‘ಈಗ’ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್‌ನ ಸೂಪರ್ ಹಿಟ್ 'ಈಗ' ಸಿನಿಮಾ ಇತ್ತೀಚೆಗೆ ವಿದೇಶದ ವಿಶೇಷ ಪ್ರದರ್ಶನದಲ್ಲೂ ಧೂಳೆಬ್ಬಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹಳೆಯ ವಿಡಿಯೋದಲ್ಲಿ, 'ಈಗ' ಚಿತ್ರದ ಜಟಿಲ ಖಳನಾಯಕನ ಪಾತ್ರಕ್ಕೆ ಸುದೀಪ್ ಅವರನ್ನೇ ಆಯ್ಕೆ ಮಾಡಲು ಇದ್ದ ಮುಖ್ಯ ಕಾರಣ ಹಾಗೂ ಅಮಿತಾಭ್ ಬಚ್ಚನ್ ಎದುರು ಅವರ ನಟನೆ ನೋಡಿ ಬೆರಗಾದ ಕ್ಷಣವನ್ನು ರಾಜಮೌಳಿ ಬಿಚ್ಚಿಟ್ಟಿದ್ದಾರೆ.

ಈಗ ಚಿತ್ರಕ್ಕೆ ಸುದೀಪ್ ಅವರೇ ಫಸ್ಟ್ ಆ್ಯಂಡ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ
ರಾಜಮೌಳಿ-ಸುದೀಪ್
Edited By:

Updated on: Jul 03, 2026 | 11:15 AM

ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಕಾಂಬಿನೇಶನ್‌ನ ‘ಈಗ’ ಸಿನಿಮಾ ಎಷ್ಟು ದೊಡ್ಡ ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಈ ಚಿತ್ರದಲ್ಲಿ ಸುದೀಪ್ ಅವರ ಅಪ್ರತಿಮ ಖಳನಾಯಕನ ನಟನೆಗೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ವಿದೇಶದಲ್ಲಿ ನಡೆದಿದ್ದು, ಎಲ್ಲರೂ ಫಿದಾ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಳೆಯ ಸಂದರ್ಶನದ ವಿಡಿಯೋವೊಂದರಲ್ಲಿ ರಾಜಮೌಳಿ ಅವರು, ‘ಈಗ’ ಚಿತ್ರಕ್ಕೆ ಸುದೀಪ್ ಅವರನ್ನೇ ವಿಲನ್ ಪಾತ್ರಕ್ಕೆ ಆಯ್ಕೆ ಮಾಡಲು ಇದ್ದ ಮುಖ್ಯ ಕಾರಣವನ್ನು ಬಹಿರಂಗಪಡಿಸಿದ್ದರು.

ಕೇವಲ ‘ವುಮನೈಸರ್’ ಪಾತ್ರವಲ್ಲ, ಇದೊಂದು ಜಟಿಲ ಕ್ಯಾರೆಕ್ಟರ್

ಸಂದರ್ಶನದಲ್ಲಿ ನಿರೂಪಕರು, ‘ಸುದೀಪ್ ಅವರಂತಹ ದೊಡ್ಡ ನಟನನ್ನು ಕೇವಲ ಒಬ್ಬ ವುಮನೈಸರ್ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವೇನು?’ ಎಂದು ಪ್ರಶ್ನಿಸಿದಾಗ ರಾಜಮೌಳಿ ಅವರು ಅದನ್ನು ಸ್ಪಷ್ಟಪಡಿಸಿದರು. ‘ವುಮನೈಸರ್ ಎಂಬುದು ಆ ಪಾತ್ರದ ಒಂದು ಸಣ್ಣ ಭಾಗವಷ್ಟೇ. ಆದರೆ ಆ ಕ್ಯಾರೆಕ್ಟರ್‌ನ ವ್ಯಾಪ್ತಿ ತುಂಬಾ ದೊಡ್ಡದಾಗಿತ್ತು’ ಎಂದಿದ್ದರು.

‘ಚಿತ್ರದಲ್ಲಿ ಅಷ್ಟು ಭಯಾನಕ ವಿಲನ್ ಆಗಿರುವ ವ್ಯಕ್ತಿ, ತನ್ನ ಮೊದಲ ಡೈಲಾಗ್‌ನಲ್ಲೇ ‘ಪ್ರತಿ ವಿಷಯಕ್ಕೂ ವೈಲೆನ್ಸ್ ಯಾಕೆ?’ ಅಂತಾನೆ. ಆಮೇಲೆ ಆತ ತುಂಬಾ ವೈಲೆಂಟ್ ಆಗಿ ಬದಲಾಗುತ್ತಾನೆ. ಮಧ್ಯದಲ್ಲಿ ಕಾಮಿಡಿ ಮಾಡುತ್ತಾನೆ, ರೋಮ್ಯಾಂಟಿಕ್ ಆಗುತ್ತಾನೆ, ನಂತರ ಹುಚ್ಚನಂತೆ ಆಡುತ್ತಾನೆ. ಇಷ್ಟೂ ಶೇಡ್‌ಗಳನ್ನು ನಟನೆಯಲ್ಲಿ ತೋರಿಸುವುದು ಕತ್ತಿಯ ಮೇಲಿನ ನಡಿಗೆಯಿದ್ದಂತೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅದು ಓವರ್ ಆಕ್ಟಿಂಗ್ ಎನಿಸಿಕೊಳ್ಳುತ್ತದೆ’ ಎಂದು ರಾಜಮೌಳಿ ಆ ಪಾತ್ರದ ಗಾಂಭೀರ್ಯತೆಯನ್ನು ವಿವರಿಸಿದ್ದರು.

ಅಮಿತಾಭ್ ಬಚ್ಚನ್ ಮುಂದೆ ಸುದೀಪ್ ನಟನೆ ನೋಡಿ ಬೆರಗಾಗಿದ್ದೆ

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ರನ್’ ಚಿತ್ರದಲ್ಲಿ ಸುದೀಪ್ ಅವರ ನಟನೆಯನ್ನು ನೋಡಿ ತಾನು ಫುಲ್ ಫ್ಲಾಟ್ ಆಗಿದ್ದಾಗಿ ರಾಜಮೌಳಿ ನೆನಪಿಸಿಕೊಂಡಿದ್ದಾರೆ. ‘ರನ್ ಸಿನಿಮಾದಲ್ಲಿ ಸುದೀಪ್ ಅವರ ಸೂಕ್ಷ್ಮ ನಟನೆ ಹಾಗೂ ಮ್ಯಾನರಿಸಂ ಅದ್ಭುತವಾಗಿತ್ತು. ಅದರಲ್ಲೂ ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅವರ ಮುಂದೆಯೇ ಅಷ್ಟು ಭರ್ಜರಿಯಾಗಿ ನಟಿಸುವುದನ್ನು ಕಂಡು, ಸುದೀಪ್ ನಿಜಕ್ಕೂ ಒಬ್ಬ ಗ್ರೇಟ್ ಆಕ್ಟರ್ ಎಂದು ನನಗೆ ಅನಿಸಿತ್ತು. ಹಾಗಾಗಿ ‘ಈಗ’ ಚಿತ್ರದ ಕ್ಯಾರೆಕ್ಟರ್ ರೆಡಿಯಾದ ತಕ್ಷಣ ನಮಗೆ ಮೊದಲು ನೆನಪಾಗಿದ್ದೇ ಸುದೀಪ್’ ಎಂದಿದ್ದರು ರಾಜಮೌಳಿ

ಸುದೀಪ್ ಅವರೇ ಫಸ್ಟ್… ಅವರೇ ಲಾಸ್ಟ್

ಸಂದರ್ಶನದ ಕೊನೆಯಲ್ಲಿ ನಿರೂಪಕರು, ‘ಹಾಗಾದರೆ ಈ ಪಾತ್ರಕ್ಕೆ ನಿಮ್ಮ ಮೊದಲ ಆಯ್ಕೆ ಸುದೀಪ್ ಅವರೇನಾ?’ ಎಂದು ಕೇಳಿದಾಗ, ರಾಜಮೌಳಿ ಅವರು ನಗುತ್ತಾ, ‘ಫಸ್ಟ್ ಚಾಯ್ಸ್ ಕೂಡ ಅವರೇ, ಲಾಸ್ಟ್ ಚಾಯ್ಸ್ ಕೂಡ ಅವರೇ! ಫೈನಲ್ ಆಗಿ ಎಲ್ಲವೂ ಅವರೇ ಆಗಿದ್ದರು’ ಎಂದು ಹೇಳುವ ಮೂಲಕ ಕಿಚ್ಚನ ಮೇಲಿರುವ ತಮ್ಮ ಗೌರವ ಹಾಗೂ ನಂಬಿಕೆಯನ್ನು ವ್ಯಕ್ತಪಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:14 am, Fri, 3 July 26

Follow Us