
ಅದೇಕೋ ಗೊತ್ತಿಲ್ಲ.. ‘ಕೆಜಿಎಫ್’ ಮತ್ತು ‘ಪುಷ್ಪ’ ಸಿನಿಮಾಗಳ ನಡುವೆ ಮೊದಲಿನಿಂದಲೂ ಹೋಲಿಕೆ ನಡೆಯುತ್ತಲೇ ಇದೆ. ಕಥೆಯ ಫಾರ್ಮ್ಯಾಟ್ ಆಗಿರಬಹುದು ಅಥವಾ ಬಾಕ್ಸ್ ಆಫೀಸ್ ಗಳಿಕೆಯ ಲೆಕ್ಕಾಚಾರ ಆಗಿರಬಹುದು.. ಈ ಎರಡೂ ಸಿನಿಮಾಗಳನ್ನು ಅಕ್ಕ-ಪಕ್ಕ ಇಟ್ಟುಕೊಂಡು ಜನರು ಚರ್ಚೆ ಮಾಡುತ್ತಾರೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸೂಪರ್ ಹಿಟ್ ಆದ ಬಳಿಕ ‘ಪುಷ್ಪ 2’ ಸಿನಿಮಾ ಸಹ ಅದೇ ಮಟ್ಟಕ್ಕೆ ಗೆಲ್ಲಬೇಕು ಎಂದು ತೆಲುಗು ಪ್ರೇಕ್ಷಕರು ಮತ್ತು ಅಲ್ಲು ಅರ್ಜುನ್ ಅಭಿಮಾನಿಗಳು ಆಸೆ ಪಡುತ್ತಿದ್ದಾರೆ. ಅದಕ್ಕಾಗಿ ನಿರ್ದೇಶಕ ಸುಕುಮಾರ್ (Sukumar) ಅವರು ಹಲವು ಬಗೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಅವರು ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ 2’ (Pushpa 2) ಸಿನಿಮಾವನ್ನು ತುಂಬ ದೊಡ್ಡದಾಗಿ ಕಟ್ಟಿಕೊಡಬೇಕು ಎಂಬ ಕಾರಣಕ್ಕೆ ಅವರು ತುಂಬ ಹೋಮ್ ವರ್ಕ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಅದರ ಜೊತೆಗೆ ಶೂಟಿಂಗ್ ಪ್ಲ್ಯಾನ್ ಬಗ್ಗೆಯೂ ಕೆಲವು ಗುಸುಗುಸು ಕೇಳಿಬಂದಿದೆ.
ಮೂಲಗಳ ಪ್ರಕಾರ, ನಿರ್ದೇಶಕ ಸುಕುಮಾರ್ ಅವರು ‘ಪುಷ್ಪ 2’ ಸಿನಿಮಾದ ಕೆಲವು ದೃಶ್ಯಗಳನ್ನು ವಿದೇಶದಲ್ಲಿ ಚಿತ್ರೀಕರಿಸಲಿದ್ದಾರೆ. ಅದಕ್ಕೆ ಕಾರಣ ಇಷ್ಟೇ.. ರಕ್ತಚಂದನದ ಕಳ್ಳ ಸಾಗಾಣಿಕೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಕಥಾನಾಯಕ ಪುಷ್ಪರಾಜ್ ಮುಂದಿನ ದಿನಗಳಲ್ಲಿ ತಮ್ಮ ವ್ಯಾಪ್ತಿಯನ್ನು ವಿದೇಶಕ್ಕೂ ವಿಸ್ತರಿಸಿಕೊಳ್ಳುತ್ತಾನೆ. ವಿದೇಶದಲ್ಲೂ ಬೆಲೆ ಬಾಳುವ ಮರಗಳ ಸ್ಮಗ್ಲಿಂಗ್ ಮಾಡುತ್ತಾನೆ. ಹಾಗಾಗಿ ‘ಪುಷ್ಪ 2’ ಸಿನಿಮಾದ ದೃಶ್ಯಗಳು ವಿದೇಶದಲ್ಲಿ ಚಿತ್ರೀಕರಿಸಲ್ಪಡುತ್ತವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಇಲ್ಲಿ ನೋಡಿ ಇಂಗ್ಲಿಷ್ ಶ್ರೀವಲ್ಲಿ; ವಿದೇಶಿಗರಲ್ಲೂ ಕ್ರೇಜ್ ಹುಟ್ಟಿಸಿದ ರಶ್ಮಿಕಾ-ಅಲ್ಲು ಅರ್ಜುನ್ ಹಾಡು
‘ಕೆಜಿಎಫ್ 2’ ಸಿನಿಮಾದ ಕಥೆಯ ಫಾರ್ಮ್ಯಾಟ್ ಕೂಡ ಇದಕ್ಕೆ ಹೋಲಿಕೆ ಆಗುತ್ತಿದೆ ಎಂಬದು ಕೆಲವರ ಅಭಿಪ್ರಾಯ. ಮೊದಲು ನರಾಚಿಗೆ ಮಾತ್ರ ಸೀಮಿತವಾಗಿದ್ದ ರಾಕಿ ಭಾಯ್ ಹವಾ ‘ಕೆಜಿಎಫ್ 2’ನಲ್ಲಿ ವಿದೇಶಕ್ಕೂ ವಿಸ್ತರಿಸುತ್ತದೆ. ಅದೇ ರೀತಿಯ ಕಥೆಯ ಎಳೆಯನ್ನು ‘ಪುಷ್ಪ 2’ ಚಿತ್ರದಲ್ಲೂ ಪ್ರಯತ್ನಿಸಲಾಗುತ್ತಿದೆ ಎಂಬುದು ಕೇಳಿಬರುತ್ತಿರುವ ಗಾಸಿಪ್. ಈ ವಿಚಾರದ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ‘ಪುಷ್ಪ’ ಸಿನಿಮಾದಿಂದ ಬಹುದೊಡ್ಡ ಗೆಲುವು ಸಿಕ್ಕಿತು. ಡಾಲಿ ಧನಂಜಯ, ಫಹಾದ್ ಫಾಸಿಲ್ ಅವರು ಮಾಡಿರುವ ಪಾತ್ರಗಳು ಕೂಡ ಮಿಂಚಿದವು. ಎರಡನೇ ಪಾರ್ಟ್ನಲ್ಲಿ ಕಥೆ ಯಾವ ರೀತಿ ಮುಂದುವರಿಯುತ್ತದೆ ಎಂದು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.