿಕ್’ ಚಿತ್ರದಿಂದ ನಟಿ ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಬಿಡುಗಡೆ
Kiara Advani

Updated on: Dec 21, 2025 | 12:20 PM

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಹತ್ತಿರ ಆಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಯಶ್ ನಟಿಸಿದ ಸಿನಿಮಾ ಆದ್ದರಿಂದ ‘ಟಾಕ್ಸಿಕ್’ (Toxic) ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈಗ ‘ಟಾಕ್ಸಿಕ್’ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದರಿಂದ ಕುತೂಹಲ ಹೆಚ್ಚಿಸಲಾಗಿದೆ. ಗ್ಲಾಮರಸ್ ಆದ ಗೆಟಪ್​​ನಲ್ಲಿ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಅವರಿಗೆ ಭಾರತೀಯ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಬಾಲಿವುಡ್ ಮಾತ್ರವಲ್ಲದೇ ಸೌತ್ ಸಿನಿಮಾರಂಗದಲ್ಲೂ ಅವರು ಹೆಸರು ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಶ್ ಜೊತೆ ಅಭಿನಯಿಸಿದ್ದು, ಆ ಕಾರಣದಿಂದ ‘ಟಾಕ್ಸಿಕ್’ ಸಿನಿಮಾ ಇನ್ನಷ್ಟು ವಿಶೇಷ ಎನಿಸಿಕೊಂಡಿದೆ. ಫಸ್ಟ್ ಲುಕ್ ನೋಡಿ ಕಿಯಾರಾ ಅಡ್ವಾಣಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಅವರು ನಾಡಿಯಾ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಸರ್ಕಸ್ ಹಿನ್ನೆಲೆಯಲ್ಲಿ ಅವರ ಫಸ್ಟ್ ಲುಕ್ ಪೋಸ್ಟರ್ ಮೂಡಿಬಂದಿದೆ. ಕಿಯಾರಾ ಮುಖದಲ್ಲಿ ಏನೋ ಆತಂಕ ಕಾಣಿಸುವಂತಿದೆ. ಆ ಮೂಲಕ ಇದು ಕೇವಲ ಗ್ಲಾಮರ್ ಪಾತ್ರವಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಚಿತ್ರದಲ್ಲಿ ಕಿಯಾರಾ ಅವರ ನಟನೆಗೆ ಹೆಚ್ಚು ಮಹತ್ವ ಸಿಗಲಿದೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪಾತ್ರ ಆಗಲಿದೆ ಎಂಬ ನಿರೀಕ್ಷೆ ಇದೆ.

ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಡಿಯಾ ಎಂಬ ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ. ‘ಕೆಲವು ಪಾತ್ರಗಳು ಸಿನಿಮಾಗೆ ಮಾತ್ರ ಸೀಮಿತ ಅಲ್ಲ. ಅವು ಕಲಾವಿದರಿಗೂ ಹೊಸ ಆಯಾಮ ನೀಡುತ್ತವೆ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಅವರು ನ್ಯಾಯ ಒದಗಿಸಿದ್ದಾರೆ. ಅದಕ್ಕಾಗಿ ನನಗೆ ಅವರ ಬಗ್ಗೆ ಹೆಮ್ಮೆ ಇದೆ’ ಎಂದು ಗೀತು ಹೇಳಿದ್ದಾರೆ.

ಇದನ್ನೂ ಓದಿ: ಮಗಳಿಗೆ ಸರಾಯಾಹ್ ಎಂದು ಹೆಸರಿಟ್ಟ ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ‘ಟಾಕ್ಸಿಕ್’ ಸಿನಿಮಾ ಸಿದ್ಧವಾಗುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮುಂತಾದ ಭಾಷೆಗಳಿಗೆ ಡಬ್ ಆಗುತ್ತಿದೆ. ಈ ಸಿನಿಮಾದ ಬರವಣಿಗೆಯಲ್ಲಿ ನಿರ್ದೇಶಕಿ ಗೀತೂ ಮೋಹನ್​ದಾಸ್ ಜೊತೆ ಯಶ್ ಕೂಡ ಕೈ ಜೋಡಿಸಿದ್ದಾರೆ. ಆ ಕಾರಣದಿಂದಲೂ ಅಭಿಮಾನಿಗಳಿಗೆ ನಿರೀಕ್ಷೆ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.