
ನಟ ದರ್ಶನ್ (Darshan) ಅವರ ಅಭಿಮಾನಿಗಳು ಮಾಡಿದ ಅಶ್ಲೀಲ ಸಂದೇಶಗಳನ್ನು ನೋಡಿ ಕನ್ನಡ ಚಿತ್ರರಂಗದ ಅನೇಕರು ಗರಂ ಆಗಿದ್ದಾರೆ. ರಮ್ಯಾ ಅವರಿಗೆ ದರ್ಶನ್ ಫ್ಯಾನ್ಸ್ ಅಸಭ್ಯವಾಗಿ ಮೆಸೇಜ್ ಮಾಡಿದ್ದು, ರಮ್ಯಾ ಪರವಾಗಿ ಹಲವು ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ಪ್ರಥಮ್, ಶಿವರಾಜ್‌ಕುಮಾರ್ (Shivarajkumar), ವಿನಯ್ ರಾಜ್ಕುಮಾರ್ ಮುಂತಾದವರು ರಮ್ಯಾಗೆ ಬೆಂಬಲ ನೀಡಿದ್ದಾರೆ. ಆದರೆ ಅಣ್ಣಾವ್ರ ಕುಟುಂಬದ ಸದಸ್ಯರ ಮಾತಿಗೆ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರು ತಿರುಗೇಟು ನೀಡಿದ್ದಾರೆ. ಈ ಕುರಿತು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
‘ಮಾಧ್ಯಮಗಳಲ್ಲಿ ಮಹಿಳೆಯರನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೇ ಸುಮ್ಮನೇ ಇದ್ರಲ್ಲ, ಆವಾಗ ನಿದ್ರೆ ಮಾಡ್ತಾ ಇದ್ರಾ ಎಲ್ಲ?’ ಎಂದು ಶ್ರೀದೇವಿ ಭೈರಪ್ಪ ಅವರು ಬರೆದುಕೊಂಡಿದ್ದಾರೆ. ಇದರ ಜೊತೆ ‘ಬೂಟಾಟಿಕೆ ವ್ಯಕ್ತಿಗಳು’ ಮತ್ತು ‘ಡ್ರಾಮಾ’ ಎಂಬ ಹ್ಯಾಶ್ ಟ್ಯಾಗ್ಗಳನ್ನು ಶ್ರೀದೇವಿ ಬಳಸಿದ್ದಾರೆ.
ರಮ್ಯಾ ಪರವಾಗಿ ಪೋಸ್ಟ್ ಮಾಡಿದ್ದ ವಿನಯ್ ರಾಜ್ಕುಮಾರ್ ಅವರು, ‘ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು’ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಬಳಿಕ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಬೆಂಬಲ ನೀಡಿದರು.
‘ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖ೦ಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿ೦ದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದು’ ಎಂದು ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಮಾಡಿದ ಪೋಸ್ಟ್ ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಗಳ ಫ್ಯಾನ್ಸ್ ಪೇಜ್ಗಳಲ್ಲಿ ಅದನ್ನು ಶೇರ್ ಮಾಡಿಕೊಳ್ಳಲಾಗಿದೆ. ‘ಶಿವರಾಜ್‌ಕುಮಾರ್ ಅವರು ಶ್ರೀದೇವಿಗೆ ಈಗಲಾದರೂ ನ್ಯಾಯ ಕೊಡಿಸುತ್ತಾರಾ? ಮನೆಯಿಂದಲೇ ನ್ಯಾಯ ಶುರುವಾಗಬೇಕು’ ಎಂದು ದರ್ಶನ್ ಫ್ಯಾನ್ಸ್ ತಿವಿದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.