ಯುವರತ್ನ ಚಿತ್ರಕ್ಕೆ ತೊಂದರೆ: ಮೌನ ಮುರಿದ ಯಶ್​, ಶಿವರಾಜ್​ಕುಮಾರ್​!

| Updated By: ರಾಜೇಶ್ ದುಗ್ಗುಮನೆ

Updated on: Apr 03, 2021 | 5:36 PM

Yuvarathnaa: ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ಸರ್ಕಾರ ಹೊಸ ನಿರ್ಬಂಧಗಳನ್ನು ಹೇರಿದೆ. ಇದರಿಂದ ಚಿತ್ರರಂಗದ ವ್ಯವಹಾರಕ್ಕೆ ತೊಂದರೆ ಆಗಿದೆ. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಯುವರತ್ನ ಚಿತ್ರಕ್ಕೆ ತೊಂದರೆ: ಮೌನ ಮುರಿದ ಯಶ್​, ಶಿವರಾಜ್​ಕುಮಾರ್​!
ಶಿವರಾಜ್​ಕುಮಾರ್​ - ಯಶ್​
Follow us on

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಮಿತಿ ಹೇರಿರುವುದಕ್ಕೆ ಇಡೀ ಸ್ಯಾಂಡಲ್​ವುಡ್​ ಗರಂ ಆಗಿದೆ. ಒಂದು ವರ್ಷದ ಕಠಿಣ ಲಾಕ್​ಡೌನ್​ನಿಂದಾಗಿ ಸೊರಗಿದ್ದ ಚಿತ್ರರಂಗ ಈಗತಾನೇ ಚೇತರಿಸಿಕೊಳ್ಳಲು ಆರಂಭಿಸಿತ್ತು. ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗಲೇ ಕೊರೊನಾ ಎರಡನೇ ಅಲೆಯಿಂದಾಗಿ ತೊಂದರೆ ಆಗುತ್ತಿದೆ. ಅದರಲ್ಲೂ ಏ.1ರಂದು ಬಿಡುಗಡೆ ಆದ ಯುವರತ್ನ ಸಿನಿಮಾ ಹೆಚ್ಚು ನಷ್ಟ ಅನುಭವಿಸುವಂತಾಗಿದೆ. ಈ ಕುರಿತಾಗಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶಿವರಾಜ್​ಕುಮಾರ್​ ಕೂಡ ಟ್ವೀಟ್​ ಮಾಡಿದ್ದಾರೆ.

‘ನಮ್ಮ ಚಿತ್ರರಂಗ ಸಂಕಷ್ಟದಲ್ಲಿ ಇರುವ ಈ ಸಂದರ್ಭದಲ್ಲಿ ನಮಗೆ ಅಗತ್ಯವಾಗಿ ಬೇಕಿರುವುದನ್ನು ಸರ್ಕಾರ ಮಾಡಲಿದೆ ಎಂಬ ಭರವಸೆ ನನಗಿದೆ. ಎಲ್ಲಾ ನಿಯಮಗಳನ್ನು ಚಿತ್ರಮಂದಿರದಲ್ಲಿ ಪಾಲಿಸಲಾಗುವುದು. ಈ ಬಗ್ಗೆ ಗಮನ ಹರಸಿ ಮತ್ತು ಸಮಸ್ಯೆ ಪರಿಹರಿಸಿ’ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರಿಗೆ ಶಿವಣ್ಣ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮಲ್ಲಿ ಜಾಗೃತಿ ಮೂಡಿದೆ. ಜವಾಬ್ದಾರಿಯೂ ಇದೆ. ಹಸಿವಿಗಿಂತಲೂ ದೊಡ್ಡ ಖಾಯಿಲೆ ಇಲ್ಲ. ನಿರ್ಬಂಧನೆಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು ಮುಳುವಾಗಬಾರದು. ಚಿತ್ರರಂಗದ ಮೇಲಿನ ಹಠಾತ್​ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯುವ ಅವಕಾಶ ಇದೆ. ಚಿತ್ರರಂಗಕ್ಕೆ ಯಾಕಿಲ್ಲ? ಸೂಚನೆ ಕೊಡದೆ ಜಾರಿ ಮಾಡಿರುವ ಈ ನಿರ್ಬಂಧನೆಗಳಿಂದ ಚಿತ್ರರಂಗ ಬಲಿ’ ಎಂದು ಯಶ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೊಂದು ಶಾಕಿಂಗ್​ ಬೆಳವಣಿಗೆ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ. ‘ಮತ್ತೆ ಶೇ.50ರಷ್ಟು ಆಸನಗಳನ್ನಷ್ಟೇ ಮಾತ್ರ ಭರ್ತಿ ಮಾಡಬೇಕು ಎಂದರೆ ಈಗ ತಾನೇ ಬಿಡುಗಡೆ ಆದ ಚಿತ್ರಕ್ಕೆ ಆತಂಕ ಆಗುತ್ತದೆ. ಸರ್ಕಾರದ ನಿಯಮವನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯ ಆಗುತ್ತದೆ. ಇಂಥ ಸಂದರ್ಭವನ್ನು ಎದುರಿಸಿ ಕೂಡ ಗೆಲುವು ಸಾಧಿಸಲಿ ಎಂದು ಯುವರತ್ನ ತಂಡಕ್ಕೆ ಹಾರೈಸುತ್ತೇನೆ’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಸರ್ಕಾರದ ನಿರ್ಧಾರ ಸರಿ ಇರಬಹುದು. ಆದರೆ ಇಂಥ ಆದೇಶ ಹೊರಡಿಸುವುದಕ್ಕೂ ಮುನ್ನ ಮಾಹಿತಿ ನೀಡಬೇಕಿತ್ತು ಎಂದು ಪುನೀತ್​ ರಾಜ್​ಕುಮಾರ್​ ಹೇಳಿದ್ದಾರೆ. ಇದೇ ಮಾತನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ನಟ ಡಾಲಿ ಧನಂಜಯ ಅವರು, ‘ಮುಂಚೇನೆ ಹೇಳಿದ್ರೆ ಸಿನಿಮಾ ಬಿಡುಗಡೆನ ಮುಂದೂಡ್ತಿದ್ವಲ್ಲ ಸರ್. ಇದು ಅನ್ಯಾಯ ಅಲ್ವ?’ ಎಂದು ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಭೇಟಿಯಾಗಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಅವಕಾಶ ನೀಡಲು ಮನವಿ ಮಾಡಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ನೋಡೋಣ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

 

ಇದನ್ನೂ ಓದಿ: ಯುವರತ್ನ ನೋಡಬೇಕು, ಥಿಯೇಟರ್​ ಹೌಸ್​ ಫುಲ್​ ಮಾಡೋಕೆ ಅವಕಾಶ ಕೊಡಿ; ಸಿಎಂಗೆ ಮಕ್ಕಳಿಂದ ಮನವಿ

Yuvarathnaa: ‘ಪುನೀತ್​ ರಾಜ್​ಕುಮಾರ್​ಗೆ ಯಾಕೆ ಇಂಥ ಅನ್ಯಾಯ?’ ಸರ್ಕಾರದ ವಿರುದ್ಧ ಸಿಡಿದೆದ್ದ ಅಪ್ಪು ಫ್ಯಾನ್ಸ್​!

 

(Yuvarathnaa Theater Problem: Yash Shivarajkumar Kiccha Sudeep reaction to 50 percent occupancy rules)