ಬ್ಯುಸಿನೆಸ್ನಿಂದ ಭಾರಿ ನಷ್ಟ, ಆತ್ಮಹತ್ಯೆಗೆ ಯತ್ನಿಸಿದಾಗ ಬದುಕಿಸಿದ್ದು ಯಾರು? ಜಗ್ಗೇಶ್ ಹೇಳಿದ ಜೀವದಾನದ ಕತೆ
Jaggesh: ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಜಗ್ಗೇಶ್ ಅವರನ್ನು ಬದುಕಿಸಿದ್ದು ಯಾರು? ಆತ್ಮಹತ್ಯೆ ಮಾಡಿಕೊಳ್ಳಬೇಕಾದಂಥಹಾ ಸನ್ನಿವೇಶ ಸೃಷ್ಟಿಯಾಗಿದ್ದು ಏಕೆ? ಅವರೇ ಹೇಳಿದ್ದಾರೆ...
ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡ ನಟ ಜಗ್ಗೇಶ್ (Jaggesh). ತಕ್ಕ ಮಟ್ಟಿಗಿನ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬಳಿಕ ಅಪ್ಪ ಮನೆಯಿಂದ ಹೊರದಬ್ಬಿಸಿಕೊಂಡು, ಕಾನೂನು ಸೇರಿದಂತೆ ಎಲ್ಲರನ್ನೂ ಎದುರು ಹಾಕಿಕೊಂಡು ಪ್ರೀತಿಸಿದಾಕೆಯ ವಿವಾಹವಾಗಿ, ಆಕೆಯನ್ನು ಚೆನ್ನಾಗಿ ಓದಿಸಿ ವೈದ್ಯೆಯನ್ನಾಗಿಸಿ. ಬದುಕಲು ಸಣ್ಣ ಪಾತ್ರ ಸಿಕ್ಕರೆ ಸಾಕು ಎಂದುಕೊಂಡು ನಟನೆ ಆರಂಭಿಸಿ ಸ್ಟಾರ್ ನಟನಾಗಿ, ಈಗಲೂ ಸ್ಟಾರ್ ಪಟ್ಟ ಉಳಿಸಿಕೊಂಡಿರುವ ಜೊತೆಗೆ ರಾಜಕಾರಣಿಯಾಗಿಯೂ ಯಶಸ್ಸು ಗಳಿಸಿರುವ ಜಗ್ಗೇಶ್ ಜೀವನವೇ ಒಂದು ಸಿನಿಮಾ. ಅಷ್ಟು ಏರಿಳಿತಗಳು, ತಿರುವುಗಳು ಅವರ ಜೀವನದಲ್ಲಿದೆ. ಅವರೂ ಸಹ ತಮ್ಮ ಜೀವನ ಪಾಠದಿಂದ ಬೇರೆಯವರಿಗೆ ಸಹಕಾರಿಯಾಗಬಹುದೇನೋ ಎಂಬ ಉದ್ದೇಶದಿಂದ ಆಗಾಗ್ಗೆ ತಮ್ಮ ಜೀವನದ ಕತೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂಥಹುದೇ ಒಂದು ‘ಜೀವದಾನ’ದ ಕತೆಯನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ.
ಡಾ ರಾಜ್ಕುಮಾರ್ ಹುಟ್ಟುಹಬ್ಬದ ವಿಶೇಷಕ್ಕಾಗಿ ಕೆಆರ್ಜಿ ಕನೆಕ್ಟ್ಸ್ ಯೂಟ್ಯೂಬ್ ಚಾನೆಲ್ಗಾಗಿ ತಮ್ಮದೇ ಬದುಕಿನ ಒಂದು ಬಹುಮುಖ್ಯ ಘಟನೆಯನ್ನು ಜಗ್ಗೇಶ್ ಹಂಚಿಕೊಂಡಿದ್ದಾರೆ. ಅದಾಗಲೇ ಜಗ್ಗೇಶ್ ಹೀರೋ ಆಗಿ ಸ್ಥಾಪಿತವಾಗಿದ್ದರು. ಒಂದರ ಮೇಲೊಂದು ಸಿನಿಮಾ ಮಾಡುತ್ತಿದ್ದರು. ಸಿನಿಮಾ ಒಂದಕ್ಕೆ ಮೂರು ಲಕ್ಷ ಸಂಭಾವನೆಯಾಗಿ ಆಗಿನ ಕಾಲಕ್ಕೆ ಪಡೆಯುತ್ತಿದ್ದರು. ಕೈಯಲ್ಲಿ ಸಾಕಷ್ಟು ಹಣ ಹರಿದಾಡುತ್ತಿತ್ತು, ಆ ಸಮಯದಲ್ಲಿ ತಂದೆ ಹಾಗೂ ಇನ್ನು ಕೆಲವರು ಬಂಧುಗಳ ಮಾತು ಕೇಳಿ ಬ್ಯುಸಿನೆಸ್ಗೆ ಇಳಿದರಂತೆ ಜಗ್ಗೇಶ್.
ಅವರೇ ಹೇಳಿಕೊಂಡಿರುವಂತೆ, ಆಗಿನ ಕಾಲಕ್ಕೆ ಸುಮಾರು 50 ಲಕ್ಷ ಬಂಡವಾಳ ಹಾಕಿ ಟ್ರಾನ್ಸ್ಪೋರ್ಟ್ ಬ್ಯುಸಿನೆಸ್ ಆರಂಭಿಸಿದರಂತೆ ನಟ ಜಗ್ಗೇಶ್, ನಾಲ್ಕು ಸಾರಿಗೆ ಬಸ್ಸು, ಎರಡು ಲಾರಿಗಳನ್ನು ಖರೀದಿ ಮಾಡಿ ಬ್ಯುಸಿನೆಸ್ ಆರಂಭಿಸಿದರಂತೆ. ದಿನದಿಂದ ದಿನಕ್ಕೆ ಬ್ಯುಸಿನೆಸ್ ಕುಸಿಯುತ್ತಲೇ ಬಂತಂತೆ. ಈ ವ್ಯವಹಾರದ ಬಗ್ಗೆ ಏನೂ ಗೊತ್ತಿಲ್ಲದ ಜಗ್ಗೇಶ್ ಕಷ್ಟಪಟ್ಟೆ ಬ್ಯುಸಿನೆಸ್ ನಡೆಸುತ್ತಿರುವಾಗ ಅವರಿಗೆ ಸೇರಿದ ಒಂದು ಬಸ್ಸು ನೆಲಮಂಗಲದ ಬಳಿ ಅಪಘಾತಕ್ಕೆ ಈಡಾಗುತ್ತದೆ. ಅದೊಂದು ಭೀಕರ ಅಪಘಾತ, ಬಸ್ನಲ್ಲಿದ್ದ 12 ಜನರು ನಿಧನ ಹೊಂದುತ್ತಾರೆ. ಜಗ್ಗೇಶ್ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಬಸ್ಗೆ ಸಂಬಂಧಿಸಿದ ದಾಖಲೆ ನ್ಯಾಯಾಲಯಕ್ಕೆ ಒದಗಿಸಲು ಹುಡುಕಿದಾಗ ಜಗ್ಗೇಶ್ಗೆ ಗೊತ್ತಾಗುತ್ತದೆ ಬಸ್ಗೆ ವಿಮೆ ಕಟ್ಟಿಲ್ಲವೆಂದು. ಇದರಿಂದಾಗಿ ಜಗ್ಗೇಶ್ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಭಾರಿ ದೊಡ್ಡ ಮೊತ್ತವನ್ನು ಪರಿಹಾರವಾಗಿ ನೀಡಬೇಕಾಗುತ್ತದೆ ಜಗ್ಗೇಶ್.
ಗಳಿಸಿದ್ದೆಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ತಲುಪಿದ ಜಗ್ಗೇಶ್, ಜೀವನದಲ್ಲಿ ತೀವ್ರ ಅವಮಾನ ಎದುರಿಸಿದಂತಾಗಿ, ಕಷ್ಟಪಟ್ಟು ಮೇಲೆ ಬಂದೆ, ಈಗ ಮತ್ತೆ ಮೊದಲಿನ ಸ್ಥಿತಿಗೆ ಬಂದಂತಾಯಿತಲ್ಲ ಎಂದೆನಿಸಿ ಈ ಜೀವ ಬೇಡ ಎಂದುಕೊಂಡು ಮಲ್ಲೇಶ್ವರಮ್ ಎಂಟನೇ ಕ್ರಾಸ್ ಬಳಿಯ ಅಂಗಡಿಯೊಂದರಲ್ಲಿ ವಿಷ ಖರೀದಿಸಿ ಕುಡಿದುಬಿಟ್ಟರಂತೆ. ವಿಷ ಕುಡಿದ ಜಗ್ಗೇಶ್ ಅನ್ನು ಫೈಟ್ ಮಾಸ್ಟರ್ ಕೆಡಿ ವೆಂಕಟೇಶ್, ಸಹೋದರ ಕೋಮಲ್ ಅವರುಗಳು ಆಸ್ಪತ್ರೆಗೆ ಸೇರಿಸಿ ವಿಷ ತೆಗೆಸುವ ಪ್ರಯತ್ನ ಮಾಡಿಸಿದ್ದಾರೆ. ಆ ನಂತರ ನನ್ನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಸುಮಾರು ಒಂದು ತಿಂಗಳು ನನಗೆ ಎಚ್ಚರವೇ ಇರಲಿಲ್ಲವಂತೆ. ಆ ಸಮಯದಲ್ಲಿ ನಾನು ಬದುಕುವುದೇ ಇಲ್ಲ ಎಂಬ ಸ್ಥಿತಿ ಇತ್ತಂತೆ ಆದರೆ ನಾನು ಬದುಕಿ ಬರಲು ಕಾರಣವಾಗಿದ್ದು ಡಾ ರಾಜ್ಕುಮಾರ್ ಎಂದರು ಜಗ್ಗೇಶ್.
ಇದನ್ನೂ ಓದಿ:ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ ಮನೆಗೆ ನುಗ್ಗಿದ್ದ ಜಗ್ಗೇಶ್, ಆಮೇಲೇನಾಯ್ತು?
ನಾನು ಆಸ್ಪತ್ರೆಯಲ್ಲಿದ್ದಾಗ ನಾನು ಮಲಗಿದ್ದ ಹಾಸಿಗೆ ಬಳಿ ಬಂದು ನನ್ನ ತಲೆಯ ಮೇಲೆ ಎರಡೂ ಕೈಯಿಟ್ಟು ಅಣ್ಣಾವ್ರು ಏನೋ ಧ್ಯಾನ ಮಾಡುತ್ತಿದ್ದರಂತೆ ಆ ನಂತರ ನನ್ನ ಕುಟುಂಬದವರ ಬಳಿ ಇವನು ಎದ್ದು ಬರುತ್ತಾನೆ ನೀವು ಹೆದರಬೇಡಿ ಎಂದಿದ್ದರಂತೆ. ಹಾಗೆಯೇ ಒಂದೆರಡು ಬಾರಿ ಮಾಡಿದ್ದರಂತೆ. ಈ ವಿಷಯಗಳು ಒಂದು ತಿಂಗಳಾದ ಬಳಿಕ ನನಗೆ ಗೊತ್ತಾದವು. ಆ ನಂತರ ನಾನು ಅಣ್ಣಾವ್ರನ್ನು ಭೇಟಿಯಾಗಲು ಹೋದೆ, ಅದೇಕೋ ಅವರನ್ನು ಕಂಡೊಡನೆ ನನಗೆ ಕಣ್ಣೀರು ಬಂದುಬಿಟ್ಟಿತು, ಆತ್ಮಹತ್ಯೆಗೆ ಕೈಹಾಕಿದ್ದಕ್ಕೆ ಅವರಲ್ಲಿ ಕ್ಷಮೆ ಕೇಳಿದೆ. ಅವರ ಕಾಲು ಮುಟ್ಟಿ ನಮಸ್ಕರಿಸಿದೆ. ಆಗ ಅವರು ತಮ್ಮ ಜೀವನದ ಕಠಿಣ ಪರಿಸ್ಥಿತಿಗಳ ಬಗ್ಗೆ ಹೇಳಿ ಧೈರ್ಯ ತುಂಬಿದರು. ನೀನು ಗೆಲ್ಲುತ್ತೀಯ, ಬೆಳೆಯುತ್ತೀಯ ಎಂದು ಹಾರೈಸಿದರು ಅವರು ಹೇಳಿದಂತೆಯೇ ಆಯ್ತು.
ಆ ಘಟನೆ ಆದ ಬಳಿಕ ಸೋಮ ಹಾಗೂ ಪಟ್ಟಣಕ್ಕೆ ಬಂದ ಪುಟ್ಟಣ್ಣ ಸಿನಿಮಾಗಳನ್ನು ಮಾಡಿದೆ. ಎರಡೂ ಸಿನಿಮಾಗಳನ್ನು ನನ್ನ ಕಚೇರಿಯಲ್ಲಿಯೇ ವ್ಯಾಪಾರ ಮಾಡಿದೆ. ಎರಡೂ ಸಿನಿಮಾಗಳು ಅದ್ಭುತ ಹಿಟ್ಗಳಾದವು. ನಾನು ಬ್ಯುಸಿನೆಸ್ನಿಂದ ಕಳೆದುಕೊಂಡಿದ್ದ ಎಲ್ಲ ಹಣವನ್ನು ಕೇವಲ 11 ತಿಂಗಳ ಒಳಗಾಗಿ ಮತ್ತೆ ಗಳಿಸಿಕೊಂಡೆ. ಸಿನಿಮಾಕ್ಕೆ ಮೂರು ಲಕ್ಷ ಸಂಭಾವನೆ ಪಡೆಯುತ್ತಿದ್ದ ನಾನು 9 ಲಕ್ಷ ಸಂಭಾವನೆ ತೆಗೆದುಕೊಳ್ಳುವಂತಾದೆ. ಆ ನಂತರ ಮತ್ತೆ ಅಣ್ಣಾವ್ರ ಬಳಿ ಹೋದೆ ಎಲ್ಲವೂ ಹೇಳಿಕೊಂಡೆ, ಆಗಲೂ ಹೇಳಿದರು, ಇದೇನೂ ಅಲ್ಲ ನೀನು ಇನ್ನೂ ಬೆಳೆಯುತ್ತಿಯ ಎಂದು ಈಗಲೂ ಅದೇ ಆಗುತ್ತಿದೆ ಎಂದು ನೆನಪು ಮಾಡಿಕೊಂಡಿದ್ದಾರೆ ನಟ ಜಗ್ಗೇಶ್. ಅವರ ನಟನೆಯ ರಾಘವೇಂದ್ರ ಸ್ಟೋರ್ಸ್ ಕನ್ನಡ ಸಿನಿಮಾ ಇದೇ ವಾರ ಏಪ್ರಿಲ್ 28ಕ್ಕೆ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ