AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ ಮನೆಗೆ ನುಗ್ಗಿದ್ದ ಜಗ್ಗೇಶ್, ಆಮೇಲೇನಾಯ್ತು?

Jaggesh-Ambareesh: ಒಮ್ಮೆ ಮಧ್ಯರಾತ್ರಿ ಕಂಠಪೂರ್ತಿ ಕುಡಿದು ಸಿಟ್ಟಿನಲ್ಲಿ ಅಂಬರೀಶ್ ಮನೆಗೆ ನುಗ್ಗಿದ್ದರಂತೆ ಜಗ್ಗೇಶ್, ಆಮೇಲೇನಾಯ್ತು?

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ ಮನೆಗೆ ನುಗ್ಗಿದ್ದ ಜಗ್ಗೇಶ್, ಆಮೇಲೇನಾಯ್ತು?
ಅಂಬರೀಶ್-ಜಗ್ಗೇಶ್
Follow us
ಮಂಜುನಾಥ ಸಿ.
|

Updated on: Apr 21, 2023 | 5:03 PM

ನಟ ಜಗ್ಗೇಶ್ (Jaggesh) ಈಗ ಸಂಸದರೂ ಹೌದು. ಜೊತೆಗೆ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ವೃತ್ತಿಯಲ್ಲಿ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಹಿನ್ನಡೆ, ಸವಾಲುಗಳನ್ನು ಎದುರಿಸಿ ಮುಂದೆ ಬಂದಿರುವ ಜಗ್ಗೇಶ್, ಕಾಲ-ಕಾಲಕ್ಕೆ ಜೀವನ ಕಲಿಸಿದ ಪಾಠಗಳನ್ನು ಕಲಿಯುತ್ತಾ ಬೆಳೆದು ಬಂದವರು. ಉತ್ತಮ ದಿನಗಳಷ್ಟೆ, ಕೆಟ್ಟ ದಿನಗಳನ್ನೂ ಕಂಡಿರುವ ಜಗ್ಗೇಶ್, ಅಂಥಹದೇ ಒಂದು ಕೆಟ್ಟ ದಿನದಲ್ಲಿ ಬಹಳ ಸಿಟ್ಟು ಮಾಡಿಕೊಂಡು ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ (Ambareesh) ಮನೆಗೆ ನುಗ್ಗಿದ್ದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಅಂದು ಅಂಬರೀಶ್ ಮಾಡಿದ ಸಹಾಯವನ್ನೂ ನೆನಪು ಮಾಡಿಕೊಂಡಿದ್ದಾರೆ.

ಯಾವುದೇ ಹಿನ್ನೆಲೆ ಇಲ್ಲದೆ ಕೆಲವೇ ರುಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡು ಪತ್ನಿಯೊಟ್ಟಿಗೆ ಬೆಂಗಳೂರಿಗೆ ಬಂದು ಸಿನಿಮಾ ರಂಗದಲ್ಲಿ ನೆಲೆಗೊಳ್ಳಲು ಶ್ರಮಪಡುತ್ತಿದ್ದ ಜಗ್ಗೇಶ್​ಗೆ ಆರಂಭದಲ್ಲಿ ಕಷ್ಟವಾದರೂ ಬಳಿಕ ಅವಕಾಶಗಳು ಸಿಗುತ್ತವೆ, ಕೆಲವೇ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ನಟ, ಹಾಸ್ಯ ನಟರಾಗಿ ಜಗ್ಗೇಶ್ ಗುರುತಿಸಿಕೊಳ್ಳುತ್ತಾರೆ. ಸೆಕೆಂಡ್ ಹೀರೋ ಆಗಿಯೂ ನಟಿಸಲು ಆರಂಭಿಸುತ್ತಾರೆ. ಆಗ ಒಮ್ಮೆ ಅಂಬರೀಶ್ ಅವರು ಹೀರೋ ಆಗು ಎನ್ನುತ್ತಾರೆ. ಅಂಬರೀಶ್ ಮಾತು ಕೇಳಿ ಉಪೇಂದ್ರ ನಿರ್ದೇಶನದ ತರ್ಲೆ ನನ್ಮಗ ಸಿನಿಮಾ ಪ್ರಾರಂಭಿಸುತ್ತಾರಾದರೂ ಆ ಸಿನಿಮಾ ನಿಂತು ಹೋಗುತ್ತದೆ.

ಅದಾದ ಬಳಿಕ ತಾವು ಕೂಡಿದ್ದ ಐದು ಲಕ್ಷ, ತಮ್ಮ ಸಹೋದರನ ಐದು ಲಕ್ಷ ಸೇರಿಸಿ ಭಂಡ ನನ್ನ ಗಂಡ ಕತೆ ಬರೆದು ತಾವೇ ನಾಯಕ ಆಗುತ್ತಾರೆ. ಸಿನಿಮಾ ಏನೋ ಚೆನ್ನಾಗಿ ಮೂಡಿ ಬರುತ್ತದೆ ಆದರೆ ಸಿನಿಮಾದ ಬಿಡುಗಡೆ ಸಮಯದಲ್ಲ ಬಹಳ ಇಕ್ಕಟ್ಟಾಗಿಬಿಡುತ್ತದೆ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತ್​ನಾಗ್, ಶಂಕರ್​ನಾಗ್, ರವಿಚಂದ್ರನ್, ಪ್ರಭಾಕರ್ ಇನ್ನೂ ಹಲವು ಸ್ಟಾರ್​ಗಳ ನಡುವೆ ಜಗ್ಗೇಶ್​ ಸಿನಿಮಾಕ್ಕೆ ಮಾರುಕಟ್ಟೆಯೇ ಇರುವುದಿಲ್ಲ ಬಿಡುಗಡೆ ಮಾಡಲು ಯಾರೂ ಒಪ್ಪಿಕೊಳ್ಳುವುದಿಲ್ಲ. ಬಿಡುಗಡೆ ಮಾಡಲು ಇನ್ನೂ ನಾಲ್ಕು ಲಕ್ಷ ಹೆಚ್ಚು ಖರ್ಚಾಗುತ್ತದೆ ಎಂದು ಬಿಡುತ್ತಾರೆ.

ಇದ್ದ ಹಣವನ್ನು ತೊಡಗಿಸಿದ್ದ ಜಗ್ಗೇಶ್, ತಮ್ಮ ಸಿನಿಮಾ ಬಿಡುಗಡೆ ಮಾಡಲಾಗುತ್ತಿಲ್ಲ ಎಂಬ ಸಿಟ್ಟಲ್ಲಿ, ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಅಂಬರೀಶ್ ಮನೆಗೆ ನುಗ್ಗುತ್ತಾರೆ. ಆಗ ಯಾವುದೋ ಸಚಿವರೊಟ್ಟಿಗೆ ಮಾತನಾಡುತ್ತಿರುತ್ತಾರೆ ಅಂಬರೀಶ್. ಈ ಸಮಯದಲ್ಲಿ ಕುಡಿದು ಬಂದಿದ್ದ ಜಗ್ಗೇಶ್ ಅನ್ನು ಕಂಡು ಚೆನ್ನಾಗಿ ಬೈಯುತ್ತಾರೆ. ಆದರೆ ಜಗ್ಗೇಶ್, ನಿಮ್ಮ ಮಾತು ಕೇಳಿ ಸಿನಿಮಾ ಮಾಡಿದ್ದೇನೆ ಆದರೆ ಈಗ ಬಿಡುಗಡೆ ಮಾಡಲಾಗುತ್ತಿಲ್ಲ ಎಂದಾಗ ಜಗ್ಗೇಶ್ ಅನ್ನು ವಿಷ್ಣುರ್ಧನ್ ಅವರ ಅಣ್ಣನ ಬಳಿ ಕಳಿಸುತ್ತಾರೆ. ಅಂತೆಯೇ ವಿಷ್ಣುವರ್ಧನ್ ಅವರ ಅಣ್ಣನ ಬಳಿ ಹೋದಾಗ, ಅವರು ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಲ್ಲದೆ ಹಣ ನೀಡಿ ಬಿಡುಗಡೆಗೆ ಸಹಾಯ ಮಾಡುತ್ತಾರೆ.

ಇದನ್ನೂ ಓದಿ:ಸಿಟಿಆರ್ ದೋಸೆ ಮೆಲ್ಲುತ್ತಾ ಜಗ್ಗೇಶ್-ರಾಘಣ್ಣ ಮಾತು, ನಡುವೆ ಸುಳಿದಾಡಿದ ಅಪ್ಪು ನೆನಪು

ಭಂಡ ನನ್ನ ಗಂಡ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ. ಹದಿನಾಲ್ಕು ಲಕ್ಷದಲ್ಲಿ ಮಾಡಿದ ಆ ಸಿನಿಮಾ ಬರೋಬ್ಬರಿ 60 ಲಕ್ಷಕ್ಕೂ ಹೆಚ್ಚು ಹಣ ಮಾಡುತ್ತದೆ. ಆಗಿನ ಕಾಲಕ್ಕೆ ಅದು ಬಹಳ ದೊಡ್ಡ ಬಾಬತ್ತು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಈ ವಿಷಯ ಹೇಳಿಕೊಂಡಿರುವ ಜಗ್ಗೇಶ್, ಇಂದು ನನ್ನ ಬಳಿ ಇರುವ ಹಲವು ಆಸ್ತಿಗಳು ಆ ಹಣದಿಂದಲೇ ಖರೀದಿ ಮಾಡಿದಂಥಹವು ಎಂದಿದ್ದಾರೆ.

ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಮುಂದಿನ ಏಪ್ರಿಲ್ 28ಕ್ಕೆ ತೆರೆಗೆ ಬರಲಿದೆ. ಸಿನಿಮಾವನ್ನು ಸಂತೋಶ್ ಆನಂದ್​ರಾಮ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲಮ್ಸ್​ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಜಗ್ಗೇಶ್ ಜೊತೆ ನಾಯಕಿಯಾಗಿ ಶ್ವೇತಾ ಶ್ರೀವತ್ಸ ನಟಿಸಿದ್ದಾರೆ. ದತ್ತಣ್ಣ, ಅಚ್ಯುತ್ ಕುಮಾರ್ ಸಹ ಜೊತೆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ