
ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಉಗಮದ ಬಗ್ಗೆ ನೀಡಿರುವ ಹೇಳಿಕೆ ವಿವಾದ ಎಬ್ಬಿಸಿದ್ದು, ಇದರಿಂದಾಗಿ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಸ್ವತಃ ಕಮಲ್ ಹಾಸನ್, ಫಿಲಂ ಚೇಂಬರ್ಗೆ ಈಗಾಗಲೇ ಪತ್ರ ಬರೆದಿದ್ದಾರೆ. ಆದರೆ ಅದರಿಂದ ಯಾವುದೇ ಉಪಯೋಗವಾಗಿಲ್ಲ. ಇದೀಗ ತಮಿಳು ಸಿನಿಮಾ ನಿರ್ಮಾಪಕರ ಸಂಘ, ಫಿಲಂ ಚೇಂಬರ್ಗೆ ಪತ್ರ ಬರೆದಿದ್ದಾರೆ.
ಕಮಲ್ ಹಾಸನ್ ಅವರ ಹೇಳಿಕೆ ಹಾಗೂ ಅದರ ಬೆನ್ನಲ್ಲೆ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಮೇಲೆ ಹೇರಲಾಗಿರುವ ನಿಷೇಧದ ಕುರಿತು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕರ ಸಂಘ ಪತ್ರದಲ್ಲಿ ಮನವಿ ಮಾಡಿದೆ. ‘ಕಮಲ್ ಹಾಸನ್ ಅವರ ಹೇಳಿಕೆ ಪ್ರೀತಿಯಿಂದ ಆಡಿದ ಮಾತಾಗಿತ್ತು, ಕನ್ನಡ ಭಾಷೆಯ ಗೌರವವನ್ನು ಕಡಿಮೆ ಮಾಡುವುದು ಅವರ ಉದ್ದೇಶ ಆಗಿರಲಿಲ್ಲ’ ಎಂದು ಪತ್ರದಲ್ಲಿ ಹೇಳಲಾಗಿದೆ.
We have sent a request to the President of Karnataka Film Chamber of commerce to accept the letter of Shri #KamalHaasan on #ThugLife and extend their cooperation for its smooth release, for the continued harmonious relationship between the two film industries. @onlynikil pic.twitter.com/l5SgJ4Ytwp
— Tamil Film Active Producers Association (@tfapatn) June 3, 2025
ತಮಿಳು ಹಾಗೂ ಕನ್ನಡ ಸಿನಿಮಾ ರಂಗಗಳ ನಡುವೆ ಒಳ್ಳೆಯ ಬಾಂಧವ್ಯ ಇದೆ. ಸುದೀಪ್, ಶಿವರಾಜ್ ಕುಮಾರ್, ಕಿಶೋರ್, ದುನಿಯಾ ವಿಜಯ್, ಅಚ್ಯುತ್ ಕುಮಾರ್ ಇನ್ನೂ ಹಲವು ಕನ್ನಡದ ನಟರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಯಾವುದೇ ಕಠಿಣವಾದ ನಿರ್ಧಾರವು ಎರಡು ಚಿತ್ರರಂಗಗಳ ನಡುವೆ ಇರುವ ಬಾಂಧವ್ಯವನ್ನು ಹಾಳು ಮಾಡಲಿದೆ. ಬಾಂಧವ್ಯ ಹಾಳು ಮಾಡುವ ಯಾವುದೇ ಸಂದರ್ಭಗಳನ್ನು ನಿವಾರಿಸಿ, ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು’ ಎಂದು ಸಕ್ರಿಯ ತಮಿಳು ಸಿನಿಮಾ ನಿರ್ಮಾಪಕರ ಸಂಘ ಹೇಳಿದೆ.
ಇದನ್ನೂ ಓದಿ:ಕಮಲ್ ಹಾಸನ್ ಮುಂದಿನ ವಿಚಾರಣೆ ಯಾವಾಗ? ಅಲ್ಲಿಯವರೆಗೆ ‘ಥಗ್ ಲೈಫ್’ ಚಿತ್ರದ ಗತಿ ಏನು?
ಪತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ನೆರೆಯ ರಾಜ್ಯಗಳ ಬಗ್ಗೆ ನೀಡಿರುವ ಹೇಳಿಕೆ ಹಾಗೂ ಇತ್ತೀಚೆಗೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ಕನ್ನಡದ ಭಾಷಾ ಸಹಿಷ್ಣುತೆಯ ಬಗ್ಗೆ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ್ದು, ಕನ್ನಡಿಗರು ಸಹಿಷ್ಣುಗಳು, ಕಮಲ್ ಹಾಸನ್ ಸಹ ಕನ್ನಡ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಅವರು ಗೌರವದಿಂದಲೇ ಹೇಳಿರುವ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದಿದ್ದಾರೆ.
ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಕಮಲ್ ಹಾಸನ್ ಹೇಳಿದ್ದರು. ಇದು ವಿವಾದ ಎಬ್ಬಿಸಿದೆ. ಕಮಲ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಥಗ್ ಲೈಫ್’ ಸಿನಿಮಾ ಅನ್ನು ಬಿಡುಗಡೆ ಮಾಡದಿರಲು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಫಿಲಂ ಚೇಂಬರ್ ಸಹ ಅವರಿಗೆ ಬೆಂಬಲ ಘೋಷಿಸಿದೆ. ಕಮಲ್ ಹಾಸನ್ ಇದೀಗ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯೂ ಸಹ ಕಮಲ್ ಪರ ವಕೀಲರು, ನಿರ್ಮಾಪಕರು ಈಗ ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ