ಸಂಗೀತ ಮಾಂತ್ರಿಕ ಇಳಯರಾಜಾಗೆ ಕೋರ್ಟ್‌ನಲ್ಲಿ ಸರಣಿ ಹಿನ್ನಡೆ; ಸರಿಗಮ ಸಂಸ್ಥೆಗೆ ಒಲಿದ ಹಕ್ಕು

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಹಳೆಯ ಸೂಪರ್‌‌ಹಿಟ್ ಹಾಡುಗಳ ಹಕ್ಕುಸ್ವಾಮ್ಯ ವಿಚಾರವಾಗಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರಿಂದ ಸರಿಗಮ ಮ್ಯೂಸಿಕ್ ಕಂಪನಿಗೆ ಜಯ ಸಿಕ್ಕಿದ್ದು, ಸಂಗೀತ ಸಂಯೋಜಕರಿಗಿಂತ ಮ್ಯೂಸಿಕ್ ಲೇಬಲ್‌ಗಳ ಅಧಿಕಾರವೇ ಹೆಚ್ಚೆಂದು ಕೋರ್ಟ್ ಸ್ಪಷ್ಟಪಡಿಸಿದಂತಾಗಿದೆ.

ಸಂಗೀತ ಮಾಂತ್ರಿಕ ಇಳಯರಾಜಾಗೆ ಕೋರ್ಟ್‌ನಲ್ಲಿ ಸರಣಿ ಹಿನ್ನಡೆ; ಸರಿಗಮ ಸಂಸ್ಥೆಗೆ ಒಲಿದ ಹಕ್ಕು
ಇಳಯರಾಜ
Image Credit source: Ilayaraja
Edited By:

Updated on: Oct 02, 2026 | 7:56 AM

ಮುಖ್ಯಾಂಶಗಳು

  • ದಿಗ್ಗಜ ಸಂಗೀತ ನಿರ್ದೇಶಕನಿಗೆ ಕಾನೂನು ಆಘಾತ
  • ಸುಪ್ರೀಂ ಕೋರ್ಟ್‌ನಲ್ಲೂ ಇಳಯರಾಜಾಗೆ ಸಿಗದ ರಿಲೀಫ್
  • ದೆಹಲಿ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ 

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾಗೆ ಕಾನೂನು ಸಮರದಲ್ಲಿ ದೊಡ್ಡ ಆಘಾತ ಎದುರಾಗಿದೆ. ತಾವೇ ಸಂಯೋಜಿಸಿದ ಸಾರ್ವಕಾಲಿಕ ಹಿಟ್ ಹಾಡುಗಳ ಹಕ್ಕುಸ್ವಾಮ್ಯ ವಿಚಾರವಾಗಿ ಅವರಿಗೆ ಹಿನ್ನಡೆಯಾಗಿದೆ. ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರಿಂದಾಗಿ ‘ಸರಿಗಮ’ ಮ್ಯೂಸಿಕ್ ಕಂಪನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ತೀರ್ಪು ಸಂಗೀತ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಈ ಕಾನೂನು ಸಂಘರ್ಷದ ಮೂಲ ‘ಅಗತ್ಯಾ’ ಸಿನಿಮಾ. ಈ ಚಿತ್ರಕ್ಕಾಗಿ ಇಳಯರಾಜಾ ಅವರ ‘ಎನ್ ಇನಿಯ ಪೊನ್ ನಿಲವೇ’ ಹಾಡನ್ನು ಮರುಬಳಕೆ ಮಾಡಲು ವೆಲ್ಸ್ ಫಿಲ್ಮ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ಇಳಯರಾಜಾ ಅವರಿಂದಲೇ ಪರವಾನಗಿ ಪಡೆಯಲಾಗಿತ್ತು. ಆದರೆ, ಇದಕ್ಕೆ ಸರಿಗಮ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿತು. ಚಿತ್ರದ ಮೂಲ ನಿರ್ಮಾಪಕರಿಂದ ತಮಗೆ ಪೂರ್ಣ ಹಕ್ಕು ಸಿಕ್ಕಿದೆ ಎಂದು ಕೋರ್ಟ್ ಮೆಟ್ಟಿಲೇರಿತು.

ಈ ಪ್ರಕರಣವನ್ನು ಆಲಿಸಿದ ದೆಹಲಿ ಹೈಕೋರ್ಟ್ ಪ್ರಮುಖ ಆದೇಶ ನೀಡಿತು. ಇಳಯರಾಜಾ ಅವರಿಗೆ ಕೇವಲ ರಾಗ/ಮೆಲೋಡಿ ಸಂಯೋಜನೆಯ ಹಕ್ಕು ಮಾತ್ರ ಇರುತ್ತದೆ. ಆದರೆ, ಇಡೀ ಧ್ವನಿಮುದ್ರಣ ಮತ್ತು ಸಾಹಿತ್ಯದ ಮೇಲೆ ಪೂರ್ಣ ಹಕ್ಕಿರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಹೀಗಾಗಿ ಸರಿಗಮ ಸಂಸ್ಥೆಯ ಅನುಮತಿ ಇಲ್ಲದೆ ಹಾಡನ್ನು ಬಳಸದಂತೆ ದೆಹಲಿ ಹೈಕೋರ್ಟ್ ತಡೆ ನೀಡಿತು.

ದೆಹಲಿ ಹೈಕೋರ್ಟ್ ನೀಡಿದ ಈ ಆದೇಶವನ್ನು ಪ್ರಶ್ನಿಸಿ ಇಳಯರಾಜಾ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಆದರೆ, ವಿಭಾಗೀಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿತು. ಬಳಿಕ ಇಳಯರಾಜಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾ ಮಾಡಿತು. ಹೈಕೋರ್ಟ್ ಆದೇಶವೇ ಅಂತಿಮ ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: ಕನ್ನಡದ ‘ಪ್ರೀತ್ಸು’ ಚಿತ್ರಕ್ಕೆ ಇಳಯರಾಜಾ ಸಂಗೀತ ನಿರ್ದೇಶನ;​ ಆಡಿಯೋ ರಿಲೀಸ್ ಮಾಡಿಕೊಂಡ​ ಖುಷಿಯಲ್ಲಿ ಚಿತ್ರತಂಡ

ಈ ತೀರ್ಪು ಭವಿಷ್ಯದ ಮ್ಯೂಸಿಕ್ ಕಾಪಿರೈಟ್ ಪ್ರಕರಣಗಳಿಗೆ ಪ್ರಮುಖ ನಿದರ್ಶನವಾಗಲಿದೆ. ಸಂಗೀತ ಸಂಯೋಜಕರಿಗಿಂತ ಮ್ಯೂಸಿಕ್ ಲೇಬಲ್ ಸಂಸ್ಥೆಗಳಿಗೇ ಹಳೆಯ ಹಾಡುಗಳ ಮೇಲೆ ಹೆಚ್ಚು ಅಧಿಕಾರವಿದೆ ಎಂಬುದು ಇದರಿಂದ ಸಾಬೀತಾಗಿದೆ. ಈ ಆದೇಶವು ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಇಳಯರಾಜಾ ಅಭಿಮಾನಿಗಳಿಗೆ ಈ ಬೆಳವಣಿಗೆಯಿಂದ ತೀವ್ರ ನಿರಾಸೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us