ಹಾಲಿವುಡ್ ಸಿನಿಮಾಗಳನ್ನು ನೋಡಿ ಭಾರತದ ನಿರ್ದೇಶಕರು ಅಚ್ಚರಿ ಪಡುತ್ತಿದ್ದ ಕಾಲವೊಂದಿತ್ತು. ಈ ಸಿನಿಮಾಗಳ ಮೇಕಿಂಗ್ ಬಗ್ಗೆ ಅಚ್ಚರಿ ಮೂಡುವಂತೆ ಅವರು ಮಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಭಾರತದ ನಿರ್ದೇಶಕರ ಕೆಲಸವನ್ನು ವಿದೇಶಿಗರು ಮೆಚ್ಚಿಕೊಳ್ಳುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ (RRR Movie) ಸೇರಿ ಭಾರತದ ಅನೇಕ ಸಿನಿಮಾಗಳಿಗೆ ವಿದೇಶದಲ್ಲಿ ಮನ್ನಣೆ ಸಿಗುತ್ತಿದೆ. ವಿಶೇಷ ಎಂದರೆ, ‘ಆರ್ಆರ್ಆರ್’ ಸಿನಿಮಾ ಹೇಗೆ ಮಾಡಿದಿರಿ ಎಂಬುದನ್ನು ನನಗೂ ತಿಳಿಸಿ ಎಂದು ರಾಜಮೌಳಿಗೆ (SS Rajamouli) ಹಾಲಿವುಡ್ ದಿಗ್ಗಜ ಸ್ಟೀವನ್ ಸ್ಪೀಲ್ಬರ್ಗ್ ಕೋರಿದ್ದಾರೆ.
ರಾಜಮೌಳಿ ಹಾಗೂ ಸ್ಟೀವನ್ ಸ್ಪೀಲ್ಬರ್ಗ್ ಅವರು ಈ ವರ್ಷದ ಆರಂಭದಲ್ಲಿ ಭೇಟಿ ಆಗಿದ್ದರು. ಲಾಸ್ ಏಂಜಲೀಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಭೇಟಿ ನಡೆದಿತ್ತು. ಈ ಸಂದರ್ಭದಲ್ಲಿ ಅವರು ‘ಆರ್ಆರ್ಆರ್’ ಚಿತ್ರವನ್ನು ನೋಡಿರಲಿಲ್ಲ. ಹೀಗಾಗಿ, ಈ ಸಿನಿಮಾ ಬಗ್ಗೆ ಅವರಿಗೆ ಏನನ್ನೂ ಹೇಳೋಕೆ ಸಾಧ್ಯವಾಗಿರಲಿಲ್ಲ. ಆಗ ಇಬ್ಬರೂ ಉಭಯಕುಶಲೋಪರಿ ಮಾತನಾಡಿಕೊಂಡಿದ್ದರು. ಈಗ ಸ್ಟೀವನ್ ಸ್ಪೀಲ್ಬರ್ಗ್ ಅವರು ‘ಆರ್ಆರ್ಆರ್’ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
‘ಆರ್ಆರ್ಆರ್ ಸಿನಿಮಾ ಅದ್ಭುತವಾಗಿದೆ. ನನ್ನ ಕಣ್ಣುಗಳಲ್ಲೇ ಅದನ್ನು ನಂಬಲು ಸಾಧ್ಯವಾಗಿಲ್ಲ. ರಾಮ್ ಚರಣ್, ಜ್ಯೂ.ಎನ್ಟಿಆರ್, ಆಲಿಯಾ ಭಟ್ ಅವರ ನಟನೆ ಅದ್ಭುತವಾಗಿತ್ತು. ಚಿತ್ರದ ಕ್ಲೈಮ್ಯಾಕ್ಸ್ ಇಷ್ಟವಾಯಿತು. ‘ಆರ್ಆರ್ಆರ್’ ಚಿತ್ರಕ್ಕೆ ಅಭಿನಂದನೆಗಳು’ ಎಂದು ಸ್ಟೀವನ್ ಸ್ಪೀಲ್ಬರ್ಗ್ ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜಮೌಳಿ ಅವರು, ‘ಧನ್ಯವಾದಗಳು. ನಿಮ್ಮ ಈ ಮಾತಿನಿಂದ ಕುರ್ಚಿ ಬಿಟ್ಟು ಡ್ಯಾನ್ಸ್ ಮಾಡಬೇಕು ಎನಿಸುತ್ತಿದೆ’ ಎಂದಿದ್ದಾರೆ ರಾಜಮೌಳಿ.
‘ಆರ್ಆರ್ಆರ್’ ಚಿತ್ರದ ಮೇಕಿಂಗ್ ಬಗ್ಗೆ ಸ್ಟೀವನ್ ಸ್ಪೀಲ್ಬರ್ಗ್ ಅವರಿಗೆ ಒಂದಷ್ಟು ಪ್ರಶ್ನೆಗಳು ಉಳಿದುಕೊಂಡಿವೆ. ಮುಖತಃ ಭೇಟಿ ಆದಾಗ ಈ ಪ್ರಶ್ನೆಗಳನ್ನು ಕೇಳುವುದಾಗಿ ರಾಜಮೌಳಿಗೆ ಸ್ಟೀವನ್ ಸ್ಪೀಲ್ಬರ್ಗ್ ಹೇಳಿದ್ದಾರೆ. ಇದನ್ನು ಕೇಳಿ ರಾಜಮೌಳಿ ಖುಷಿ ಆಗಿದ್ದಾರೆ.
ಇದನ್ನೂ ಓದಿ: ‘ಗೋಲ್ಡನ್ ಗ್ಲೋಬ್’ ಬಳಿಕ ವಿದೇಶದಲ್ಲಿ ಮತ್ತೆರಡು ಪ್ರಶಸ್ತಿ ಬಾಚಿಕೊಂಡ ‘ಆರ್ಆರ್ಆರ್’ ಚಿತ್ರ
‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು.. ಹಾಡು ಆಸ್ಕರ್ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಅವಾರ್ಡ್ ಕಾರ್ಯಮದಲ್ಲಿ ‘ಆರ್ಆರ್ಆರ್’ ತಂಡ ಭಾಗಿ ಆಗಲಿದೆ. ಭಾರತಕ್ಕೆ ಒಂದು ಅವಾರ್ಡ್ ತರುವ ಕನಸನ್ನು ರಾಜಮೌಳಿ ಕಾಣುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ