ಅನಿರುದ್ಧ್, ಕಾವ್ಯಾ ಮಾರನ್ ಆರತಕ್ಷತೆಗೆ ಪ್ರತ್ಯೇಕವಾಗಿ ಆಗಮಿಸಿದ ಸಿಎಂ ವಿಜಯ್, ಸಂಗೀತಾ
ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಅವರು ಈ ಮೊದಲು ಸಲ್ಲಿಸಿದ್ದ ವಿಚ್ಛೇದನದ ಅರ್ಜಿಯನ್ನು ಹಿಂಪಡೆದುಕೊಂಡಿದ್ದರು. ಆದರೂ ಕೂಡ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರ ಆರತಕ್ಷತೆ ಸಮಾರಂಭಕ್ಕೆ ವಿಜಯ್ ಹಾಗೂ ಸಂಗೀತಾ ಅವರು ಪ್ರತ್ಯೇಕವಾಗಿ ಬಂದು ಹೋಗಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಅವರ ಆರತಕ್ಷತೆ ಶನಿವಾರ (ನವೆಂಬರ್ 21) ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಅನೇಕ ಗಣ್ಯರು ಈ ತಾರಾ ಸಮಾಗಮಕ್ಕೆ ಸಾಕ್ಷಿಯಾಗಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಅವರ ಆಗಮನ. ಸಿಎಂ ವಿಜಯ್ ಅವರಿಗಿಂತ ಪ್ರತ್ಯೇಕವಾಗಿ ಸಂಗೀತಾ ಅವರು ಆರತಕ್ಷತೆಗೆ ಆಗಮಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
‘ಸನ್ ನ್ಯೂಸ್’ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಂಗೀತಾ ಅವರು ಅತ್ಯಂತ ಲವಲವಿಕೆಯಿಂದ ನಗುತ್ತಾ ಕಾಣಿಸಿಕೊಂಡಿದ್ದಾರೆ. ಗಾಢ ಹಳದಿ ಬಣ್ಣದ ಚೂಡಿದಾರ್ ಧರಿಸಿದ್ದ ಅವರು, ಸಮಾರಂಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿಯಾಗಿ ಮಾತನಾಡಿಸಿದರು. ಅಲ್ಲದೆ, ವೇದಿಕೆಯ ಮೇಲೆ ನವದಂಪತಿಗಳಾದ ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಅವರಿಗೆ ಶುಭಾಶಯ ಕೋರಿದರು. ಆದರೆ, ಇಡೀ ಕಾರ್ಯಕ್ರಮದಲ್ಲಿ ವಿಜಯ್ ಮತ್ತು ಸಂಗೀತಾ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ.
ಮತ್ತೊಂದೆಡೆ, ಸಂಗೀತಾ ಅವರಿಗಿಂತ ಮೊದಲೇ ಆರತಕ್ಷತೆಗೆ ಆಗಮಿಸಿದ್ದ ತಮಿಳುನಾಡು ಸಿಎಂ ವಿಜಯ್ ಅವರು, ನವದಂಪತಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಇದೇ ವೇದಿಕೆಯಲ್ಲಿ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಎಂ.ಕೆ. ಸ್ಟಾಲಿನ್ ಅವರನ್ನೂ ಭೇಟಿಯಾಗಿ ಉಭಯಕುಶಲೋಪರಿ ವಿಚಾರಿಸಿದರು.
#EXCLUSIVE | காவியா கலாநிதி மாறன் – அனிருத் ரவிச்சந்தர் திருமண வரவேற்பு விழாவில் சங்கீதா!
#SunNews | #KaviyaMaran | #Anirudh | #KaviyaAnirudhReception https://t.co/XtVYYkE5ii
— Sun News (@sunnewstamil) November 21, 2026
2026ರ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಆಗಸ್ಟ್ ತಿಂಗಳಲ್ಲಿ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರಿಂದ ಆ ಪ್ರಕರಣ ಮುಕ್ತಾಯಗೊಂಡಿತ್ತು ಎಂಬ ವರದಿಗಳು ಬಂದಿದ್ದವು. ಮೂಲತಃ ಶ್ರೀಲಂಕಾದವರಾದ ಸಂಗೀತಾ, 1990ರ ದಶಕದ ಉತ್ತರಾರ್ಧದಲ್ಲಿ ಲಂಡನ್‌ನಲ್ಲಿ ನೆಲೆಸಿದ್ದರು. 1996ರ ಹಿಟ್ ಚಿತ್ರ ‘ಪೂವೆ ಉನಕ್ಕಾಗ’ ನೋಡಿದ ಬಳಿಕ ವಿಜಯ್ ಅಭಿಮಾನಿಯಾಗಿದ್ದ ಅವರು, 1998ರಲ್ಲಿ ಯುಕೆಯಲ್ಲಿ ವಿಜಯ್ ಜೊತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಇದನ್ನೂ ಓದಿ: ಮದುವೆಯ ಫೋಟೋ ಹಂಚಿಕೊಂಡ ಅನಿರುದ್ಧ್ ರವಿಚಂದರ್, ಕಾವ್ಯಾ ಮಾರನ್
ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಎಷ್ಟು ಸಮಯದಿಂದ ಪ್ರೀತಿಸುತ್ತಿದ್ದರು ಎಂಬುದು ನಿಖರವಾಗಿ ತಿಳಿದಿಲ್ಲವಾದರೂ, 2025ರಲ್ಲಿ ಇವರಿಬ್ಬರ ಮದುವೆಯ ವದಂತಿಗಳು ಮೊದಲ ಬಾರಿಗೆ ಕೇಳಿಬಂದಿದ್ದವು. ಹಲವು ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ಅನಿರುದ್ಧ್ ಆರಂಭದಲ್ಲಿ ಈ ವದಂತಿಗಳನ್ನು ತಳ್ಳಿಹಾಕಿದ್ದರು. ಆದರೆ, ಈ ವರ್ಷ ಅನಿರುದ್ಧ್ ಅವರ ಸಂಬಂಧಿ ಮಹೇಂದ್ರನ್ ಅವರು ಮನೆಯಲ್ಲಿ ಶೀಘ್ರದಲ್ಲೇ ಮದುವೆ ನಡೆಯಲಿದೆ ಎಂದು ಸುಳಿವು ನೀಡಿದ್ದರು. ಇತ್ತೀಚೆಗೆ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರದ ವಿಶೇಷ ಪ್ರದರ್ಶನಕ್ಕೂ ಈ ಜೋಡಿ ಒಟ್ಟಿಗೆ ಆಗಮಿಸುವ ಮೂಲಕ ತಮ್ಮ ಸಂಬಂಧವನ್ನು ಖಚಿತಪಡಿಸಿತ್ತು. ಇದೀಗ ಅದ್ದೂರಿ ಆರತಕ್ಷತೆಯ ಮೂಲಕ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




