ಶ್ರೀದೇವಿಯ ಜೀವನ ಹಾಳಾಗಲು ಆಕೆಯ ತಾಯಿಯೇ ಕಾರಣ: ನಟಿ ಕುಟ್ಟಿ ಪದ್ಮಿನಿ

Sridevi: ನಟಿ ಶ್ರೀದೇವಿ ನಿಗೂಢವಾಗಿ ನಿಧನವಾಗಿ ಐದು ವರ್ಷಗಳಾಗಿವೆ. ಇದೀಗ ಶ್ರೀದೇವಿಯ ಬಾಲ್ಯದ ಗೆಳತಿ, ನಟಿ ಕುಟ್ಟಿ ಪದ್ಮಿನಿ ಅವರು ಶ್ರೀದೇವಿ ಜೀವನವನ್ನು ಆಕೆಯ ತಾಯಿಯೇ ಹಾಳು ಮಾಡಿದರು ಎಂದಿದ್ದಾರೆ.

ಶ್ರೀದೇವಿಯ ಜೀವನ ಹಾಳಾಗಲು ಆಕೆಯ ತಾಯಿಯೇ ಕಾರಣ: ನಟಿ ಕುಟ್ಟಿ ಪದ್ಮಿನಿ
ಶ್ರೀದೇವಿ-ಕುಟ್ಟಿ ಪದ್ಮಿನಿ

Updated on: Apr 25, 2023 | 8:41 PM

ನಟಿ ಶ್ರೀದೇವಿ (Sridevi) ನಿಧನ ಹೊಂದಿ ಐದು ವರ್ಷಗಳಾಗಿವೆ. ಆದರೆ ಅವರ ಸಾವು ಈಗಲೂ ರಹಸ್ಯಮಯವಾಗಿಯೇ ಇದೆ. ಶ್ರೀದೇವಿಯದ್ದು ಕೊಲೆ ಎಂದು ಕೆಲವರು ಹೇಳಿದರೆ, ಕೆಲವರು ಆತ್ಮಹತ್ಯೆಯೆಂದು ಇನ್ನು ಕೆಲವರು ಹೇಳುತ್ತಾರೆ. ಮದ್ಯದ ಅಮಲಿನಲ್ಲಿ ಆದ ಅನಾಹುತ ಇದೆಂದು ಸುದ್ದಿಗಳು ಈಗಲೂ ಹರಿದಾಡುತ್ತಲೇ ಇವೆ. ಇದೀಗ ನಟಿ ಹಾಗೂ ಶ್ರೀದೇವಿಯ ಬಾಲ್ಯದ ಗೆಳತಿ ಕುಟ್ಟಿ ಪದ್ಮಿನಿ ಶ್ರೀದೇವಿ ಬಗ್ಗೆ ಮಾತನಾಡಿದ್ದು, ಶ್ರೀದೇವಿಯ ಜೀವನ ಹಾಳಾಗಲು ಆಕೆಯ ತಾಯಿಯೇ ಕಾರಣ ಎಂದಿದ್ದಾರೆ.

ಯೂಟ್ಯೂಬ್ ಚಾನೆಲ್​ ಒಂದಕ್ಕೆ ಸಂದರ್ಶನ ನೀಡಿರುವ ನಟಿ ಕುಟ್ಟಿ ಪದ್ಮಿನಿ, ಶ್ರೀದೇವಿಯ ತಾಯಿಗೆ ಕುಡಿತದ ಚಟವಿತ್ತು. ಆಕೆ ಪ್ರತಿದಿನ ಕುಡಿಯುತ್ತಿದ್ದಳು, ಶ್ರೀದೇವಿ ಬೇಗ ಮತ್ತು ಗಾಢವಾದ ನಿದ್ದೆ ಮಾಡಲೆಂದು ಎಳವೆಯಲ್ಲಿಯೇ ಶ್ರೀದೇವಿಗೆ ಮದ್ಯ ಕುಡಿಸುತ್ತಿದ್ದಳು. ಆಕೆ ಹಣ ಗಳಿಸಲು ಶ್ರೀದೇವಿಯನ್ನು ಚೆನ್ನಾಗಿ ಬಳಸಿಕೊಂಡಳು, ಬಾಲನಟಿಯಾಗಿ, ನಾಯಕ ನಟಿಯಾಗಿ ಒಂದರ ಹಿಂದೆ ಒಂದು ಸಿನಿಮಾಗಳನ್ನು ಶ್ರೀದೇವಿ ಮಾಡುತ್ತಿದ್ದಳು, ಶ್ರೀದೇವಿ ಪರವಾಗಿ ಆಕೆಯ ತಾಯಿಯೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಳು. ಅತಿಯಾದ ಕೆಲಸದಿಂದ ದಣಿದ ಮಗಳಿಗೆ ಮದ್ಯವನ್ನು ಅಭ್ಯಾಸ ಮಾಡಿಸಿದಳು ಆಕೆಯ ತಾಯಿ. ಕೊನೆಗೆ ಅದೇ ಶ್ರೀದೇವಿಯ ಜೀವನ ಹಾಳಾಗಲು ಕಾರಣವಾಯ್ತು ಎಂದಿದ್ದಾರೆ.

ಕುಡಿತದಿಂದ ಆದ ಅನಾಹುತದಿಂದಲೇ ಶ್ರೀದೇವಿಯ ಸಾವು ಸಂಭವಿಸಿದೆ ಎಂಬರ್ಥದ ಮಾತುಗಳನ್ನಾಡಿರುವ ನಟಿ ಕುಟ್ಟಿ ಪದ್ಮಿನಿ ಆಕೆಯ ತಾಯಿಯ ಮದ್ಯದ ಚಟ ಶ್ರೀದೇವಿಗೆ ವಿಪರೀತವಾಗಿ ಹತ್ತಿಕೊಂಡಿತ್ತು, ಶ್ರೀದೇವಿ ಸಹ ಪ್ರತಿದಿನ ಮದ್ಯ ಸೇವನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ನಟಿ ಶ್ರೀದೇವಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿ ಆ ಬಳಿಕ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ನಾಯಕಿಯಾಗಿ ನಟಿಸಲು ಆರಂಭಿಸಿದರು. ಹಲವಾರು ಸಿನಿಮಾಗಳಲ್ಲಿ ನಟಿಸಿದ ಶ್ರೀದೇವಿ ತೆಲುಗು, ತಮಿಳು ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡರು, ಆ ಬಳಿಕ ಬಾಲಿವುಡ್​ಗೂ ಪದಾರ್ಪಣೆ ಮಾಡಿ ಅಲ್ಲಿಯೂ ಸ್ಟಾರ್ ಆದರು. ಬಳಿಕ ನಿರ್ಮಾಪಕ ಬೋನಿ ಕಪೂರ್​ ಜೊತೆ ಗೆಳೆತನ ಬೆಳೆಸಿ ಮದುವೆಗೆ ಮುಂಚೆಯೇ ಗರ್ಭಿಣಿಯಾದರು ಬಳಿಕ ಬೋನಿ ಕಪೂರ್ ಅನ್ನೇ ವಿವಾಹವೂ ಆದರು.

ಇದನ್ನೂ ಓದಿ: Janhvi Kapoor: ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​​​ ಹೊಸ ಲುಕ್​​​ ಹೇಗಿದೆ ನೋಡಿ

1996 ರಲ್ಲಿ ಬೋನಿ ಕಪೂರ್ ಅನ್ನು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರಾದ ಶ್ರೀದೇವಿ ಆ ಬಳಿಕ 2012 ರಲ್ಲಿ ಬಿಡುಗಡೆ ಆದ ಇಂಗ್ಲೀಷ್-ವಿಂಗ್ಲೀಷ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದರು. 2018 ರಲ್ಲಿ ಕುಟುಂಬ ಸದಸ್ಯರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದ ಶ್ರೀದೇವಿ, ಪತಿ ಬೋನಿ ಕಪೂರ್, ತಾವು ದುಬೈಗೆ ಬರುತ್ತಿರುವುದಾಗಿ ಹೇಳಿದ್ದರಿಂದ ಮದುವೆ ಮುಗಿದ ಮೇಲೆಯೂ ಅಲ್ಲಿಯೇ ಉಳಿದರು. ಬೋನಿ ಕಪೂರ್, ಶ್ರೀದೇವಿಗೆ ಸರ್ಪ್ರೈಸ್ ನೀಡಲೆಂದು ಹೇಳಿದ್ದಕ್ಕಿಂತಲೂ ಎರಡು ದಿನ ಮೊದಲೇ ಶ್ರೀದೇವಿ ಇದ್ದ ಹೋಟೆಲ್​ಗೆ ಹೋದರು. ಬೋನಿ ಕಪೂರ್ ಹೇಳಿರುವಂತೆ, ಇಬ್ಬರೂ ಭೇಟಿಯಾಗಿ ಹೋಟೆಲ್​ ರೂಂನಲ್ಲಿ ಕೆಲ ಕಾಲ ಮಾತನಾಡಿದರು. ಅದಾದ ಬಳಿಕ ಶ್ರೀದೇವಿ ಸ್ನಾನಕ್ಕೆ ಹೋದರು, ಅಲ್ಲಿ ಬಾತ್​ರೂಂನ ಟಬ್​ನಲ್ಲಿ ಮುಳುಗಿ ಸಾವನ್ನಪ್ಪಿದರು.