ವಿಜಯ್​ಕಾಂತ್ ಅಂತಿಮದರ್ಶನಕ್ಕೆ ಬಂದ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ

|

Updated on: Dec 29, 2023 | 3:45 PM

Thalapathy Vijay: ಡಿಸೆಂಬರ್ 28ರಂದು ನಿಧನರಾದ ತಮಿಳು ಹಿರಿಯ ನಟ, ರಾಜಕಾರಣಿ ವಿಜಯ್​ಕಾಂತ್​ರ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ನಟ ದಳಪತಿ ವಿಜಯ್​ ಮೇಲೆ ಚಪ್ಪಲಿ ಎಸೆಯಲಾಗಿದೆ.

ವಿಜಯ್​ಕಾಂತ್ ಅಂತಿಮದರ್ಶನಕ್ಕೆ ಬಂದ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ
Follow us on

ತಮಿಳು ಚಿತ್ರರಂಗದ ಹಿರಿಯ ನಟ, ರಾಜಕಾರಣಿ ವಿಜಯ್​ಕಾಂತ್ (Vijaykanth) ನಿನ್ನೆ (ಡಿಸೆಂಬರ್ 28) ನಿಧನ ಹೊಂದಿದ್ದಾರೆ. ರಜನೀಕಾಂತ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ಗಣ್ಯರು ವಿಜಯ್​ಕಾಂತ್​ರ ಅಂತಿಮ ದರ್ಶನ ಪಡೆದು ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್​ ಸಹ ತಮ್ಮ ಚಿತ್ರರಂಗದ ಹಿರಿಯ ನಟನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಯಾರೋ ದುಷ್ಕರ್ಮಿಗಳು ವಿಜಯ್​ ಮೇಲೆ ಚಪ್ಪಲಿ ಎಸೆದಿದ್ದಾರೆ.

ಚೆನ್ನೈನಲ್ಲಿ ವಿಜಯ್​ಕಾಂತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ದಳಪತಿ ವಿಜಯ್, ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯದಿಂದ ಬಂದು ವಿಜಯ್​ಕಾಂತ್​ರ ದರ್ಶನ ಪಡೆದು ಅವರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಬಳಿಕ ಕಿಕ್ಕಿರಿದು ತುಂಬಿದ್ದ ಜನಗಳ ಮಧ್ಯದಿಂದಲೇ ಬಹಳ ಕಷ್ಟಪಟ್ಟು ತಮ್ಮ ಕಾರಿನ ಬಳಿ ಹೋದರು. ಈ ವೇಳೆ ಯಾರೋ ಒಬ್ಬ ದುಷ್ಕರ್ಮಿ ವಿಜಯ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಚಪ್ಪಲಿ ವಿಜಯ್​ ಅವರ ಬೆನ್ನಿಗೆ ತಾಗಿಗೊಂಡು ಮುಂದೆ ಹೋಗಿ ಬಿದ್ದಿದೆ.

ದಳಪತಿ ವಿಜಯ್, ವಿಜಯ್​ಕಾಂತ್​ರ ಅಂತಿಮ ದರ್ಶನ ಪಡೆದ ವಿಡಿಯೋಗಳು, ವಿಜಯ್​ ಮೇಲೆ ಚಪ್ಪಲಿ ಎಸೆದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದಳಪತಿ ವಿಜಯ್ ಅಭಿಮಾನಿಗಳು ಈ ವಿಡಿಯೋವನ್ನು ತೀವ್ರವಾಗಿ ಖಂಡಿಸಿದ್ದಾರೆ. ತಮ್ಮ ಚಿತ್ರರಂಗದ ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಲು ಬಂದ ವ್ಯಕ್ತಿಯೊಟ್ಟಿಗೆ ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಅಲ್ಲದೆ, ಪೊಲೀಸರು ಸೂಕ್ತವಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡದೇ ಇರುವ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ಓದಿ:ದಳಪತಿ ವಿಜಯ್ ಹೊಸ ಚಿತ್ರದ ಬಗ್ಗೆ ಸಿಕ್ಕಿದೆ ದೊಡ್ಡ ಅಪ್ಡೇಟ್; ಫ್ಯಾನ್ಸ್ ಫುಲ್ ಖುಷ್

ತಮಿಳುನಾಡಿನಲ್ಲಿ ಫ್ಯಾನ್ಸ್ ವಾರ್​ಗಳು ಜೋರಾಗಿವೆ. ವಿಜಯ್​ ವಿರುದ್ಧ ರಜನೀಕಾಂತ್ ಅಭಿಮಾನಿಗಳು, ಅಜಿತ್ ಅಭಿಮಾನಿಗಳು ಬಹಳ ವರ್ಷದಿಂದ ದ್ವೇಷ ಕಾರುತ್ತಾ ಬಂದಿದ್ದಾರೆ. ವಿಜಯ್ ಅಭಿಮಾನಿಗಳು ಸಹ ಅಜಿತ್ ಹಾಗೂ ರಜನೀಕಾಂತ್ ಅಭಿಮಾನಿಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಹೊರಗಡೆಯೂ ಕಿತ್ತಾಡುತ್ತಲೇ ಇರುತ್ತಾರೆ. ವಿಜಯ್, ರಾಜಕೀಯಕ್ಕೆ ಬರುವ ಸುದ್ದಿಗಳು ಹರಿದಾಡಲು ಆರಂಭಿಸಿದ ಮೇಲೆ ರಾಜಕೀಯ ನಾಯಕರ ಅಭಿಮಾನಿಗಳಿಗೂ ವಿಜಯ್ ವೈರಿಯೇ ಆಗಿದ್ದಾರೆ. ಈಗ ವಿಜಯ್ ಮೇಲೆ ಚಪ್ಪಲಿ ಒಗೆದಿರುವುದು ಯಾರು ಎಂಬುದು ಖಾತ್ರಿಯಾಗಿಲ್ಲ.

ನಟ ವಿಜಯ್​ಕಾಂತ್, ಕಳೆದ ಕೆಲವು ತಿಂಗಳಿಂದಲೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸುಧಾರಿಸದ ಕಾರಣ ಅವರನ್ನು ಐಸಿಯುವಿನಲ್ಲಿ ಇಡಲಾಗಿತ್ತು. ಅಂತಿಮವಾಗಿ ಡಿಸೆಂಬರ್ 28ರಂದು ಅವರು ಕೊನೆ ಉಸಿರೆಳೆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Fri, 29 December 23