ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್ಕುಮಾರ್ (Geetha Shivarajkumar) ಅವರು ಕಣಕ್ಕೆ ಇಳಿಯುತ್ತಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ. ಅವರ ಪರವಾಗಿ ಕನ್ನಡ ಚಿತ್ರರಂಗದ ಅನೇಕರು ಬೆಂಬಲ ನೀಡುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಪ್ರದರ್ಶಕರು ಹಾಗು ವಿತರಕರು ಸೇರಿದಂತೆ ಹಲವರು ಇಂದು (ಮಾರ್ಚ್ 18) ಶಿವರಾಜ್ಕುಮಾರ್ (Shivarajkumar) ಮತ್ತು ಗೀತಾ ಶಿವರಾಜ್ಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ಮಾತನಾಡಿದ ಶಿವರಾಜ್ಕುಮಾರ್ ಅವರು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
‘ಇವತ್ತು ಒಂದು ಪರಿಪೂರ್ಣತೆ ಕಾಣಿಸುತ್ತಿದೆ. ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಅಂತ ಅಪ್ಪಾಜಿ ಹೇಳುತ್ತಾ ಇರುತ್ತಾರೆ. ನಟರು, ನಿರ್ದೇಶಕರು, ನಿರ್ಮಾಪಕರು ಮಾತ್ರವಲ್ಲ. ಚಿತ್ರರಂಗ ಎಂದರೆ ಪ್ರದರ್ಶಕರು, ವಿತರಕರು ಕೂಡ ಬರುತ್ತಾರೆ. ಎಲ್ಲರೂ ಸೇರಿ ಕುಟುಂಬ ಆಗುತ್ತದೆ. ಆ ಇಡೀ ಕುಟುಂಬ ಇವತ್ತು ಗೀತಾ ಪರವಾಗಿ ನಿಂತಿದ್ದಕ್ಕೆ ನಮಗೆ ಹೆಮ್ಮೆ ಆಗುತ್ತದೆ. ಇದಕ್ಕೆ ನಾವು ಧನ್ಯ’ ಎಂದು ಶಿವರಾಜ್ಕುಮಾರ್ ಮಾತು ಆರಂಭಿಸಿದರು.
‘ಮನಸ್ಸು ಇದ್ದಲ್ಲಿ ಮಾರ್ಗ ಇರುತ್ತದೆ ಅಂತ ನಾನು ಗೀತಾಗೆ ಹೇಳುತ್ತೇನೆ. ಅನುಭವ ಅನ್ನೋದು ಮುಖ್ಯವಲ್ಲ. ಹೊಸತನವೇ ಅನುಭವ. ಹೊಸತನವನ್ನು ಹುಡುಕಿಕೊಂಡು ಹೋದಾಗಲೇ ಹೊಸ ರೂಪ ಸಿಗುತ್ತದೆ. ಈಗಾಗಲೇ ಪಳಗಿದ್ದರೆ ಮಾತ್ರ ಸಾಲದು. ಒಂದು ಭರವಸೆ, ನಂಬಿಕೆ ಬೇಕು. ಇವರು ಕೆಲಸ ಮಾಡುತ್ತಾರೆ ಎಂಬ ಭರವಸೆ ಜನರಿಗೆ ಬಂದರೆ ಅನುಭವ ಎಂಬುದು ಗಣನೆಗೆ ಬರುವುದಿಲ್ಲ. ಒಳ್ಳೆಯ ಹೃದಯದಿಂದ ನಾವು ಕೆಲಸ ಮಾಡುತ್ತೇವೆ ಎಂಬುದನ್ನು ಜನರಿಗೆ ಹೇಳಬೇಕು’ ಎಂದು ಶಿವಣ್ಣ ಹೇಳಿದ್ದಾರೆ.
‘ಸಾಕಷ್ಟು ಜನರು ಏನೇನೋ ಕೇಳಬಹುದು. ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅಪ್ಪಾಜಿಗೆ ರಾಜಕೀಯ ಆಗುತ್ತಿರಲಿಲ್ಲ ಅಂತ ಕೆಲವರು ಹೇಳ್ತಾರೆ. ಹಾಗೇನೂ ಇಲ್ಲ. ಯಾವುದೇ ಸಮಾರಂಭ ಆಗಲಿ, ಯಾವುದೇ ಮುಖ್ಯಮಂತ್ರಿ ಆಗಲಿ, ಮೊದಲು ದೊಡ್ಮನೆಗೆ ಬಂದು ಅಪ್ಪಾಜಿ ಜೊತೆ ಮಾತಾಡುತ್ತಿದ್ದರು. ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ರಾಜಕೀಯದ ವ್ಯಕ್ತಿಗಳು ಬೇಕು. ಇಲ್ಲಾಂದ್ರೆ ನನಗೆ ಯಾಕೆ ಬಂಗಾರಪ್ಪನ ಮಗಳು ತರಬೇಕು ಹೇಳಿ? ಅವರು ರಾಜಕೀಯವನ್ನು ಯಾವಾಗಲೂ ತಪ್ಪು ಅಂತ ಹೇಳಿಲ್ಲ’ ಎಂದಿದ್ದಾರೆ ಶಿವಣ್ಣ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೆದ್ದೇ ಗೆಲ್ಲುತ್ತೇನೆ: ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್
‘ಅಪ್ಪಾಜಿಗೆ ವೈಯಕ್ತಿಕವಾಗಿ ರಾಜಕೀಯ ಆಗುತ್ತಿರಲಿಲ್ಲ ಅಷ್ಟೇ. ತಮ್ಮ ಕೆಲಸ ನಟನೆ ಅಂತ ಹೇಳಿದ್ದರು. ನನಗೂ ರಾಜಕೀಯಕ್ಕೆ ಬನ್ನಿ ಅಂತ ಕೆಲವರು ಕರೆದಿದ್ದರು. ನನಗೆ ಬೇಡ ಅಂದೆ. ಅಪ್ಪಾಜಿ ನನಗೆ ಕೊಟ್ಟ ಬಳುವಳಿ ಸಿನಿಮಾ. ಆದರೆ ಗೀತಾಗೆ ಹಾಗಲ್ಲ. ಅವರ ತಂದೆಯ ರಕ್ತನೂ ಇದೆ. ಅದೊಂದು ಜವಾಬ್ದಾರಿ ಅವರಿಗೆ ಇದೆ. ಬರೀ ಗಂಡಸರಿಗೆ ಮಾತ್ರ ಜವಾಬ್ದಾರಿ ಇರಬೇಕಾ? ಹೆಣ್ಮಕ್ಕಳಿಗೆ ಇರಬಾರದಾ? ಕರ್ನಾಟಕದ ಮಹಿಳೆಯರು ರಾಜಕೀಯದಲ್ಲಿ ಕಡಿಮೆ ಜನ ಇದ್ದಾರೆ. ಈಗ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.