ನದಿಯಲ್ಲಿ ಮುಳುಗಿ ನಿರ್ಮಾಪಕ ಸಾವು, ಆತ್ಮಹತ್ಯೆ ಶಂಕೆ
Producer K Rajan: ತಮ್ಮ ನೇರ ಮಾತುಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರು ಇಂದು (ಮೇ 17) ನಿಧನ ಹೊಂದಿದ್ದಾರೆ. ಅವರು ಅಡ್ಯಾರ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಸಿನಿಮಾ ನಿರ್ಮಾಪಕರು (Producer) ಸಂಕಷ್ಟದಲ್ಲಿದ್ದಾರೆ ಎಂಬ ಚರ್ಚೆ ಚಾಲ್ತಿಯಲ್ಲಿರುವಾಗಲೇ ತಮಿಳು ಚಿತ್ರರಂಗದ ಹಿರಿಯ ಮತ್ತು ಜನಪ್ರಿಯ ನಿರ್ಮಾಪಕರೊಬ್ಬರು ನಿಧನ ಹೊಂದಿದ್ದು, ಅವರ ಸಾವನ್ನು ಆತ್ಮಹತ್ಯೆ ಎಂದು ಬಲವಾಗಿ ಶಂಕಿಸಲಾಗಿದೆ. ತಮ್ಮ ನೇರ ಮಾತುಗಳು ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದ ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಅವರು ಇಂದು (ಮೇ 17) ನಿಧನ ಹೊಂದಿದ್ದಾರೆ. ಅವರು ಅಡ್ಯಾರ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ತಮಿಳು ಮಾಧ್ಯಮಗಳ ವರದಿಯಂತೆ, ಕೆ ರಾಜನ್ ಚೆನ್ನೈನ ಅಡ್ಯಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಬಗ್ಗೆ ಚೆನ್ನೈ ಪೊಲೀಸರು ತನಿಖೆ ನಡೆಸಲಿದ್ದಾರೆ. ತಮಿಳು ಚಿತ್ರರಂಗದ ಪ್ರಮುಖ ವ್ಯಕ್ತಿಯಾಗಿದ್ದ ಕೆ. ರಾಜನ್ ಅವರು ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯೂಟ್ಯೂಬ್ ಚಾನೆಲ್‌ಗಳು ಮತ್ತು ಮಾಧ್ಯಮಗಳೊಂದಿಗೆ ಆಗಾಗ್ಗೆ ಮಾತನಾಡುತ್ತಿದ್ದರು. ಖುದ್ದು ತಮ್ಮನ್ನೂ ಸೇರಿದಂತೆ ನಿರ್ಮಾಪಕರು ಸಮಸ್ಯೆಯಲ್ಲಿದ್ದಾರೆ ಎಂದು ಹೇಳುತ್ತಿದ್ದರು.
ಕೆ ರಾಜನ್ ಅವರು 1980ರ ದಶಕದಿಂದಲೂ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು 1983 ರಲ್ಲಿ ಸುರೇಶ್ ನಟನೆಯ ‘ಬ್ರಹ್ಮಚಾರಿಗಳ್’ ಚಿತ್ರದ ಮೂಲಕ ನಿರ್ಮಾಪಕರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ತಮ್ಮ ‘ಗಣೇಶ್ ಸಿನೆ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿದ ಅವರು, ಅಬ್ಬಾಸ್ ಮತ್ತು ಕುನಾಲ್ ನಟನೆಯ ‘ಉನರ್ಚಿಗಳ್’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದರು. ಜೊತೆಗೆ ಕೆಲವಾರು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಚಲನಚಿತ್ರ ನಿರ್ಮಾಣದ ಹೊರತಾಗಿ, ಅವರು ಚಲನಚಿತ್ರ ವಾಣಿಜ್ಯ ವಲಯದಲ್ಲೂ ಪ್ರಭಾವಶಾಲಿ ಪಾತ್ರ ವಹಿಸಿದ್ದರು. 2000ನೇ ಇಸವಿಯಲ್ಲಿ ಅವರು ಚೆನ್ನೈ ಚಲನಚಿತ್ರ ವಿತರಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ:‘ಜನ ನಾಯಗನ್’ ಸಿನಿಮಾ ಬಿಡುಗಡೆ ತಡೆದಿದ್ದು ಯಾರು? ಮಾಹಿತಿ ನೀಡಿದ ನಿರ್ಮಾಪಕ
ಅವರ ಮಗ ಪ್ರಭುಕಾಂತ್ ಕೂಡ ನಟನಾಗಿ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಕೆ ರಾಜನ್ ಅವರು ವಿಶೇಷವಾಗಿ ಆಡಿಯೋ ಬಿಡುಗಡೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ನೇರ ಮತ್ತು ನಿರ್ಭೀತ ಭಾಷಣಗಳಿಗೆ ಹೆಸರುವಾಸಿಯಾಗಿದ್ದರು. ಅವರು ತಮಿಳು ಚಿತ್ರರಂಗ ಎದುರಿಸುತ್ತಿರುವ ಹೋರಾಟಗಳು, ನಿರ್ಮಾಪಕರ ಆರ್ಥಿಕ ನಷ್ಟ, ನಟರ ಗಗನಕ್ಕೇರುತ್ತಿರುವ ಸಂಭಾವನೆ ಮತ್ತು ಚಿತ್ರರಂಗದಲ್ಲಿನ ಅವ್ಯವಸ್ಥೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. ಅವರ ಮುಕ್ತ ಅಭಿಪ್ರಾಯಗಳು ವೈರಲ್ ಆಗುತ್ತಿರುತ್ತಿದ್ದವು.
85ನೇ ವಯಸ್ಸಿನಲ್ಲಿ ಇಂತಹ ಹಿರಿಯ ವ್ಯಕ್ತಿಯೊಬ್ಬರ ದುರಂತ ಅಂತ್ಯವು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆ ಮತ್ತು ಶೋಕವನ್ನು ಉಂಟುಮಾಡಿದೆ. ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





