Ajith Kumar: ನಟ ಅಜಿತ್ ಮನೆಗೆ ಬಾಂಬ್ ಬೆದರಿಕೆ ಕರೆ; ಪೊಲೀಸ್ ತಪಾಸಣೆಯಿಂದ ಬಯಲಾದ ಸತ್ಯವೇನು?
ಅಜಿತ್ ಕುಮಾರ್ ಮನೆಗೆ ಬಾಂಬ್ ಇಡಲಾಗಿದೆ ಎಂದು ಕರೆ ಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಇದೇ ರೀತಿ ಘಟನೆ ನಡೆದಿತ್ತು.
ಕಾಲಿವುಡ್ನ ಸ್ಟಾರ್ ನಟ ಅಜಿತ್ ಕುಮಾರ್ ಅವರ ಮನೆಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾನೆ. ಸೋಮವಾರ (ಮೇ 31) ಈ ಮಾಹಿತಿ ಕೇಳಿಬಂದ ಬಳಿಕ ಒಂದು ಕ್ಷಣ ಬೆಚ್ಚಿ ಬೀಳುವಂತಹ ವಾತಾವರಣ ನಿರ್ಮಾಣ ಆಯಿತು. ಸಿಕ್ಕ ಮಾಹಿತಿಯನ್ನು ನಿರ್ಲಕ್ಷಿಸದೇ ಪೊಲೀಸರು ಕೂಡಲೇ ಅಜಿತ್ ಮನೆಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ. ಒಟ್ಟಿನಲ್ಲಿ ಅಜಿತ್ ಅವರಿಗೆ ಯಾವುದೇ ಅಪಾಯ ಇಲ್ಲ ಎಂಬುದು ಖಚಿತವಾದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಅಂದಹಾಗೆ, ಅಜಿತ್ ಕುಮಾರ್ ಮನೆಗೆ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಅದಕ್ಕೂ ಮುನ್ನ 2014ರಲ್ಲಿಯೂ ಬಾಂಬ್ ಬೆದರಿಕೆ ಕರೆಬಂದಿರುವ ಬಗ್ಗೆ ಪೊಲೀಸ್ ಠಾಣೆಗೆ ಕರೆ ಮಾಡಿ ಅಜಿತ್ ಮನೆಯ ಸಿಬ್ಬಂದಿ ಮಾಹಿತಿ ನೀಡಿದ್ದರು. ಆಗಲೂ ಅದು ಹುಸಿ ಬಾಂಬ್ ಕರೆ ಎಂಬುದು ಸಾಬೀತಾಗಿತ್ತು.
2017ರಲ್ಲಿಯೂ ಇದೇ ರೀತಿ ಆಗಿತ್ತು. ಅನಾಮಿಕ ವ್ಯಕ್ತಿಯಿಂದ ಬಾಂಬ್ ಕರೆ ಬಂದಿದ್ದರಿಂದ 15 ಪೊಲೀಸರು ಅಜಿತ್ ನಿವಾಸಕ್ಕೆ ಬಂದು ತಪಾಸಣೆ ನಡೆಸಿದ್ದರು. ಕಾಲಿವುಡ್ ನಟರಾದ ವಿಜಯ್ ಮತ್ತು ರಜನಿಕಾಂತ್ ಅವರ ಮನೆಗೂ ಈ ಹಿಂದೆ ಹುಸಿ ಬಾಂಬ್ ಕರೆಗಳು ಬಂದಿದ್ದವು.
2019ರಲ್ಲಿ ಬಂದ ‘ನೇರ್ಕೊಂಡ ಪಾರ್ವೈ’ ಬಳಿಕ ಅಜಿತ್ ನಟನೆಯ ಯಾವುದೇ ಸಿನಿಮಾ ತೆರೆಕಂಡಿಲ್ಲ. ಆ ಚಿತ್ರಕ್ಕೆ ಬೋನಿ ಕಪೂರ್ ಬಂಡವಾಳ ಹೂಡಿದ್ದರು. ಎಚ್. ವಿನೋದ್ ನಿರ್ದೇಶನ ಮಾಡಿದ್ದರು. ಈಗ ಎಚ್. ವಿನೋದ್, ಬೋನಿ ಕಪೂರ್ ಮತ್ತು ಅಜಿತ್ ಕುಮಾರ್ ಕಾಂಬಿನೇಷನ್ಲ್ಲಿ ‘ವಲಿಮೈ’ ಸಿನಿಮಾ ಮೂಡಿಬರುತ್ತಿದೆ. ಲಾಕ್ಡೌನ್ ಕಾರಣದಿಂದ ಚಿತ್ರದ ಕೆಲಸಗಳು ಸ್ಥಗಿತಕೊಂಡಿವೆ. ಕೊರೊನಾ ವಿರುದ್ಧ ಹೋರಾಡಲು ಅಜಿತ್ ಅವರು ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದರು.
ಇದನ್ನೂ ಓದಿ:
ಶ್ರೀದೇವಿ ಜೊತೆಗಿನ ಚಿತ್ರದ ಶೂಟಿಂಗ್ಗೆ ಬರುವಾಗ ಐಷಾರಾಮಿ ಕಾರು ಬೇಡ ಎಂದಿದ್ದ ನಟ ಅಜಿತ್
Viral Video: ಅಭಿಮಾನಿಯ ಫೋನ್ ಕಿತ್ತುಕೊಂಡ ನಟ ಅಜಿತ್; ಚುನಾವಣಾ ಮತಗಟ್ಟೆಯಲ್ಲಿ ನಡೆದಿದ್ದೇನು?