ದೂರು ನೀಡಿದವರ ವಿರುದ್ಧವೇ ಪ್ರತಿದೂರು ನೀಡಿದ ಗಾಯಕಿ ಮಂಗ್ಲಿ

Singer Mangli: ವಕೀಲ ಸುಬ್ಬಾರಾವ್ ಎಂಬುವವರು ಈ ದೂರನ್ನು ನೀಡಿದ್ದು, ಮಂಗ್ಲಿ ಮತ್ತು ಅವರ ಸಹೋದರ ಶಿವ ಸೇರಿದಂತೆ ಇತರರು ಹಲವರಿಂದ ಹಣ ಪಡೆದು ಹೂಡಿಕೆದಾರರಿಗೆ ವಂಚಿಸಿದ್ದಾರೆ, ಹಣ ಮರಳಿ ಕೇಳಿದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ವಕೀಲ ಸುಬ್ಬರಾವ್ ವಿರುದ್ಧ ಗಾಯಕಿ ಮಂಗ್ಲಿ ಪ್ರತಿದೂರು ದಾಖಲಿಸಿದ್ದಾರೆ.

ದೂರು ನೀಡಿದವರ ವಿರುದ್ಧವೇ ಪ್ರತಿದೂರು ನೀಡಿದ ಗಾಯಕಿ ಮಂಗ್ಲಿ
Singer Mangli

Updated on: Apr 12, 2026 | 8:06 PM

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಗಾಯಕಿ ಮಂಗ್ಲಿ (Singer Mangli) ವಿರುದ್ಧ ಹೈದರಾಬಾದ್‌ನ ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ 10 ಕೋಟಿ ರೂಪಾಯಿಗಳ ವಂಚನೆಯ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ವಕೀಲ ಸುಬ್ಬಾರಾವ್ ಎಂಬುವವರು ಈ ದೂರನ್ನು ನೀಡಿದ್ದು, ಮಂಗ್ಲಿ ಮತ್ತು ಅವರ ಸಹೋದರ ಶಿವ ಸೇರಿದಂತೆ ಇತರರು ಹಲವರಿಂದ ಹಣ ಪಡೆದು ಹೂಡಿಕೆದಾರರಿಗೆ ವಂಚಿಸಿದ್ದಾರೆ, ಹಣ ಮರಳಿ ಕೇಳಿದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ವಕೀಲ ಸುಬ್ಬರಾವ್ ವಿರುದ್ಧ ಗಾಯಕಿ ಮಂಗ್ಲಿ ಪ್ರತಿದೂರು ದಾಖಲಿಸಿದ್ದಾರೆ.

ದೂರುದಾರ ಸುಬ್ಬಾರಾವ್ ಅವರ ಪ್ರಕಾರ, ಮಂಗ್ಲಿ ಮತ್ತು ಅವರ ತಂಡ ಮೈಕ್ರೋಫೈನಾನ್ಸ್, ರಿಯಲ್ ಎಸ್ಟೇಟ್ ಮತ್ತು ಇಂಪೋರ್ಟ್-ಎಕ್ಸ್‌ಪೋರ್ಟ್ ವ್ಯವಹಾರಗಳಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ ಸುಮಾರು 100 ರಿಂದ 150 ಜನರಿಂದ ಹಣ ಸಂಗ್ರಹಿಸಿದ್ದಾರೆ. ಸುಮಾರು 10 ಕೋಟಿ ರೂಪಾಯಿಗಳಷ್ಟು ಹಣವನ್ನು ಹೂಡಿಕೆದಾರರಿಂದ ಪಡೆದು, ಈಗ ಅಸಲು ಮತ್ತು ಲಾಭ ಎರಡನ್ನೂ ನೀಡದೆ ವಂಚಿಸುತ್ತಿದ್ದಾರೆ ಎಂದು ಸುಬ್ಬಾರಾವ್ ದೂರಿದ್ದಾರೆ. ಹೂಡಿಕೆ ಮಾಡಿದ ಹಣವನ್ನು ಮರಳಿ ಕೇಳಿದಾಗ ಮಂಗ್ಲಿ ಅವರ ಸಹೋದರ ಶಿವ ಮತ್ತು ಇತರರು ತಮಗೆ ಕೊಲೆ ಬೆದರಿಕೆ ಹಾಕಿದ್ದಾರೆ ಹಾಗೂ ಅಪಘಾತ ಮಾಡಿಸಿ ಸಾಯಿಸುವುದಾಗಿ ಹೆದರಿಸಿದ್ದಾರೆ ಎಂದು ವಕೀಲರು ದೂರಿನಲ್ಲಿ ತಿಳಿಸಿದ್ದರು.

ಈ ಆರೋಪಗಳನ್ನು ತಳ್ಳಿಹಾಕಿರುವ ಗಾಯಕಿ ಮಂಗ್ಲಿ, ವಕೀಲ ಸುಬ್ಬಾರಾವ್ ಅವರ ವಿರುದ್ಧವೇ ಹೈದರಾಬಾದ್‌ನ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಸುಬ್ಬಾರಾವ್ ಅವರು ತಮ್ಮ ಹೆಸರನ್ನು ಕೆಡಿಸಲು ಸಂಚು ರೂಪಿಸಿದ್ದಾರೆ ಮತ್ತು 150 ಕೋಟಿ ಹಗರಣ ಮಾಡಿದ್ದೇನೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಮಂಗ್ಲಿ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಘನತೆಗೆ ಕುಂದು ತರುವಂತಹ ವೀಡಿಯೊಗಳನ್ನು ಹರಿಬಿಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ಪ್ರಸ್ತುತ ಪಂಜಗುಟ್ಟಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಂಗ್ಲಿ ಮತ್ತು ಅವರ ಸಹೋದರನ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ, ಮಂಗ್ಲಿ ನೀಡಿದ ದೂರಿನ ಮೇರೆಗೆ ವಕೀಲ ಸುಬ್ಬಾರಾವ್ ವಿರುದ್ಧವೂ ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸರು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಮಂಗ್ಲಿ, ತೆಲುಗು ಚಿತ್ರರಂಗದ ಜನಪ್ರಿಯ ಗಾಯಕಿ. ಬಡ ಮತ್ತು ಹಿಂದುಳಿದ ಕುಟುಂಬದಿಂದ ಬಂದು ಒಂದೊಂದೆ ಹೆಜ್ಜೆಗಳನ್ನು ಇಡುತ್ತಾ ಈಗ ಜನಪ್ರಿಯ ಗಾಯಕಿ ಎನಿಸಿಕೊಂಡಿದ್ದಾರೆ. ಆದರೆ ಇದೀಗ ಮಂಗ್ಲಿ ವಿರುದ್ಧ ಹಣಕಾಸು ವಂಚನೆಯ ಆರೋಪ ಕೇಳಿಬಂದಿದೆ. ಕಳೆದ ವರ್ಷ, ಖಾಸಗಿ ರೆಸಾರ್ಟ್​​ನಲ್ಲಿ ನಡೆದಿದ್ದ ಮಂಗ್ಲಿಯ ಹುಟ್ಟುಹಬ್ಬ ಆಚರಣೆ ಮೇಲೆ ಸಹ ಪೊಲೀಸರು ದಾಳಿ ನಡೆಸಿದ್ದರು. ಆ ವೇಳೆ ಮದ್ಯದ ಬಾಟಲಿಗಳು ದೊರೆತಿದ್ದವು, ಅನುಮತಿ ಇಲ್ಲದೆ ಪಾರ್ಟಿ ಮಾಡುತ್ತಿದ್ದಾರೆಂದು ದೂರು ದಾಖಲಾಗಿತ್ತು. ಆದರೆ ಯಾವುದೇ ಕಾನೂನು ಬಾಹಿರ ಮಾದಕ ವಸ್ತುಗಳು ಪತ್ತೆ ಆಗಿರಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us