AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಗರಿಂದ ವಿರೋಧ, ಆ ಮೂರು ಪದ ಹೇಳಿ ತಮಿಳರ ಪುಸಲಾಯಿಸಲು ಕಮಲ್ ಹಾಸನ್ ಯತ್ನ

Kamal Haasan: ಕಮಲ್ ಹಾಸನ್, ಕನ್ನಡದ ಬಗ್ಗೆ ಆಡಿರುವ ಮಾತುಗಳು ತೀವ್ರ ವಿವಾದ ಸೃಷ್ಟಿಸಿವೆ. ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಕಮಲ್ ಹಾಸನ್, ಈ ವಿವಾದದಲ್ಲಿ ತಮಿಳರ ಬೆಂಬಲ ಪಡೆಯುವ ಯತ್ನ ಮಾಡಿದ್ದಾರೆ. ಮಾತ್ರವಲ್ಲದೆ ಈ ವಿವಾದವನ್ನು ‘ಥಗ್ ಲೈಫ್’ ಸಿನಿಮಾ ಪರ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರಯತ್ನಗಳು ಸಹ ಚಾಲ್ತಿಯಲ್ಲಿವೆ. ಇಲ್ಲಿದೆ ಮಾಹಿತಿ...

ಕನ್ನಡಿಗರಿಂದ ವಿರೋಧ, ಆ ಮೂರು ಪದ ಹೇಳಿ ತಮಿಳರ ಪುಸಲಾಯಿಸಲು ಕಮಲ್ ಹಾಸನ್ ಯತ್ನ
Kamal Haasan1
ಮಂಜುನಾಥ ಸಿ.
|

Updated on:Jun 04, 2025 | 3:08 PM

Share

ನಟ ಕಮಲ್ ಹಾಸನ್ (Kamal Haasan), ಕನ್ನಡ ಭಾಷೆಯ ಉಗಮದ ಬಗ್ಗೆ ನೀಡಿರುವ ಹೇಳಿಕೆ ವಿವಾದವಾಗಿದ್ದು, ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ಕಮಲ್ ಕ್ಷಮೆ ಕೇಳದ ಹೊರತು ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದು ಕನ್ನಪರ ಸಂಘಟನೆಗಳು ಎಚ್ಚರಿಸಿವೆ. ಕಮಲ್ ಸಹ ಪತ್ರ ಬರೆದು, ಹೈಕೋರ್ಟ್​​ನಲ್ಲಿ ಅರ್ಜಿ ಹಾಕಿ ಸಿನಿಮಾ ಬಿಡುಗಡೆಗೆ ಪ್ರಯತ್ನ ನಡೆಸಿದ್ದಾರೆ. ಆದರೆ ಕನ್ನಡಿಗರು ಪಟ್ಟು ಸಡಿಲಿಸಿಲ್ಲ. ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಸಿನಿಮಾ ಗೆಲ್ಲಿಸಿಕೊಳ್ಳಲು ತಮಿಳುನಾಡಿನ ಜನರ ಭಾವನೆಗಳನ್ನು ಉತ್ತೇಜಿತಗೊಳಿಸುವ ಪ್ರಯತ್ನವನ್ನು ಕಮಲ್ ಹಾಸನ್ ಮಾಡಿದ್ದಾರೆ.

ಹೈಕೋರ್ಟ್​ ಆದೇಶದ ಬಳಿಕ ಇಂದು ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ್ ಹಾಸನ್, ಭಾಷಾ ವಿವಾದದ ಬಗ್ಗೆ ಈಗ ಏನೂ ಮಾತನಾಡುವುದಿಲ್ಲ, ಆದರೆ ಮಾತನಾಡುವ ಸಮಯ ಬರಲಿದೆ ಆ ಸಂದರ್ಭದಲ್ಲಿ ನಾನು ಮಾತನಾಡುತ್ತೇನೆ. ನಿಮ್ಮೊಂದಿಗೂ (ಮಾಧ್ಯಮಗಳು) ಮಾತನಾಡುವುದಿದೆ ಆಗ ಖಂಡಿತ ಮಾತನಾಡುವೆ’ ಎಂದಿದ್ದಾರೆ. ‘ನನ್ನ ಬೆಂಬಲಕ್ಕೆ ನಿಂತ ತಮಿಳುನಾಡಿನ ಜನರಿಗೆ ಧನ್ಯವಾದ, ಮಾಧ್ಯಮಗಳಿಗೆ ಧನ್ಯವಾದ’ ಎನ್ನುವ ಮೂಲಕ ತಾವು ತಪ್ಪು ಮಾಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ:ಕಮಲ್ ಹಾಸನ್ ವಿಚಾರದಲ್ಲಿ ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ

ಮಾತು ಮುಂದುವರೆಸಿ, ‘ಉಯಿರೆ, ಉರವೆ, ತಮಿಳೆ’ (ಜೀವನ, ಬಾಂಧವ್ಯ (ಸಂಬಂಧ), ತಮಿಳು ಭಾಷೆ-ತಮಿಳು ಸಂಸ್ಕೃತಿ) ಇದರ ಅರ್ಥ ನನಗೆ ಚೆನ್ನಾಗಿ ಗೊತ್ತಿದೆ, ನಾನು ಇದನ್ನು ಬಿಟ್ಟು ಕದಲುವುದಿಲ್ಲ’ ಎಂದಿದ್ದಾರೆ. ಆ ಮೂಲಕ ತಮಿಳು ಭಾಷೆ ಮತ್ತು ಸಂಸ್ಕೃತಿಯೇ ತಮಗೆ ಮೊದಲು ಎಂದಿದ್ದಾರೆ. ಕರ್ನಾಟಕದಲ್ಲಿ ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ರೀತಿ, ‘ಉಯಿರೆ, ಉರವೆ, ತಮಿಳೆ’ ಅನ್ನು ತಮಿಳುತನವನ್ನು ಉತ್ತೇಜಿಸುವ ಹೇಳಿಕೆಯಾಗಿ ತಮಿಳುನಾಡಿನಲ್ಲಿ ಬಳಸಲಾಗುತ್ತದೆ. ಈಗ ಕಮಲ್ ಹಾಸನ್ ‘ಉಯಿರೆ, ಉರವೆ, ತಮಿಳೆ’ ಎನ್ನುವ ಮೂಲಕ ತಮಿಳು ಭಾಷಿಕರ ಭಾವನೆಗಳನ್ನು ಉತ್ತೇಜಿತಗೊಳಿಸಿ, ಈ ವಿವಾದದಲ್ಲಿ ತಮಿಳಿಗರು ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಮಾಡುವ ಪ್ರಯತ್ನವನ್ನು ಕಮಲ್ ಹಾಸನ್ ಮಾಡಿದಂತೆ ಗೋಚರಿಸುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿಯೂ ಸಹ ಕಮಲ್ ಅವರ ಅಭಿಮಾನಿಗಳು ಕೆಲ ಪೋಸ್ಟ್​ಗಳನ್ನು ಹಂಚಿಕೊಂಡಿದ್ದು, ‘ಕಮಲ್ ಹಾಸನ್ ಅವರು ತಮಗೆ 30-40 ಕೋಟಿ ರೂಪಾಯಿ ಹಣ ನಷ್ಟವಾದರೂ ಸಹ ತಮಿಳು ಭಾಷೆಯ ಪರವಾಗಿ ನಿಂತಿದ್ದಾರೆ. ಅವರು ಸತ್ಯ ಹೇಳಿದ್ದಕ್ಕೆ (?) ಸಮಸ್ಯೆ ಎದುರಿಸುತ್ತಿದ್ದಾರೆ. ನಷ್ಟವಾದರೂ ಸಹ ಅವರು ಭಾಷೆಯ ಪರ ನಿಂತಿದ್ದಾರೆ, ಭಾಷೆಯ ಪರವಾಗಿ ನಿಂತ ಕಮಲ್ ಪರವಾಗಿ ನಿಲ್ಲಬೇಕಿದೆ, ಅವರ ಸಿನಿಮಾ ಅನ್ನು ಅದ್ಧೂರಿಯಾಗಿ ಗೆಲ್ಲಿಸಬೇಕಿದೆ’ ಎಂಬಿತ್ಯಾದಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿವಾದವನ್ನು ಸಿನಿಮಾ ಪ್ರಚಾರಕ್ಕಾಗಿ ಬಳಸುವ ಪ್ರಯತ್ನವೂ ಜಾರಿಯಲ್ಲಿದೆ.

ಪ್ರಕರಣ ಈಗ ಹೈಕೋರ್ಟ್​​ನಲ್ಲಿದೆ. ರಾಜ್ಯ ಹೈಕೋರ್ಟ್ ಸಹ ಕಮಲ್ ಅವರು ಕ್ಷಮೆ ಕೇಳುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಕಮಲ್ ಪರ ವಕೀಲರು ನಿರ್ಮಾಪಕರು ಸದ್ಯಕ್ಕೆ ‘ಥಗ್ ಲೈಫ್’ ಸಿನಿಮಾ ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದಿದ್ದಾರೆ. ಇದೀಗ ಫಿಲಂ ಚೇಂಬರ್ ಜೊತೆಗೆ ಕಮಲ್ ಪರ ವಕೀಲರು ಮಾತುಕತೆ ಸಹ ನಡೆಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Wed, 4 June 25