
ಸಿನಿಮಾರಂಗ (Cinema) ಪುರುಷ ಪ್ರಧಾನವಾದುದು, ಇಲ್ಲಿ ಮಹಿಳೆಯರು ವಿಶೇಷವಾಗಿ ನಾಯಕಿಯರು ತೀವ್ರ ಟೀಕೆ, ವಿಮರ್ಶೆ, ನಿಂದನೆ, ದೌರ್ಜನ್ಯಕ್ಕೆ ಒಳಗಾಗುತ್ತಾರೆ. ನಟಿಯರನ್ನು ಕೀಳಾಗಿ ನಡೆಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ಚಿತ್ರರಂಗದಲ್ಲಿ ಇವೆ. ಈ ಸಾಮಾಜಿಕ ಜಾಲತಾಣ ಬಂದ ಬಳಿಕವಂತೂ ನಟಿಯರ ಬಗ್ಗೆ ನಿಂದನೆ, ಕೀಳು ಹೇಳಿಕೆ ಇನ್ನಷ್ಟು ಹೆಚ್ಚಾಗಿದೆ. ಈ ಆನ್ಲೈನ್ ಕಿರುಕುಳದಿಂದ ಯಾವ ನಟಿಯರೂ ತಪ್ಪಿಸಿಕೊಳ್ಳಲಾಗಿಲ್ಲ. ಎಷ್ಟೋ ಮಂದಿ ನಟಿಯರು, ‘ಇದು ಸಾಮಾನ್ಯ’ ಎಂದು ಕೈತೊಳೆದು ಸುಮ್ಮನಾಗಿಬಿಟ್ಟಿದ್ದಾರೆ. ಆದರೆ ಕೆಲವರು ಮಾತ್ರ ಆನ್ಲೈನ್ ಕಿರುಕುಳದ ವಿರುದ್ಧ ಗಟ್ಟಿ ದನಿ ಎತ್ತುತ್ತಿದ್ದಾರೆ.
ನಟಿ ಸೀರತ್ ಕಪೂರ್ ಇಂಥಹಾ ಒಂದು ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಸೀರತ್ ಕಪೂರ್ ಗ್ಲಾಮರಸ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಸೀರತ್ ಅವರು ನಟ ಅಲ್ಲು ಅರ್ಜುನ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದರು. ಖಾಸಗಿ ವಿಮಾನದಲ್ಲಿ ಅಲ್ಲು ಅರ್ಜುನ್ ಪಕ್ಕ ಕೂತು ತೆಗೆಸಿಕೊಂಡಿರುವ ಚಿತ್ರ ಅದಾಗಿತ್ತು. ಚಿತ್ರದಲ್ಲಿ ಸೀರತ್ ಕಪೂರ್ ತುಸು ಹಾಟ್ ಆಗಿ ಕಾಣುತ್ತಿದ್ದರು. ಅಲ್ಲು ಅರ್ಜುನ್ ಎಂದಿನಂತೆ ಸ್ಟೈಲ್ ಆಗಿ ಸ್ಮೈಲ್ ಮಾಡುತ್ತಾ ಫೋಟೊಗೆ ಫೋಸು ನೀಡಿದ್ದರು.
ಆದರೆ ಈ ಚಿತ್ರಕ್ಕೆ ಹಲವರು ಹಲವು ರೀತಿಯ ಕಮೆಂಟ್ಗಳನ್ನು ಮಾಡಿದ್ದರು. ಒಬ್ಬ ವ್ಯಕ್ತಿಯಂತೂ ‘ಸೀರತ್, ಅಲ್ಲು ಅರ್ಜುನ್ರ ‘ಆಸ್ತಿ’ (ಪ್ರಾಪರ್ಟಿ)’ ಎಂದು ಕಮೆಂಟ್ ಮಾಡಿದ್ದ. ನೆಟ್ಟಿಗನ ಕಮೆಂಟಿನಿಂದ ಸಿಟ್ಟಿಗೆದ್ದ ನಟಿ, ಆತನಿಗೆ ಅಲ್ಲಿಯೇ ಉತ್ತರ ಕೊಟ್ಟಿದ್ದಾರೆ. ‘ಒಬ್ಬ ಮಹಿಳೆ ಯಾವುದೇ ವ್ಯಕ್ತಿಯ ಆಸ್ತಿ ಆಗಿರುವುದಿಲ್ಲ. ಆಕೆಗೆ ಅವಳದ್ದೇ ಆದ ವ್ಯಕ್ತಿತ್ವ ಇದೆ, ಅವಳದ್ದೇ ಆದ ಗುರುತು ಇದೆ. ಆಕೆ ಆಕೆಗಷ್ಟೇ ಸ್ವಂತ, ಬೇರೆ ಯಾರಿಗೂ ಅಲ್ಲ, ಮಹಿಳೆಯ ಘನತೆಯನ್ನು ಗೌರವಿಸಿ, ಆಕೆಯನ್ನು ವಸ್ತುವಿನಂತೆ ನೋಡಬೇಡಿ’ ಎಂದಿದ್ದಾರೆ.
ಇದನ್ನೂ ಓದಿ:ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್
ಸೀರತ್ ಕಪೂರ್, ಪಂಜಾಬಿ ಮೂಲದವರಾದರೂ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರನ್ ರಾಜಾ ರನ್’, ‘ಟೈಗರ್’, ‘ಕೊಲಂಬಸ್’, ‘ರಾಜು ಗಾರಿ ಗದಿ’, ‘ಒಕ್ಕ ಕ್ಷಣಂ’, ‘ಮನಮೆ’, ‘ಉಷಾ ಪರಿಣಯಂ’ ಇನ್ನೂ ಕೆಲ ಸಿನಿಮಾಗಳಲ್ಲಿ ಸೀರತ್ ಅವರು ನಾಯಕಿಯಾಗಿ ನಟಿಸಿದ್ದಾರೆ. 2014 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಸೀರತ್ ಕಪೂರ್, ಈ ವರೆಗೆ ಕೇವಲ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, 10ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:53 pm, Wed, 13 May 26