
ರಾಣಾ ದಗ್ಗುಬಾಟಿ (Rana Daggubati) ಇಂದು ಪ್ಯಾನ್ ಇಂಡಿಯಾ (Pan India) ಸ್ಟಾರ್ ನಟ. ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಲೀಡರ್’ ಹೆಸರಿನ ಅದ್ಭುತ ರಾಜಕೀಯ ಥ್ರಿಲ್ಲರ್ ಸಿನಿಮಾ ಮೂಲಕ. ಒಂದೇ ಒಂದು ಫೈಟ್, ರೊಮ್ಯಾಂಟಿಕ್ ಹಾಡುಗಳಿಲ್ಲದ ಆದರೆ ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ಕೂತು ನೋಡುವಂತೆ ಮಾಡಿದ್ದ ಸಿನಿಮಾ ಅದು. ಹಲವಾರು ರಾಜಕೀಯ ಥ್ರಿಲ್ಲರ್ ಸಿನಿಮಾಗಳಿಗೆ ಹಾದಿ ಮಾಡಿಕೊಟ್ಟ ಸಿನಿಮಾ ಅದು. 2010 ರಲ್ಲಿ ಬಿಡುಗಡೆ ಆಗಿದ್ದ ಆ ಸಿನಿಮಾದ ಸೀಕ್ವೆಲ್ ಬಗ್ಗೆ ಇದೀಗ ನಿರ್ದೇಶಕ ಶೇಖರ್ ಕಮ್ಮುಲ ಮಾತನಾಡಿದ್ದಾರೆ.
ಅವಿಭಜಿತ ಆಂಧ್ರ ಪ್ರದೇಶದ ರಾಜಕೀಯದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಿದ ಸಿನಿಮಾ ‘ಲೀಡರ್’ ಜೊತೆಗೆ ರಾಜಕೀಯ ಜಾಗೃತಿ ಮೂಡಿಸಲು ಸಹ ಈ ಸಿನಿಮಾ ಕಾರಣವಾಗಿತ್ತು. ಶೇಖರ್ ಕಮ್ಮುಲ ಈ ಸಿನಿಮಾದ ನಿರ್ದೇಶನ ಮಾಡಿದ್ದರು. ‘ಲೀಡರ್ 2’ ಸಿನಿಮಾ ಬರಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಇದೀಗ ಶೇಖರ್ ಕಮ್ಮುಲ ನಿರ್ದೇಶನದ ‘ಕುಬೇರ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ‘ಲೀಡರ್ 2’ ಸಿನಿಮಾದ ಬಗ್ಗೆ ಶೇಖರ್ ಕಮ್ಮುಲ ಮಾತನಾಡಿದ್ದಾರೆ.
‘ಲೀಡರ್’ ಸಿನಿಮಾದ ಸೀಕ್ವೆಲ್ ಮಾಡುವ ಆಲೋಚನೆ ನನಗೆ ಇತ್ತು. ಆದರೆ ಕಾಲಾಂತರದಲ್ಲಿ ಭಾರತದ ರಾಜಕೀಯ ಬದಲಾಗಿದೆ. ಜನಗಳು ಸಹ ಬದಲಾಗಿದ್ದಾರೆ. ಈಗ ಜನರು ರಾಜಕಾರಣಿಗಳಿಗಿಂತಲೂ ಹೆಚ್ಚಿನವರಾಗಿಬಿಟ್ಟಿದ್ದಾರೆ. ಹೀಗಿರುವಾಗ ‘ಲೀಡರ್ 2’ ಸಿನಿಮಾ ಮಾಡಲು ಸರಿಯಾದ ಮತ್ತು ಗಟ್ಟಿಯಾದ ಕಾರಣ ಅಥವಾ ಸಮಸ್ಯೆ ಸಿಗಬೇಕಿದೆ. ಅದರ ಮೇಲೆ ಕತೆಯನ್ನು ರಚಿಸಿ, ಸಿನಿಮಾ ಮಾಡಬಹುದು, ನನ್ನ ಬಳಿ ಈಗಾಗಲೇ ಒಂದು ಚಿತ್ರಕತೆ ಇದೆ, ಆದರೆ ಅದು ಈಗಿನ ರಾಜಕೀಯ ವ್ಯವಸ್ಥೆಯನ್ನು ಪ್ರತಿನಿಧಿಸುತ್ತದೆ ಎಂಬುದು ಖಾತ್ರಿಯಿಲ್ಲ. ‘ಲೀಡರ್’ ಸಿನಿಮಾದ ಸೀಕ್ವೆಲ್, ಈಗಿನ ರಾಜಕೀಯ ವ್ಯವಸ್ಥೆಯ ಪ್ರತಿಬಿಂಬ ಆಗಿರಬೇಕೆ ಹೊರತು ಹಳೆಯ ಕಾಲದ ರಾಜಕೀಯ ವ್ಯವಸ್ಥೆಯ ಮೆಲುಕು ಎಂಬಂತಾಗಬಾರದು’ ಎಂದಿದ್ದಾರೆ.
ಇದನ್ನೂ ಓದಿ:ಧನುಶ್-ರಶ್ಮಿಕಾ ಮಂದಣ್ಣ ಸಿನಿಮಾಕ್ಕೆ ಹೆಸರು ಸಿಕ್ಕಿತು
ಶೇಖರ್ ಕಮ್ಮುಲ ನಿರ್ದೇಶಿಸಿರುವ ‘ಕುಬೇರ’ ಸಿನಿಮಾ ಜೂನ್ 20ಕ್ಕೆ ತೆರೆಗೆ ಬರಲಿದೆ. ಸಿನಿಮಾನಲ್ಲಿ ಧನುಶ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಬಳಿಕ ನಟ ನಾನಿ ಜೊತೆಗೆ ಹೊಸ ಸಿನಿಮಾ ಒಂದನ್ನು ಶೇಖರ್ ಕಮ್ಮುಲ ಮಾಡಲಿದ್ದಾರೆ. ಅದರ ಬಳಿಕವಷ್ಟೆ ಅವರು ‘ಲೀಡರ್ 2’ ಸಿನಿಮಾದ ಬಗ್ಗೆ ಯೋಚಿಸುವ ಸಾಧ್ಯತೆ ಇದೆ. ಅಲ್ಲದೆ, ಪ್ರಸ್ತುತ ಕಾಲದಲ್ಲಿ ರಾಜಕೀಯದ ಬಗ್ಗೆ ಸಿನಿಮಾ ಮಾಡುವುದು ಮತ್ತು ಅದು ಎಲ್ಲರಿಗೂ ಇಷ್ಟವಾಗುವಂತೆ ಮಾಡುವುದು ಬಹುತೇಕ ಅಸಾಧ್ಯ ಎನ್ನಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ