
ಭಾರತದಲ್ಲಿ ಕ್ರಿಕೆಟ್, ಸಿನಿಮಾ (Cinema) ಮತ್ತು ರಾಜಕೀಯ ಜೊತೆ-ಜೊತೆಯಾಗಿ ಸಾಗುತ್ತವೆ. ಅದರಲ್ಲೂ ಕ್ರಿಕೆಟ್ ಮತ್ತು ಸಿನಿಮಾಗಳು ಬಲು ಆಪ್ತ ನಂಟು ಹೊಂದಿವೆ. ಆದರೆ ಇನ್ನೇಣು ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ದಕ್ಷಿಣ ಭಾರತದ ಇಬ್ಬರು ದೈತ್ಯರ ನಡುವೆ ಕಾನೂನು ಸಮರ ಏರ್ಪಟ್ಟಿದೆ. ಭಾರತದ ಪ್ರಮುಖ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಸನ್ ಪಿಕ್ಚರ್ಸ್ನವರು ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ದೂರು ದಾಖಲಿಸಿದೆ. ಇದಕ್ಕೆ ಕಾರಣವಾಗಿರುವುದು ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ. ಏನಿದು ವಿವಾದ? ಮಾಹಿತಿ ಇಲ್ಲಿದೆ.
ಮಾರ್ಚ್ 1, 2026 ರಂದು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹೊಸ ಜರ್ಸಿಯನ್ನು ಬಿಡುಗಡೆ ಮಾಡುವ ಪ್ರಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋದಲ್ಲಿ ಎಂಎಸ್ ಧೋನಿ ಅವರ ಎಂಟ್ರಿ ಮತ್ತು ಜರ್ಸಿ ಅನಾವರಣದ ಸಂದರ್ಭದಲ್ಲಿ ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ‘ಜೈಲರ್’ ಮತ್ತು ‘ಜೈಲರ್ 2’ ಮತ್ತು ‘ಕೂಲಿ’ ಸಿನಿಮಾಗಳ ಜನಪ್ರಿಯ ಹಾಡುಗಳು, ಹಿನ್ನೆಲೆ ಸಂಗೀತ ಮತ್ತು ಸಂಭಾಷಣೆಗಳನ್ನು ಬಳಸಲಾಗಿತ್ತು ಇದು ಸನ್ ಪಿಕ್ಚರ್ಸ್‌ನ ಅಸಮಾಧಾನಕ್ಕೆ ಕಾರಣವಾಗಿದೆ.
ಇದೇ ಕಾರಣಕ್ಕೆ ಇದೀಗ ಸನ್ ಪಿಕ್ಚರ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದು ಸಿಎಸ್‌ಕೆ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ದಾವೆ ಹೂಡಿದೆ. ಸನ್ ಪಿಕ್ಚರ್ಸ್ ಪರವಾಗಿ ವಾದ ಮಂಡಿಸಿದ ವಕೀಲರು, ಈ ಚಿತ್ರಗಳ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗಿನ ಒಪ್ಪಂದದಂತೆ ಎಲ್ಲಾ ಹಕ್ಕುಗಳು ಸನ್ ಪಿಕ್ಚರ್ಸ್ ಬಳಿ ಇವೆ. ಸಿಎಸ್‌ಕೆ ಯಾವುದೇ ಪೂರ್ವಾನುಮತಿ ಪಡೆಯದೆ ಇವುಗಳನ್ನು ಬಳಸಿದೆ. ಜರ್ಸಿ ಮತ್ತು ಇತರ ಸರಕುಗಳ ಮಾರಾಟಕ್ಕಾಗಿ ಈ ವಿಡಿಯೋ ಬಳಸಲಾಗುತ್ತಿದ್ದು, ಇದು ವಾಣಿಜ್ಯ ಉದ್ದೇಶದ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಸನ್ ಪಿಕ್ಚರ್ಸ್ ತಂಡವು ಸಿಎಸ್‌ಕೆ ಮೇಲೆ 1 ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕು ಹಾಗೂ ಈ ಹಾಡುಗಳನ್ನು ಬಳಸದಂತೆ ಶಾಶ್ವತ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು
ಚೆನ್ನೈ ತಂಡದ ಪರ ವಾದ ಮಂಡಿಸಿದ ವಕೀಲರು ತಂಡವು ಈಗಾಗಲೇ ಆಕ್ಷೇಪಾರ್ಹ ವಿಡಿಯೋಗಳನ್ನು ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದೆ. ಕಳೆದ ಮೂರು ವರ್ಷಗಳಿಂದ ಇಂತಹ ಹಾಡುಗಳನ್ನು ಬಳಸುತ್ತಿದ್ದರೂ ಸನ್ ನೆಟ್‌ವರ್ಕ್ ಈ ಹಿಂದೆ ಆಕ್ಷೇಪಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಸನ್ ಪಿಕ್ಚರ್ಸ್‌ನ ಅನುಮತಿ ಅಥವಾ ಪರವಾನಗಿ ಪಡೆಯದೆ ಯಾವುದೇ ಸಂಗೀತ ಬಳಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರು ಈ ಕುರಿತು ಅಫಿಡವಿಟ್ ಸಲ್ಲಿಸುವಂತೆ ಸಿಎಸ್‌ಕೆ ಲಿಮಿಟೆಡ್‌ಗೆ ಸೂಚಿಸಿ, ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದ್ದಾರೆ.
ಸನ್ ಪಿಕ್ಚರ್ಸ್ ಅವರ ಮಾಲೀಕರ ಪುತ್ರಿ ಕಾವ್ಯಾ ಮಾರನ್ ಅವರು ಐಪಿಎಲ್ನ ಮತ್ತೊಂದು ಪ್ರಮುಖ ತಂಡವಾಗಿರುವ ಸನ್ರೈಸರ್ಸ್ ಹೈದರಾಬಾದ್ನ ಮಾಲಕಿ ಆಗಿದ್ದಾರೆ. ಹೈದರಾಬಾದ್ ತಂಡವು ಸನ್ ನೆಟ್‌ವರ್ಕ್ ಉದ್ಯಮದ ಭಾಗವೇ ಆಗಿದೆ. ಹಾಗಾಗಿ ಇದು ಒಂದು ರೀತಿ ಎಸ್ಆರ್ಎಚ್ ಮತ್ತು ಸಿಎಸ್‌ಕೆ ನಡುವಿನ ಹೋರಾಟವೂ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ