ರಾಜಮೌಳಿಯ ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ನಟನೆ?

Varanasi movie: ‘ವಾರಣಾಸಿ’ ಹಾಲಿವುಡ್ ಲೆವೆಲ್​​ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಭಾರತ ಮಾತ್ರವಲ್ಲದೆ ಹಾಲಿವುಡ್ ಮಾರುಕಟ್ಟೆಯನ್ನೂ ಸಹ ಗಮನದಲ್ಲಿರಿಸಿಕೊಂಡೇ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ, ಪೃಥ್ವಿರಾಜ್ ಸುಕುಮಾರ್ ವಿಲನ್. ಇವರ ಜೊತೆಗೆ ಇನ್ನೂ ಕೆಲವು ಬೇರೆ ಬೇರೆ ಕಲಾವಿದರು ನಟಿಸುತ್ತಿದ್ದಾರೆ. ಆದರೆ ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಸುದೀಪ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಾಜಮೌಳಿಯ ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ನಟನೆ?
Ssr Sudeep

Updated on: Feb 19, 2026 | 6:47 PM

ಎಸ್​​ಎಸ್ ರಾಜಮೌಳಿ (SS Rajamouli) ಪ್ರಸ್ತುತ ಭಾರತ ಚಿತ್ರರಂಗದ ನಂಬರ್ 1 ನಿರ್ದೇಶಕ. ಭಾರಿ ಬಜೆಟ್​ನ ‘ವಾರಣಾಸಿ’ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಹಾಲಿವುಡ್ ಲೆವೆಲ್​​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾವನ್ನು ಭಾರತ ಮಾತ್ರವಲ್ಲದೆ ಹಾಲಿವುಡ್ ಮಾರುಕಟ್ಟೆಯನ್ನೂ ಸಹ ಗಮನದಲ್ಲಿರಿಸಿಕೊಂಡೇ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ, ಪೃಥ್ವಿರಾಜ್ ಸುಕುಮಾರ್ ವಿಲನ್. ಇವರ ಜೊತೆಗೆ ಇನ್ನೂ ಕೆಲವು ಬೇರೆ ಬೇರೆ ಕಲಾವಿದರು ನಟಿಸುತ್ತಿದ್ದಾರೆ. ಆದರೆ ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಸುದೀಪ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಿಂಕ್​​ವಿಲ್ಲಾ ಸೌಥ್ ಮಾಡಿರುವ ವರದಿಯಂತೆ, ಸುದೀಪ್ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಹಿಂದೆ ರಾಜಮೌಳಿ ನಿರ್ದೇಶನದ ‘ಈಗ’ ಮತ್ತು ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದು, ಎರಡೂ ಸಿನಿಮಾಗಳಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಸುದೀಪ್ ನೀಡಿದ್ದರು. ಇದೀಗ ಮೂರನೇ ಬಾರಿಗೆ ರಾಜಮೌಳಿ ಜೊತೆಗೆ ಸುದೀಪ್ ಜೊತೆ ಆಗುತ್ತಿದ್ದಾರೆ. ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ಅವರ ಪಾತ್ರವು, ಸಿನಿಮಾದ ಕತೆಗೆ ಮಹತ್ತರವಾದ ತಿರುವು ನೀಡುವ ಪಾತ್ರವಾಗಿರುತ್ತದೆ ಎನ್ನಲಾಗುತ್ತಿದೆ.

ಸ್ವತಃ ರಾಜಮೌಳಿ ಅವರೇ ಈ ಹಿಂದೆ ಹಲವು ಬಾರಿ ಹೇಳಿಕೊಂಡಿರುವಂತೆ ಸುದೀಪ್, ಅವರ ನೆಚ್ಚಿನ ನಟ. ‘ಈಗ’ ಸಿನಿಮಾದ ಸುದೀಪ್ ನಟನೆ ರಾಜಮೌಳಿಗೆ ಅಚ್ಚುಮೆಚ್ಚಂತೆ, ‘ನನ್ನ ಸಿನಿಮಾಗಳಲ್ಲಿ ನನಗೆ ನಾಯಕನಿಗಿಂತಲೂ ವಿಲನ್ ಇಷ್ಟ, ಅದರಲ್ಲೂ ನನ್ನ ಸಿನಿಮಾಗಳಲ್ಲಿ ನನ್ನ ಮೆಚ್ಚಿನ ವಿಲನ್ ಸುದೀಪ್’ ಎಂದು ಈ ಹಿಂದೆ ಅವರು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಸುದೀಪ್ ಅವರನ್ನು ‘ಬಾಹುಬಲಿ’ ಸಿನಿಮಾದ ಅರೇಬಿಯಾದ ಕತ್ತಿಗಳ ವ್ಯಾಪಾರಿ ಅಸ್ಲಂ ಖಾನ್ ಪಾತ್ರಕ್ಕೆ ಹಾಕಿಕೊಂಡಿದ್ದರು. ಒಳ್ಳೆಯ ಫೈಟ್ ಸಹ ಆ ಸಿನಿಮಾನಲ್ಲಿ ಸುದೀಪ್ ಅವರಿಗೆ ಇತ್ತು.

ಇದನ್ನೂ ಓದಿ:‘ವಾರಣಾಸಿ’ ಚಿತ್ರಕ್ಕಾಗಿ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ ರಾಜಮೌಳಿ

ರಾಜಮೌಳಿ ಅವರ ಈ ವರೆಗಿನ ಸಿನಿಮಾಗಳಲ್ಲಿಯೇ ಅತ್ಯಂತ ನಿರೀಕ್ಷಿತ ಮತ್ತು ಅತ್ಯಂತ ದುಬಾರಿ ಸಿನಿಮಾ ಆಗಿರುವ ‘ವಾರಣಾಸಿ’ಯಲ್ಲೂ ಸುದೀಪ್ ಅವರಿಗೆ ವಿಶೇಷ ಪಾತ್ರವೊಂದನ್ನು ರಾಜಮೌಳಿ ನೀಡುತ್ತಿದ್ದು, ಆ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಸುದೀಪ್ ಅವರು ‘ವಾರಣಾಸಿ’ ಸಿನಿಮಾನಲ್ಲಿ ನಟಿಸಲಿರುವ ಸುದ್ದಿ ಖಾತ್ರಿ ಆಗಿಲ್ಲ. ಆದರೆ ಆದಷ್ಟು ಬೇಗ ಸುದ್ದಿಯನ್ನು ಚಿತ್ರತಂಡವೇ ಹಂಚಿಕೊಳ್ಳಲಿದೆ ಎನ್ನಲಾಗುತ್ತಿದೆ.

‘ವಾರಣಾಸಿ’ ಸಿನಿಮಾವು ಮುಂದಿನ ವರ್ಷ ಏಪ್ರಿಲ್ 07 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅರ್ಧಕ್ಕೂ ಹೆಚ್ಚು ಭಾಗದ ಚಿತ್ರೀಕರಣವನ್ನು ರಾಜಮೌಳಿ ಮುಗಿಸಿದ್ದಾರೆ. ಈ ಸಿನಿಮಾಕ್ಕೆ ಸುಮಾರು 1000 ಕೋಟಿ ಬಜೆಟ್ ಹೂಡಲಾಗಿದ್ದು, ಸಿನಿಮಾವನ್ನು ಪಿವಿಆರ್ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಿರುವುದು ವಿಶೇಷ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Thu, 19 February 26