ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಸೋತಾಗ ಕೆಲವರು ಕುಗ್ಗುತ್ತಾರೆ. ಗೆದ್ದಾಗ ಬೀಗುತ್ತಾರೆ. ಅದು ಕೂಡ ಸಹಜ. ಆದರೆ ಒಂದು ಯಶಸ್ಸು ಸಿಕ್ಕ ಮಾತ್ರಕ್ಕೆ ಅಹಂಕಾರ ತಲೆಗೆ ಏರಿಸಿಕೊಳ್ಳಬಾರದು. ಆ ರೀತಿ ವರ್ತಿಸಿದ ಓರ್ವ ಹೀರೋ ಬಗ್ಗೆ ಈಗ ಟಾಲಿವುಡ್ (Tollywood) ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ದೊಡ್ಡ ಬಜೆಟ್ನ ಸಿನಿಮಾಗಳು ನೆಲ ಕಚ್ಚುತ್ತಿರುವ ಈ ಕಾಲದಲ್ಲಿ ಸಣ್ಣ ಬಜೆಟ್ನ ಕೆಲವು ಚಿತ್ರಗಳು ಗೆದ್ದಿವೆ. ಅಂಥ ಒಂದು ಸಿನಿಮಾದ ಹೀರೋಗೆ ಆ್ಯಟಿಟ್ಯೂಡ್ ಬಂದಿದೆ ಎಂದು ‘ಬಾಹುಬಲಿ’ (Baahubali) ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ (Shobu Yarlagadda) ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದರು.
‘ಯಶಸ್ಸನ್ನು ತಲೆಗೆ ಏರಿಸಿಕೊಳ್ಳಬಹುದು ಅಥವಾ ಸರಿಯಾಗಿ ನಿಭಾಯಿಸಲೂಬಹುದು. ಇತ್ತೀಚೆಗೆ ಯಶಸ್ಸು ಪಡೆದ ಓರ್ವ ಉದಯೋನ್ಮುಖ ನಟ ಆ್ಯಟಿಟ್ಯೂಡ್ ತೋರಿಸುತ್ತಿದ್ದೇನೆ. ಕಥೆ ಹೇಳಲು ಬಂದ ಹೊಸ ನಿರ್ದೇಶಕರಿಗೆ ಆತ ಕನಿಷ್ಠ ಗೌರವವನ್ನೂ ನೀಡಿಲ್ಲ. ಈ ವರ್ತನೆಯಿಂದ ತನ್ನ ವೃತ್ತಿಜೀವನಕ್ಕೆ ಒಳ್ಳೆಯದಾಗಲ್ಲ ಎಂಬುದು ಇಂದಲ್ಲ ನಾಳೆ ಅವನಿಗೆ ಅರ್ಥ ಆಗುತ್ತದೆ’ ಎಂದು ಶೋಭು ಯರ್ಲಗಡ್ಡ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ‘ಎಲ್ಲರನ್ನೂ ಖುಷಿಪಡಿಸಲು ನಾನು ಬಿರಿಯಾನಿ ಅಲ್ಲ’; ‘ಬೇಬಿ’ ವಿವಾದಕ್ಕೆ ವಿಶ್ವಕ್ ಸೇನ್ ಪ್ರತಿಕ್ರಿಯೆ
ಈ ಟ್ವೀಟ್ನಲ್ಲಿ ಶೋಭು ಯರ್ಲಗಡ್ಡ ಅವರು ಯಾವುದೇ ನಟನ ಹೆಸರು ಪ್ರಸ್ತಾಪ ಮಾಡಿಲ್ಲ. ನಟ ವಿಶ್ವಕ್ ಸೇನ್ ಬಗ್ಗೆ ಅವರು ಹೇಳಿರಬಹುದು ಎಂದು ಕೆಲವರು ಊಹಿಸಿದರು. ಆದರೆ ಅವರು ತೀರಾ ಹೊಸ ನಟ ಅಲ್ಲ ಎಂಬ ಕಾರಣಕ್ಕೆ ಅವರ ಬಗ್ಗೆ ಹೇಳಿದ್ದಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇನ್ನು, ಕೆಲವೇ ದಿನಗಳ ಹಿಂದೆ ‘ಬೇಬಿ’ ಸಿನಿಮಾದ ಮೂಲಕ ಆನಂದ್ ದೇವರಕೊಂಡ ಸಕ್ಸಸ್ ಕಂಡಿದ್ದಾರೆ. ಅವರ ಬಗ್ಗೆ ಶೋಭು ಯರ್ಲಗಡ್ಡ ಅವರು ಟ್ವೀಟ್ ಮಾಡಿರಬಹುದೇ ಎಂಬ ಅನುಮಾನ ಕೂಡ ಮೂಡಿದೆ.
ಆ ನಟ ಯಾರು ಎಂಬುದನ್ನು ಬಹಿರಂಗಪಡಿಸಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅನೇಕರು ತಮ್ಮ ಮನಸ್ಸಿಗೆ ಬಂದಂತೆ ಕಮೆಂಟ್ ಮಾಡಿದರು. ಇದು ದೊಡ್ಡ ವಿವಾದ ಆಗುವ ಸಾಧ್ಯತೆ ಇರುವ ಕಾರಣಕ್ಕೋ ಏನೋ ಶೋಭು ಯರ್ಲಗಡ್ಡ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದರು. ಅಷ್ಟುಹೊತ್ತಿಗಾಗಲೇ ಅದರ ಸ್ಕ್ರೀನ್ ಶಾಟ್ಗಳು ವೈರಲ್ ಆದವು. ಅಂಥ ಆ್ಯಟಿಟ್ಯೂಡ್ ತೋರಿಸಿದ ಉದಯೋನ್ಮುಖ ನಟ ಯಾರು ಎಂಬ ಪ್ರಶ್ನೆಯು ಸಿನಿಪ್ರಿಯರ ತಲೆಯಲ್ಲಿ ಈಗ ಕೊರೆಯುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.