ಖ್ಯಾತ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಅವರ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಮೇ 13ರಂದು ಅವರ ಜನ್ಮದಿನ. ವಿಶ್ಯಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಯಸ್ಸು ಎಷ್ಟೇ ಆಗಿದ್ದರೂ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿರುವ ಅವರಿಗೆ ಕರ್ನಾಟಕದಲ್ಲೂ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಸನ್ನಿ ಲಿಯೋನ್ ಜನ್ಮದಿನದ ಸಲುವಾಗಿ ಕರುನಾಡಿನ ಹಳ್ಳಿಯೊಂದರಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಮನ ಸೆಳೆದಿದೆ. ಹಳ್ಳಿ ಮಂದಿಯ ಪ್ರೀತಿಗೆ ಸ್ವತಃ ಸನ್ನಿ ಫಿದಾ ಆಗಿದ್ದಾರೆ.
ದಕ್ಷಿಣ ಭಾರತದಲ್ಲಿ ಸ್ಟಾರ್ ನಟರ ಜನ್ಮದಿನದಂದು ಅಭಿಮಾನಿಗಳು ಎತ್ತರದ ಕಟೌಟ್ ನಿಲ್ಲಿಸಿ ಶುಭಕೋರುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಗ ಆ ಗೌರವ ಸನ್ನಿ ಲಿಯೋನ್ ಅವರಿಗೂ ಸಿಕ್ಕಿದೆ. ಲಕ್ಷಣವಾಗಿ ಸೀರೆ ಧರಿಸಿ ನಿಂತಿರುವ ಸನ್ನಿ ಲಿಯೋನ್ ಅವರ ಪೋಟೋ ಹೊಂದಿರುವ ಎತ್ತರದ ಬ್ಯಾನರ್ ಅನ್ನು ಹಳ್ಳಿಯೊಂದರಲ್ಲಿ ನಿಲ್ಲಿಸಲಾಗಿದೆ. ಅದರ ಮೇಲಿರುವ ಬರಹ ಇನ್ನೂ ಅಚ್ಚರಿ ಮೂಡಿಸುವಂತಿದೆ. ‘ಅನಾಥ ಮಕ್ಕಳ ತಾಯಿ; ಅಭಿಮಾನಿಗಳ ದೇವತೆ. ಸನ್ನಿ ಲಿಯೋನ್ಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆಯಲಾಗಿದೆ.
ಅನೇಕ ಸಂದರ್ಭಗಳಲ್ಲಿ ಸನ್ನಿ ಲಿಯೋನ್ ಅವರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ದೇಣಿಗೆ ನೀಡಿದ ಬಗ್ಗೆಯೂ ಹಲವು ಬಾರಿ ವರದಿ ಆಗಿದೆ. ಅಲ್ಲದೆ, ಹೆಣ್ಣು ಮಗುವನ್ನು ದತ್ತು ಪಡೆದು ಅವರು ಸಾಕುತ್ತಿದ್ದಾರೆ. ಈ ಎಲ್ಲ ಕಾರಣದಿಂದಲೇ ಅಭಿಮಾನಿಗಳು ಅವರನ್ನು ‘ಅನಾಥ ಮಕ್ಕಳ ತಾಯಿ; ಅಭಿಮಾನಿಗಳ ದೇವತೆ’ ಎಂದೆಲ್ಲ ಹಾಡಿ ಹೊಗಳಿದ್ದಾರೆ. ವಿಶೇಷವೆಂದರೆ ಈ ಫೋಟೋ ಸನ್ನಿ ಲಿಯೋನ್ ಅವರ ಕಣ್ಣಿಗೆ ಬಿದ್ದಿದೆ. ಕರ್ನಾಟಕದ ಹಳ್ಳಿ ಜನರ ಅಭಿಮಾನಕ್ಕೆ ಅವರು ಫಿದಾ ಆಗಿದ್ದಾರೆ. ಆ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
ನೀಲಿ ಸಿನಿಮಾಗಳ ಲೋಕಕ್ಕೆ ವಿದಾಯ ಹೇಳಿದ ಬಳಿಕ ಸನ್ನಿ ಲಿಯೋನ್ ಅವರು ಬಾಲಿವುಡ್ನಲ್ಲಿ ತೊಡಗಿಕೊಂಡರು. ಹಿಂದಿ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿರುವುದು ಮಾತ್ರವಲ್ಲದೆ, ಅನೇಕ ಚಿತ್ರಗಳಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕವೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡದ ‘ಡಿಕೆ’ ಮತ್ತು ‘ಲವ್ ಯೂ ಆಲಿಯಾ’ ಚಿತ್ರಗಳಲ್ಲಿ ಸನ್ನಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್ಗಳಿವೆ.
ಇದನ್ನೂ ಓದಿ:
ಸನ್ನಿ ಲಿಯೋನ್ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್ ತೆರೆದಿಟ್ಟ ಮಾದಕ ನಟಿ