
ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಲಲಿತಾ (KPAC Lalitha) ಅವರು ನಿಧನರಾಗಿದ್ದಾರೆ. ಕಳೆದು ಕೆಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ (ಫೆ.22) ಕೊನೆಯುಸಿರೆಳೆದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಇಬ್ಬರು ಮಕ್ಕಳನ್ನು ಲಲಿತಾ ಅಗಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ (KPAC Lalitha Death) ಚಿತ್ರರಂಗದ ಸೆಲೆಬ್ರಿಟಿಗಳು, ಅಭಿಮಾನಿಗಳು ಮಾತ್ರವಲ್ಲದೇ ರಾಜಕೀಯ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ. ‘ಕೇರಳ ಪೀಪಲ್ಸ್ ಆರ್ಟ್ ಕ್ಲಬ್’ ರಂಗತಂಡದ ಮೂಲಕ ಅಭಿನಯ ಆರಂಭಿಸಿದ್ದ ಲಲಿತಾ ಅವರು ಪ್ರತಿಭಾವಂತ ನಟಿ ಆಗಿದ್ದರು. 1969ರಲ್ಲಿ ಮಲಯಾಳಂ ಚಿತ್ರರಂಗಕ್ಕೆ (Malayalam Film Industry) ಅವರು ಪಾದಾರ್ಪಣೆ ಮಾಡಿದ್ದರು. ಹಲವು ಬಗೆಯ ಪಾತ್ರಗಳಿಂದ ಅವರು ಜನಮನ ಗೆದ್ದಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಲಲಿತಾ, ಯಾವ ಪಾತ್ರ ಕೊಟ್ಟರೂ ನ್ಯಾಯ ಒದಗಿಸುತ್ತಿದ್ದರು. ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ಅವರು 1983ರಲ್ಲಿ ಕಮ್ಬ್ಯಾಕ್ ಮಾಡಿದ್ದರು. ಲಲಿತಾ ಅವರ ನಿಧನದಿಂದ ಓರ್ವ ಪ್ರತಿಭಾವಂತ ನಟಿಯನ್ನು ಕಳೆದುಕೊಂಡು ಮಲಯಾಳಂ ಚಿತ್ರರಂಗ ಬಡವಾಗಿದೆ.
ಲಲಿತಾ ಅವರ ಮೂಲ ಹೆಸರು ಮಹೇಶ್ವರಿ ಅಮ್ಮ. ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಹೊಂದಿದ್ದ ಲಲಿತಾ ಅವರನ್ನು ಎಲ್ಲರೂ ಗೌರವದಿಂದ ಕಾಣುತ್ತಿದ್ದರು. ಎರಡು ಬಾರಿ ‘ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ’ ಪಡೆದಿದ್ದ ಅವರು ಹೊಸ ತಲೆಮಾರಿನ ಅನೇಕ ನಟಿಯರಿಗೆ ಮಾದರಿ ಆಗಿದ್ದರು. ನಾಲ್ಕು ಬಾರಿ ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್ಫೇರ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಲಿತಾ ಅವರನ್ನು ಅರಸಿ ಬಂದಿದ್ದವು. 550ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಪೃಥ್ವಿರಾಜ್ ಸುಕುಮಾರನ್, ಮಂಜು ವಾರಿಯರ್, ಕೀರ್ತಿ ಸುರೇಶ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಲಲಿತಾ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಹಿರಿಯ ನಟಿಯ ಜೊತೆಗೆ ತಮಗೆ ಇದ್ದ ಒಡನಾಟವನ್ನು ಸೋಶಿಯಲ್ ಮೀಡಿಯಾ ಮೂಲಕ ಸ್ಮರಿಸಿಕೊಂಡಿದ್ದಾರೆ. ‘ನಿಮ್ಮ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವಾಗಿತ್ತು. ನಾನು ಕಂಡ ಅತ್ಯುತ್ತಮ ಕಲಾವಿದರಲ್ಲಿ ನೀವೂ ಒಬ್ಬರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಆಂಟಿ’ ಎಂದು ಪೃಥ್ವಿರಾಜ್ ಸುಕುಮಾರನ್ ಪೋಸ್ಟ್ ಮಾಡಿದ್ದಾರೆ.
Extremely saddened to hear about the passing of the legendary KPAC Lalitha aunty.
My heartfelt condolences to the family. pic.twitter.com/nGqxO5tpGb
— Keerthy Suresh (@KeerthyOfficial) February 22, 2022
Rest in peace Lalitha aunty! It was a privilege to have shared the silver screen with you! One of the finest actors I’ve known. ??#KPACLalitha pic.twitter.com/zAGeRr7rM0
— Prithviraj Sukumaran (@PrithviOfficial) February 22, 2022
‘ಲಲಿತಾ ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಗಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು’ ಎಂದು ನಟಿ ಕೀರ್ತಿ ಸುರೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಲಲಿತಾ ಬಗೆಗಿನ ನೆನಪುಗಳನ್ನು ನಟಿ ಮಂಜು ವಾರಿಯರ್ ಅವರು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ:
‘ಕಲಾತಪಸ್ವಿ’ ರಾಜೇಶ್ ಅಂತ್ಯಸಂಸ್ಕಾರ; ಮಾವನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಅರ್ಜುನ್ ಸರ್ಜಾ
ಪುನೀತ್ ಮಾವ, ಅಶ್ವಿನಿ ತಂದೆ ಹೃದಯಾಘಾತದಿಂದ ನಿಧನ; ರಾಜ್ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ
Published On - 8:48 am, Wed, 23 February 22