ವಿದೇಶದಿಂದ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ (Rolls Royce Ghost) ಕಾರು ಆಮದು ಮಾಡಿಕೊಂಡು ತೆರಿಗೆ ಕಟ್ಟುವುದರಲ್ಲಿ ವಿನಾಯಿತಿ ಕೇಳಿದ್ದ ನಟ ವಿಜಯ್ಗೆ (Thalapathy Vijay) ನ್ಯಾಯಾಲಯ ಛೀಮಾರಿ ಹಾಕಿತ್ತು. ಅದನ್ನು ಪ್ರಶ್ನಿಸಿ ವಿಜಯ್ ಅರ್ಜಿ ಸಲ್ಲಿಸಿದ್ದರು. ಈಗ ಮದ್ರಾಸ್ ಹೈಕೋರ್ಟ್ (Madras High Court) ದ್ವಿ-ಸದಸ್ಯ ಪೀಠವು ವಿಜಯ್ ಪರವಾಗಿ ತೀರ್ಪು ನೀಡಿದ್ದು, ಒಂದು ಲಕ್ಷ ರೂ. ದಂಡಕ್ಕೆ ತಡೆ ನೀಡಿದೆ. ಈ ಹಿಂದಿನ ತೀರ್ಪಿನಲ್ಲಿ ವಿಜಯ್ ಒಂದು ಲಕ್ಷ ರೂ. ದಂಡ ಕಟ್ಟಬೇಕು ಎಂದು ಆದೇಶಿಸಲಾಗಿತ್ತು. ಅಲ್ಲದೆ, ಸಿನಿಮಾ ನಟರ ಬಗ್ಗೆ ಕಟು ಟೀಕೆ ಮಾಡಲಾಗಿತ್ತು. ಅದು ವಿಜಯ್ ಮತ್ತು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.
ತೆರೆಗೆ ಕಟ್ಟಲು ವಿಜಯ್ ಹಿಂದೇಟು ಹಾಕಿದ್ದಾರೆ. ತೆರಿಗೆ ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ. ಇದು ದೇಶವಿರೋಧಿ ಮನಸ್ಥಿತಿ ಎಂದು ಹಿಂದಿನ ತೀರ್ಪಿನಲ್ಲಿ ವಿಜಯ್ಗೆ ಛೀಮಾರಿ ಹಾಕಲಾಗಿತ್ತು. ಇಂಥ ಕಟು ಟೀಕೆಯನ್ನು ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದ್ದನ್ನು ಪ್ರಶ್ನಿಸಿ ವಿಜಯ್ ಮತ್ತೆ ಅರ್ಜಿ ಸಲ್ಲಿಸಿದ್ದರು. ತೆರೆಗೆ ಕಟ್ಟುವುದಿಲ್ಲ ಎಂದು ವಿಜಯ್ ಹೇಳುತ್ತಿಲ್ಲ. ಆದರೆ ನಟರ ಸಮುದಾಯದ ಬಗ್ಗೆ ಕಟು ಟೀಕೆ ಮಾಡಿರುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ ಎಂದು ವಿಜಯ್ ಪರ ವಕೀಲರು ವಾದ ಮಂಡಿಸಿದ್ದಾರೆ. ಒಂದು ವಾರದೊಳಗೆ ನಟ ವಿಜಯ್ ಅವರ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಬಾಕಿ ಉಳಿಸಿಕೊಂಡಿರುವ ಶೇ.80ರಷ್ಟು ಎಂಟ್ರಿ ಟ್ಯಾಕ್ಸ್ ಕಟ್ಟಬೇಕು ಎಂದು ಈಗ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ದಳಪತಿ ವಿಜಯ್ ಅವರು 410 ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾಗಿದೆ. ಇದು ಅವರ ನೆಟ್ ವರ್ತ್. ಪ್ರತಿ ಸಿನಿಮಾಗೂ ಅವರು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ. ಅದರಲ್ಲೂ 2019ರಿಂದ ಈಚೆಗೆ ಅವರ ಚಾರ್ಮ್ ಹೆಚ್ಚಿದೆ. ಅವರ ವಾರ್ಷಿಕ ಆದಾಯ 100ರಿಂದ 120 ಕೋಟಿ ರೂ. ಆಗಿದೆ ಎಂಬ ಮಾಹಿತಿ ಇದೆ. ವಿಜಯ್ಗೆ ಕಾರುಗಳ ಬಗ್ಗೆ ಅಪಾರ ಕ್ರೇಜ್ ಇದೆ. ಅವರ ಕಲೆಕ್ಷನ್ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. 6 ಕೋಟಿ ರೂ. ಬೆಲೆ ಬಾಳುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಅವರ ಮನೆಯಲ್ಲಿದೆ. ಜೊತೆಗೆ 1.30 ಕೋಟಿ ಬೆಲೆಯ ಆಡಿ ಎ8, 75 ಲಕ್ಷ ಬೆಲೆಯ ಬಿಎಂಡಬ್ಲ್ಯೂ, 90 ಲಕ್ಷದ ಬಿಎಂಡಬ್ಲ್ಯೂ ಎಕ್ಸ್6, 35 ಲಕ್ಷ ಬೆಲೆ ಬಾಳುವ ಮಿನಿ ಕೂಪರ್ ಮುಂತಾದ ಕಾರುಗಳನ್ನು ವಿಜಯ್ ಹೊಂದಿದ್ದಾರೆ.
ಇದನ್ನೂ ಓದಿ:
Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್ಗೆ ಶಾರುಖ್ ಖಾನ್ ಹೊಗಳಿಕೆ; ಯಾವುದು ಆ ಮಾತು?
ಪ್ರಶಾಂತ್ ನೀಲ್ ಜೊತೆ ದಳಪತಿ ವಿಜಯ್ ಹೊಸ ಸಿನಿಮಾ? ಕೆಜಿಎಫ್ ಡೈರೆಕ್ಟರ್ ಬಗ್ಗೆ ಬಿಗ್ ನ್ಯೂಸ್