‘ಪಠಾಣ್’ ಸಿನಿಮಾ (Pathan Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ಶಾರುಖ್ ಖಾನ್ ಹಾಗೂ ಜಾನ್ ಅಬ್ರಾಹಂ ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಇವರ ವೃತ್ತಿಜೀವನದ ತೂಕ ಹೆಚ್ಚಿದೆ. ಈ ಚಿತ್ರದ ಮೂಲಕ ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ಅವರು ಗೆದ್ದು ಬೀಗಿದ್ದಾರೆ. ಮಲ್ಟಿ ಸ್ಟಾರರ್ ಸಿನಿಮಾ ಮಾಡುವುದರಲ್ಲಿ ಸಿದ್ದಾರ್ಥ್ ಎತ್ತಿದ ಕೈ. ಈಗ ಅವರ ಮುಂದಿನ ಸಿನಿಮಾ ಬಗ್ಗೆ ಜನರಿಗೆ ಕುತೂಹಲ ಇದೆ. ಅವರ ಮುಂದಿನ ಪ್ರಾಜೆಕ್ಟ್ನಲ್ಲೂ ಇಬ್ಬರು ಸ್ಟಾರ್ ಹೀರೋಗಳು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಒಂದು ದೊಡ್ಡ ಹಿಟ್ ಕೊಟ್ಟ ನಂತರದಲ್ಲಿ ನಿರ್ದೇಶಕರ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗುತ್ತದೆ. ಸಿದ್ದಾರ್ಥ್ ಆನಂದ್ ಅವರ ನಿರ್ದೇಶನದ ‘ವಾರ್’ ಚಿತ್ರ ಹಿಟ್ ಆಯಿತು. ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಯಶಸ್ಸು ಕಂಡ ಬಳಿಕ ಅವರ ಮುಂದಿನ ಸಿನಿಮಾ ‘ಪಠಾಣ್’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು. ಈ ಸಿನಿಮಾ ಗೆದ್ದಿದೆ. ಈಗ ಸಿದ್ದಾರ್ಥ್ ಆನಂದ್ ಮುಂದಿನ ಪ್ರಾಜೆಕ್ಟ್ನಲ್ಲಿ ಹೃತಿಕ್ ರೋಷನ್ ಹಾಗೂ ಪ್ರಭಾಸ್ ನಟಿಸಲಿದ್ದಾರೆ ಎನ್ನಲಾಗಿದೆ.
ಪ್ರಭಾಸ್ ಮುಂದಿನ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ಬಂಡವಾಳ ಹೂಡುತ್ತಿದೆ ಅನ್ನೋದು ಇತ್ತೀಚೆಗೆ ರಿವೀಲ್ ಆಗಿತ್ತು. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ ಅನ್ನೋದು ಕೂಡ ಗೊತ್ತಾಗಿತ್ತು. ವಿಶೇಷ ಎಂದರೆ ಪ್ರಭಾಸ್ ಜತೆ ಹೃತಿಕ್ ಕೂಡ ನಟಿಸಲಿದ್ದಾರೆ. ಈ ಮೊದಲು ಹೃತಿಕ್ ರೋಷನ್ ಜತೆ ಸಿದ್ದಾರ್ಥ್ ಆನಂದ್ ಕೆಲಸ ಮಾಡಿದ್ದರು. ಈಗ ಹೃತಿಕ್ ಜತೆ ಮತ್ತೊಮ್ಮೆ ಕೈ ಜೋಡಿಸಲು ಅವರು ರೆಡಿ ಆಗಿದ್ದಾರೆ.
ಇದನ್ನೂ ಓದಿ: ಬಾಲಿವುಡ್ಗೆ 2023ರ ಮೊದಲ ಬ್ಲಾಕ್ ಬಸ್ಟರ್ ನೀಡಿದ ‘ಪಠಾಣ್’ ನಿರ್ದೇಶಕ ಸಿದ್ದಾರ್ಥ್ ಆನಂದ್
ಸಿದ್ದಾರ್ಥ್ ಆನಂದ್ ಅವರು ಚಿತ್ರರಂಗದಲ್ಲಿ ಗೆಲ್ಲುವ ಕುದುರೆ ಆಗಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿವೆ. ಈ ಕಾರಣಕ್ಕೆ ನಿರ್ಮಾಪಕರು ದೊಡ್ಡ ಮೊತ್ತದ ಹಣ ಹೂಡಲು ಮುಂದೆ ಬರುತ್ತಿದ್ದಾರೆ. ಈಗ ಪ್ರಭಾಸ್ ಜತೆ ಅವರು ಮಾಡಲಿರುವ ಸಿನಿಮಾ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ