ಹಿಂದಿ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಕೆ.ಡಿ. ಚಂದ್ರನ್ ಅವರು ಮೇ 16ರಂದು ಮೃತಪಟ್ಟಿದ್ದಾರೆ. ಕೆಲ ವರ್ಷಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಈಗ ಕೊನೆ ಉಸಿರೆಳೆದಿದ್ದಾರೆ. ಈ ವಿಚಾರವನ್ನು ಅವರ ಮಗಳು ಹಾಗೂ ನಟಿ ಸುಧಾ ಚಂದ್ರನ್ ಖಚಿತಪಡಿಸಿದ್ದಾರೆ.
‘ನನ್ನ ತಂದೆಗೆ ಕಳೆದ ಕೆಲ ದಿನಗಳಿಂದ ಜ್ವರ ಇತ್ತು. ನಾವು ಕೊವಿಡ್ ಅಂದುಕೊಂಡೆವು. ಆದರೆ, ಕೊರೊನಾ ನೆಗೆಟಿವ್ ಬಂದಿತ್ತು. ಜ್ವರ ಮಾತ್ರ ಕಡಿಮೆ ಆಗಿರಲಿಲ್ಲ. ದೇಹದ ಉಷ್ಣತೆ ಮಿತಿ ಮೀರಿತ್ತು. ಅವರಿಗೆ ಸಕ್ಕರೆ ಕಾಯಿಲೆ ಇತ್ತು. ವಯಸ್ಸು 86 ದಾಟಿತ್ತು. ಅವರ ಅಂಗಗಳು ಒಂದೊಂದೇ ಕೆಲಸ ಮಾಡುವುದನ್ನು ನಿಲ್ಲಿಸಿದ್ದವು’ ಎಂದು ಸುಧಾ ತಂದೆ ಸಾವಿಗೆ ಕಾರಣ ನೀಡಿದ್ದಾರೆ.
‘2004ರಲ್ಲಿ ನಾನು ಅಪಘಾತಕ್ಕೆ ಒಳಗಾಗಿದ್ದೆ. ನನ್ನ ಕಾಲು ಮುರಿದು ಹೋಗಿತ್ತು. ಆಗ ತಂದೆ ನನ್ನ ಬಳಿ ಬಂದು, ಹೆದರಬೇಡ ನಾನು ನಿನಗೆ ಕಾಲಾಗಿ ನಿಂತುಕೊಳ್ಳುತ್ತೇನೆ ಎಂದಿದ್ದರು. ನನ್ನ ತಂದೆ ಬಗ್ಗೆ ನನಗೆ ವಿಶೇಷ ಗೌರವ. ಅವರು ನನಗೆ ಹೋರಾಡುವುದನ್ನು ಕಲಿಸಿದ್ದಾರೆ. ಹಿಡಿದ ಕೆಲಸ ಪೂರ್ಣಗೊಳಿಸೋಕೆ ಕಲಿಸಿಕೊಟ್ಟಿದ್ದು ಅವರೇ. ಅಪಘಾತವಾದ ನಂತರವೂ ಭರತನಾಟ್ಯ ಮುಂದುವರಿಸಲು ಕಾರಣ ಅವರೇ ಎಂದಿದ್ದಾರೆ ಸುಧಾ.
‘ನನಗೆ ಅಪಘಾತವಾದ ವರ್ಷವೇ ಅಮ್ಮ ತೀರಿಕೊಂಡರು. ಅದಾದ ನಂತರ 9 ವರ್ಷಗಳ ಕಾಲ ತಂದೆ ನನ್ನ ಜತೆಗೇ ಇದ್ದರು. ಬೆಳಗ್ಗೆ ಬೇಗ ಏಳುತ್ತಿದ್ದರು. ಅಮ್ಮ ಮಾಡುವ ಕೆಲಸವನ್ನು ಅವರೇ ಮಾಡುತ್ತಿದ್ದರು. ನನಗೆ ಅಮ್ಮ ಇಲ್ಲ ಎನ್ನುವ ಭಾವನೆ ಕಾಡೋಕೆ ಅವರು ಯಾವಾಗಲೂ ಅವಕಾಶ ನೀಡಿಲ್ಲ’ ಎಂದಿದ್ದಾರೆ ಅವರು.
1984ರಲ್ಲಿ ತೆರೆಗೆ ಬಂದ ತೆಲುಗಿನ ‘ಮಯೂರಿ’ ಸಿನಿಮಾ ಮೂಲಕ ಸುಧಾ ಬಣ್ಣದ ಬದುಕು ಆರಂಭಿಸಿದರು. 1988ರಲ್ಲಿ ತೆರೆಗೆ ಬಂದ ವಿಷ್ಣುವರ್ಧನ್ ನಟನೆಯ ‘ಒಲವಿನ ಆಸರೆ’ ಚಿತ್ರದಲ್ಲಿ ಚಂದ್ರಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ದಕ್ಷಿಣ ಭಾರತಕ್ಕಿಂತ ಅವರು ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ.
ಇದನ್ನೂ ಓದಿ: ರೈತರ ಸಹಾಯಕ್ಕೆ ನಿಂತ ಉಪೇಂದ್ರ; ಬೆಳೆ ಖರೀದಿಸಿ, ಸಂಕಷ್ಟದಲ್ಲಿ ಇರುವವರಿಗೆ ಹಂಚಿದ ನಟ