ಸಂಧ್ಯಾ ಥಿಯೇಟರ್ ಕಾಲ್ತುಳಿತ: ಇನ್ನೂ ಕೋಮಾದಿಂದ ಹೊರಬಂದಿಲ್ಲ ಬಾಲಕ

Sandhya Theater stamped: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅತಿಥಿಯಾಗಿ ಬಂದ ಕಾರಣ ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ. ಘಟನೆ ನಡೆದು ಮೂರು ತಿಂಗಳಾಗಿದ್ದರೂ ಈಗಲೂ ಸಹ ಆ ಬಾಲಕ ಕೋಮಾ ಸ್ಥಿತಿಯಲ್ಲಿಯೇ ಇದ್ದಾನೆ.

ಸಂಧ್ಯಾ ಥಿಯೇಟರ್ ಕಾಲ್ತುಳಿತ: ಇನ್ನೂ ಕೋಮಾದಿಂದ ಹೊರಬಂದಿಲ್ಲ ಬಾಲಕ
Sandhya Theater Stamped

Updated on: Mar 12, 2025 | 3:51 PM

ಪುಷ್ಪ 2’ (Pshpa 2) ಸಿನಿಮಾದ ಗೆಲುವಿನ ಖುಷಿಯನ್ನು ಕಸಿದುಕೊಂಡ ಘಟನೆ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ. ‘ಪುಷ್ಪ 2’ ಸಿನಿಮಾದ ಬಿಡುಗಡೆ ಹಿಂದಿನ ದಿನ (ಡಿಸೆಂಬರ್ 04) ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋಗೆ ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಆಗಮಿಸಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ನಿಧನ ಹೊಂದಿದರು. ಅದೇ ಘಟನೆಯಲ್ಲಿ ಮೃತ ಮಹಿಳೆಯ ಪುತ್ರ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯ್ತಾದರೂ ಆ ಬಾಲಕ ಕೋಮಾಕ್ಕೆ ಹೋಗಿದ್ದು, ಘಟನೆ ನಡೆದು ಮೂರು ತಿಂಗಳಾಗಿದ್ದರೂ ಸಹ ಇನ್ನೂ ಕೋಮಾ ಸ್ಥಿತಿಯಲ್ಲಿಯೇ ಇದ್ದಾನೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಶ್ರೀತೇಜ ಅನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕನನ್ನು ಹಲವು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಯ್ತು. ಬಾಲಕನ ಆಸ್ಪತ್ರೆಗೆ ದಾಖಲಿಸಿ ಮೂರು ತಿಂಗಳಾಗಿದ್ದರೂ ಸಹ ಬಾಲಕನ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬಂದಿಲ್ಲ. ಕೆಲ ದಿನದ ಹಿಂದಷ್ಟೆ ಕಿಮ್ಸ್​ನ ವೈದ್ಯರು ಬಾಲಕ ಶ್ರೀತೇಜ ಆರೋಗ್ಯದ ಬಗ್ಗೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಾಲಕನ ಆರೋಗ್ಯದಲ್ಲಿ ತುಸುವಷ್ಟೆ ಚೇತರಿಕೆ ಬಂದಿದೆ ಎಂದಿದ್ದಾರೆ.

ವೈದ್ಯರು ಹೇಳಿರುವಂತೆ ಬಾಲಕನಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ತೆಗೆದಿದ್ದು ಶ್ರೀತೇಜ ಈಗ ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದಾನಂತೆ. ಶ್ರೀತೇಜನಿಗೆ ಎಂಡೋಸ್ಕೋಪಿಕ್ ಗ್ಯಾಸ್ಟ್ರೋಟಮಿ ಕ್ರಿಯೆಯ ಮೂಲಕ ಆಹಾರವನ್ನು ನೇರವಾಗಿ ಹೊಟ್ಟೆಗೆ ತಲುಪಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಬಾಲಕನ ಅಂಗಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ಬಾಲಕನಿಗೆ ಪ್ರತಿದಿನ ಫಿಸಿಯೋಥೆರಪಿ ಮಾಡಿಸಲಾಗುತ್ತಿದೆ. ಆದರೆ ಶ್ರೀತೇಜ ತನ್ನ ಕುಟುಂಬದವರನ್ನು ಗುರುತು ಹಿಡಿಯುತ್ತಿಲ್ಲ ಎಂದು ಸಹ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:ನಿರ್ಮಾಪಕರ ಜೊತೆ ಕಿರಿಕ್; ಸಲ್ಲುಗೆ ಮಾಡಬೇಕಿದ್ದ ಸಿನಿಮಾನ ಅಲ್ಲು ಅರ್ಜುನ್​ಗೆ ಶಿಫ್ಟ್ ಮಾಡಿದ ಅಟ್ಲಿ

ಶ್ರೀತೇಜಗೆ ಚಿಕಿತ್ಸೆ ಮುಂದುವರೆಸಲಾಗಿದ್ದು ಶ್ರೀತೇಜರ ಆರೋಗ್ಯದ ಸಂಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಅಲ್ಲು ಅರ್ಜುನ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಈಗಾಗಲೇ ಘೋಷಣೆ ಮಾಡಿದ್ದಾರೆ. ಅಲ್ಲದೆ ಶ್ರೀತೇಜರ ತಾಯಿಯ ನಿಧನದ ಬಗ್ಗೆ ಸಂತಾಪ ಸೂಚಿಸಿ ಈಗಾಗಲೇ ನಗದು ಹಣವನ್ನು ಶ್ರೀತೇಜರ ತಂದೆಗೆ ನೀಡಿದ್ದಾರೆ.

ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಅಲ್ಲು ಅರ್ಜುನ್, ಸಂಧ್ಯಾ ಥಿಯೇಟರ್ ಮಾಲೀಕ, ಅಲ್ಲು ಅರ್ಜುನ್​ರ ಬೌನ್ಸರ್ ಇನ್ನೂ ಕೆಲವರ ಮೇಲೆ ಕೇಸು ನಮೂದಾಗಿತ್ತು. ಅಲ್ಲದೆ ಅಲ್ಲು ಅರ್ಜುನ್ ಸೇರಿ ಹಲವರನ್ನು ಬಂಧಿಸಲಾಗಿತ್ತು. ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ದಿನ ಕಳೆಯಬೇಕಾಯ್ತು. ಅದಾದ ಬಳಿಕ ಈ ಘಟನೆ ತೆಲಂಗಾಣ ಸರ್ಕಾರ vs ಚಿತ್ರರಂಗ ಎಂಬಂತಾಗಿ ಹಲವು ವಿಧದ ಹೇಳಿಕೆ, ಪ್ರತಿಹೇಳಿಕೆಗಳು ಹೊರಬಿದ್ದವು. ಕಾಂಗ್ರೆಸ್ ಕಾರ್ಯಕರ್ತರು, ಅಲ್ಲು ಅರ್ಜುನ್ ಮನೆಯ ಮೇಲೆ ದಾಳಿ ಸಹ ಮಾಡಿದರು. ‘ಪುಷ್ಪ 2’ ಸಿನಿಮಾ ಐತಿಹಾಸಿಕ ವಿಜಯ ಸಾಧಿಸಿದರೂ ಸಹ ಅಲ್ಲು ಅರ್ಜುನ್ ಅದನ್ನು ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ