‘ಕರುಪ್ಪು’ ಸಿನಿಮಾ ಗೆದ್ದ ಖುಷಿಯಲ್ಲಿ ತಂಡದವರಿಗೆ ಕಾರು ಗಿಫ್ಟ್ ಕೊಟ್ಟ ನಟ ಸೂರ್ಯ

ನಟ ಸೂರ್ಯ ಅವರ 'ಕರುಪ್ಪು' ಚಿತ್ರ 300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಭಾರಿ ಯಶಸ್ಸು ಕಂಡಿದೆ. ಈ ಗೆಲುವಿನಿಂದ ಸೂರ್ಯ ತಮ್ಮ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಛಾಯಾಗ್ರಾಹಕ ಜಿ.ಕೆ. ವಿಷ್ಣು ಮತ್ತು ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರಿಗೆ ಸೂರ್ಯ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ತಮ್ಮ ಔದಾರ್ಯ ಮೆರೆದಿದ್ದಾರೆ.

‘ಕರುಪ್ಪು’ ಸಿನಿಮಾ ಗೆದ್ದ ಖುಷಿಯಲ್ಲಿ ತಂಡದವರಿಗೆ ಕಾರು ಗಿಫ್ಟ್ ಕೊಟ್ಟ ನಟ ಸೂರ್ಯ
ಸೂರ್ಯ ಹಾಗೂ ಟೀಂ
Image Credit source: Suriya

Updated on: Jun 01, 2026 | 7:02 AM

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರಿಗೆ (Suriya) ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಈ ಗೆಲುವನ್ನು ಮತ್ತೆ ಮರಳಿಸಿ ಕೊಟ್ಟಿದ್ದು ‘ಕರುಪ್ಪು’ ಚಿತ್ರ. ತ್ರಿಷಾ ಜೊತೆ ನಟಿಸಿದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಪಡೆದುಕೊಂಡಿರುವ ಈ ಚಿತ್ರ, ಈಗ ಕೇವಲ ಮೂರನೇ ವಾರದಲ್ಲೇ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ನಟ ಸೂರ್ಯ ಅವರು ಚಿತ್ರದ ಯಶಸ್ಸಿನ ಹಿಂದಿರುವ ಪ್ರಮುಖ ತಂತ್ರಜ್ಞರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ದೊಡ್ಡ ಗುಣವನ್ನು ಮೆರೆದಿದ್ದಾರೆ.

‘ಕರುಪ್ಪು’ ಚಿತ್ರದ ಭರ್ಜರಿ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ಯುವ ತಂತ್ರಜ್ಞರಿಗೆ ಸೂರ್ಯ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ‘ಕರುಪ್ಪು’ ಸಿನಿಮಾದ ಛಾಯಾಗ್ರಹಣಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈ ಕೆಲಸ ಮಾಡಿದ ಜಿ.ಕೆ. ವಿಷ್ಣು ಅವರಿಗೆ ಸೂರ್ಯ ಹೊಸ ‘ಮಹೀಂದ್ರಾ BE6 ಬ್ಯಾಟ್‌ಮ್ಯಾನ್ ಎಡಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಖುಷಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಷ್ಣು, ‘ಇದೆಲ್ಲಾ ದೇವರ ಆಟ. ಧನ್ಯವಾದಗಳು ಸೂರ್ಯ ಸರ್, ನಿಮ್ಮದು ತುಂಬಾ ದೊಡ್ಡ ಹೃದಯ’ ಎಂದು ಬರೆದುಕೊಂಡಿದ್ದಾರೆ.

ಅದೇ ರೀತಿ, ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಮೂಲಕ ಚಿತ್ರಮಂದಿರಗಳಲ್ಲಿ ಹೊಸ ಅಲೆ ಸೃಷ್ಟಿಸಿದ ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಅವರಿಗೂ ಸೂರ್ಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದು, ಸಾಯಿ ಕೂಡ ಸೂರ್ಯ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.


ಚಿತ್ರ ಬಿಡುಗಡೆಯಾದ ಮರುದಿನವೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಸೂರ್ಯ, ಚಿತ್ರದ ಯಶಸ್ಸಿಗೆ ಕಾರಣರಾದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದ್ದರು. ವಿಶೇಷವಾಗಿ ಎಡಿಟರ್ ಕಲೈವಾನನ್, ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಹಾಗೂ ಡಿಒಪಿ ಜಿ.ಕೆ. ವಿಷ್ಣು ಅವರ ಕಠಿಣ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಗೂ ಅವರು ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ: ಸೂರ್ಯ ನಟನೆಯ ಹಿಟ್ ಸಿನಿಮಾಕ್ಕೆ ‘ಕಾಂತಾರ’, ‘ಸಪ್ತ ಸಾಗರದಾಚೆ’ ಸ್ಪೂರ್ತಿ

ಚಿತ್ರದಲ್ಲಿ ಸೂರ್ಯ ಅವರು ‘ಕರುಪ್ಪುಸಾಮಿ’ ಎಂಬ ಪವರ್‌ಫುಲ್ ವಕೀಲನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ತ್ರಿಷಾ ಕೃಷ್ಣನ್ ಹಾಗೂ ಖಳನಾಯಕನಾಗಿ ಬಾಲಾಜಿ ನಟಿಸಿದ್ದಾರೆ. ಈ ಬಿಗ್ ಬಜೆಟ್ ಚಿತ್ರವನ್ನು ಆರ್.ಜೆ. ಬಾಲಾಜಿ ನಿರ್ದೇಶಿಸಿದ್ದು, ಅಶ್ವಿನ್ ರವಿಚಂದ್ರನ್ ಸೇರಿದಂತೆ ನಾಲ್ಕು ಜನರ ತಂಡ ಚಿತ್ರಕಥೆ ಸಿದ್ಧಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 6:59 am, Mon, 1 June 26

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us