ಈ ವರ್ಷ ನಮ್ಮನ್ನಗಲಿದ ಸ್ಯಾಂಡಲ್​ವುಡ್ ತಾರೆಯರು ಇವರು

Year End 2023: ಈ ವರ್ಷ ಕನ್ನಡದ ಹಲವು ನಟ-ನಟಿಯರು ತಂತ್ರಜ್ಞರು ಅಭಿಮಾನಿಗಳನ್ನು, ತಮ್ಮ ಕುಟುಂಬದವರನ್ನು ಅಗಲಿಸಿದ್ದಾರೆ. ಆ ಮಹನೀಯರ ಪಟ್ಟಿ ಇಲ್ಲಿದೆ...

ಈ ವರ್ಷ ನಮ್ಮನ್ನಗಲಿದ ಸ್ಯಾಂಡಲ್​ವುಡ್ ತಾರೆಯರು ಇವರು
ಅಗಲಿದ ತಾರೆಯರು 2023
Follow us
ಮಂಜುನಾಥ ಸಿ.
|

Updated on:Dec 29, 2023 | 4:52 PM

ಈ ವರ್ಷ ಕನ್ನಡ ಚಿತ್ರರಂಗದ (Sandalwood) ಹಲವು ತಾರೆಯರು ಅಭಿಮಾನಿಗಳನ್ನು, ಅವರ ಕುಟುಂಬದವರನ್ನು ಅಗಲಿಸಿದ್ದಾರೆ. ಇತ್ತೀಚೆಗೆ ಅಗಲಿದ ಲೀಲಾವತಿ ಅವರು, ಖ್ಯಾತ ನಿರ್ದೇಶಕ ದೊರೈ ಭಗವಾನ್ ಹೀಗೆ ಈ ವರ್ಷ ಹಲವು ಮಹನೀಯ ನಟ, ನಟಿ, ತಂತ್ರಜ್ಞರು ಇಲ್ಲವಾಗಿದ್ದಾರೆ. 2023ರಲ್ಲಿ ನಮ್ಮಲ್ಲಗಲಿದ ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರು, ತಂತ್ರಜ್ಞರ ಪಟ್ಟಿ ಇಲ್ಲಿದೆ.

ಹಿರಿಯ ನಟಿ ಲೀಲಾವತಿ

ಕನ್ನಡ ಚಿತ್ರರಂಗದ ಹಿರಿಯ ನಟಿ, ನಿರ್ಮಾಪಕಿ ಲೀಲಾವತಿ ಅವರು 8 ಡಿಸೆಂಬರ್ ರಂದು ಕೊನೆ ಉಸಿರೆಳೆದರು. ಬಹಳ ವರ್ಷಗಳಿಂದ ಚಿತ್ರರಂಗದಿಂದ ದೂರಾಗಿ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ತಮ್ಮ ಪುತ್ರ ವಿನೋದ್ ರಾಜ್ ಅವರ ಆರೈಕೆಯಲ್ಲಿ ಜೀವನ ಕಳೆಯುತ್ತಿದ್ದರು. ಲೀಲಾವತಿ ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದರು.

ಜಾಲಿ ಬಾಸ್ಟಿನ್

ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ಕರ್ನಾಟಕ ಮೂಲದವರಲ್ಲವಾದರೂ ಕನ್ನಡದ ನೂರಾರು ಸಿನಿಮಾಗಳಿಗೆ ಸಾಹಸ ನಿರ್ದೇಶಕರಾಗಿ ದಶಕಗಳಿಂದಲೂ ಕೆಲಸ ಮಾಡಿದ್ದಾರೆ. ಆರಂಭದಲ್ಲಿ ಅವರ ಬೈಕ್ ಸ್ಟಂಟ್​ಗಳು ನವಿರೇಳಿಸುವಂತಿರುತ್ತಿತ್ತು. ಡಿಸೆಂಬರ್ 26ಕ್ಕೆ ಜಾಲಿ ಬಾಸ್ಟಿನ್ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಸ್ಪಂದನಾ ರಾಘವೇಂದ್ರ

ಈ ವರ್ಷ ತೀವ್ರ ಆಘಾತ ಉಂಟು ಮಾಡಿದ ಸಾವುಗಳಲ್ಲಿ ಪ್ರಮುಖವಾದು, ಸ್ಪಂದನಾ ರಾಘವೇಂದ್ರ ಅವರ ಸಾವು. ನಟ ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಥಾಯ್ಲೆಂಡ್​ಗೆ ಸಹೋದರರ ಜೊತೆ ಪ್ರವಾಸಕ್ಕೆ ತೆರಳಿದ್ದ ವೇಳೆ ಆಗಸ್ಟ್ 7ರಂದು ಹೃದಯಾಘಾತಕ್ಕೆ ಈಡಾಗಿ ನಿಧನ ಹೊಂದಿದರು. ಈ ಸಾವು ವಿಜಯ್ ರಾಘವೇಂದ್ರ ಅವರಿಗೆ ಹಾಗೂ ಅವರ ಕುಟುಂಬಕ್ಕೆ ತೀವ್ರ ಆಘಾತ ತಂದಿತ್ತು.

ಕೆಸಿಎನ್ ಮೋಹನ್

ನಿರ್ಮಾಪಕ, ನವರಂಗ್ ಸೇರಿದಂತೆ ಇನ್ನೂ ಕೆಲವು ಚಿತ್ರಮಂದಿರಗಳ ಮಾಲೀಕರಾಗಿದ್ದ ಕೆಸಿಎನ್ ಮೋಹನ್ ಅವರು ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರು. ಸಿನಿಮಾ ವಿತರಕರಾಗಿಯೂ ಮೋಹನ್ ಕೆಲಸ ಮಾಡಿದ್ದರು. ಬೆಂಗಳೂರಿನ ಶ್ರೀಮಂತ ಚಿತ್ರಮಂದಿರ ಮಾಲೀಕರಲ್ಲಿ ಒಬ್ಬರಾಗಿದ್ದ ಇವರು ಜುಲೈ 2 ರಂದು ಅನಾರೋಗ್ಯದಿಂದ ನಿಧನ ಹೊಂದಿದರು.

ನಿರ್ದೇಶಕ ಭಗವಾನ್

ದೊರೈ-ಭಗವಾನ್ ಹೆಸರು ಕೇಳಿಲ್ಲದ ಅವರ ಸಿನಿಮಾ ನೋಡಿರದ ಕನ್ನಡ ಸಿನಿಮಾ ಪ್ರೇಮಿ ಇರಲಿಕ್ಕಿಲ್ಲ. ದೊರೈ ಅವರು ಕಾಲವಾಗಿ ಬಹಳ ಸಮಯವಾಗಿದೆ. ಭಗವಾನ್ ಅವರು ಈ ವರ್ಷ ಫೆಬ್ರವರಿ 20ರಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಕನ್ನಡ ಚಿತ್ರರಂಗದ ಹಲವು ಗಣ್ಯರು, ಭಗವಾನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.

ಸಿವಿ ಶಿವಶಂಕರ್

ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಲ್ಲಿ ಒಬ್ಬರಾಗಿದ್ದ ಸಿವಿ ಶಿವಶಂಕರ್ ಅವರು ಜೂನ್ 27ರಂದು ನಿಧನರಾದರು. ರಂಗಭೂಮಿ ಬಳಿಕ ಸಿನಿಮಾಗಳಲ್ಲಿ ಅವರ ಸೇವೆ ಅಪಾರವಾದುದು. ‘ಸಿರಿವಂತನಾದರೂ ಕನ್ನಡ ನಾಡಲ್ಲೆ’, ‘ಕನ್ನಡದಾ ರವಿ ಮೂಡಿ ಬಂದಾ’ ಇವರ ರಚನೆಯೇ. ‘ಮನೆ ಕಟ್ಟಿ ನೋಡು’, ‘ಕನ್ನಡ ಕುವರ’, ‘ನಮ್ಮ ಊರಿನ ರಸಿಕರು’ ಸಿನಿಮಾಗಳನ್ನು ನಿರ್ದೇಶನ ಮಾಡುವ ಜೊತೆಗೆ, ‘ಸ್ಕೂಲ್ ಮಾಸ್ಟರ್’, ‘ಶ್ರೀಕೃಷ್ಣ ಗಾರುಡಿ’, ‘ಭಕ್ತ ಕನಕದಾಸ’, ‘ಸ್ಕೂಲ್ ಮಾಸ್ಟರ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದರು.

ನಟ ಸಂಪತ್ ಜಯರಾಂ

ಕಿರುತೆರೆ ಮೂಲಕ ಜನಪ್ರಿಯವಾಗಿ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದ ಸಂಪತ್ ಜಯರಾಂ ಇದೇ ವರ್ಷದ ಆರಂಭದಲ್ಲಿ ನಿಧನ ಹೊಂದಿದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಯ್ತು.

ಟಪೋರಿ ಸತ್ಯ

ಕನ್ನಡದ ಕೆಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ, ಸಿನಿಮಾ ನಿರ್ದೇಶಕನಾಗಿಯೂ ಹೆಸರು ಮಾಡಿದ್ದ ಟಪೋರಿ ಸತ್ಯ ಏಪ್ರಿಲ್​ ತಿಂಗಳಿನಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದರು. ಅವರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು.

ವಾಣಿ ಜಯರಾಂ-ಶರತ್ ಕುಮಾರ್

ಕನ್ನಡಿಗರನ್ನು ಬಹುವಾಗಿ ಕಾಡಿದ ಇತರೆ ಭಾಷೆಯ ಸೆಲೆಬ್ರಿಟಿಗಳ ಸಾವಿನಲ್ಲಿ ಪ್ರಮುಖವಾದುದು ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ ಹಾಗೂ ನಟ ಶರತ್ ಕುಮಾರ್. ವಾಣಿ ಜಯರಾಂ ಅವರು ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ. ಶರತ್ ಕುಮಾರ್, ‘ಅಮೃತವರ್ಷಿಣಿ’ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Fri, 29 December 23