ಧೋನಿ 45ನೇ ಜನ್ಮದಿನಕ್ಕೆ ಶುಭಾಶಯ ಕೋರಿದ ಸಿಎಂ ವಿಜಯ್; ಫೋಟೋ ವೈರಲ್

ಎಂ.ಎಸ್. ಧೋನಿ ಅವರನ್ನು ಈ ಹಿಂದೆ ಭೇಟಿಯಾಗಿದ್ದ ಸುಂದರ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಸಿಎಂ ವಿಜಯ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ಅವರು ಧೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 2021ರಲ್ಲಿ ಅವರಿಬ್ಬರು ಭೇಟಿಯಾಗಿದ್ದ ಫೋಟೋ ಇದಾಗಿದೆ.

ಧೋನಿ 45ನೇ ಜನ್ಮದಿನಕ್ಕೆ ಶುಭಾಶಯ ಕೋರಿದ ಸಿಎಂ ವಿಜಯ್; ಫೋಟೋ ವೈರಲ್
Ms Dhoni, Thalapathy Vijay

Updated on: Jul 07, 2026 | 10:41 PM

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ (MS Dhoni) ಜುಲೈ 7ರಂದು 45ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇಶಾದ್ಯಂತ ಧೋನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ (Thalapathy Vijay) ಅವರು ಕೂಡ ‘ಕ್ಯಾಪ್ಟನ್ ಕೂಲ್’ಗೆ ವಿಶೇಷವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಧೋನಿ ಅವರ ಕ್ರಿಕೆಟ್ ಸಾಧನೆ ಹಾಗೂ ತಮಿಳುನಾಡಿನ ಜನರೊಂದಿಗಿನ ಅವರ ಒಡನಾಟವನ್ನು ಶ್ಲಾಘಿಸಿರುವ ವಿಜಯ್, ‘ನಿಮ್ಮ ಹೆಸರನ್ನು ಜಪಿಸುವ ಪ್ರತಿಯೊಂದು ಶಬ್ದದಿಂದ ಹಿಡಿದು, ನೀವು ಪ್ರೇರೇಪಿಸಿದ ಅಸಂಖ್ಯಾತ ಹೃದಯಗಳವರೆಗೆ, ನಿಮ್ಮ ಈ ಪ್ರಯಾಣವು ತಮಿಳುನಾಡಿನ ಕ್ರೀಡಾ ಭಾವನೆಯ ಅತ್ಯಂತ ಪ್ರೀತಿಯ ಭಾಗವಾಗಿದೆ’ ಎಂದು ಬರೆದುಕೊಂಡಿದ್ದಾರೆ.

‘ಇನ್ನಷ್ಟು ಯಶಸ್ಸು ಸಿಗಲಿ’

‘ನಮ್ಮ ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಅಸಾಧಾರಣ ಕ್ರಿಕೆಟ್ ಪರಂಪರೆ, ಶಾಂತ ನಾಯಕತ್ವ ಮತ್ತು ವಿನಮ್ರ ಸ್ವಭಾವವು ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತಲೇ ಇರುತ್ತದೆ. ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಇನ್ನೂ ಹೆಚ್ಚಿನ ವರ್ಷಗಳ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನಿಮಗಾಗಿ ಮೊಳಗುವ ಶಿಳ್ಳೆಗಳು ಇನ್ನಷ್ಟು ಜೋರಾಗಲಿ’ ಎಂದು ವಿಜಯ್ ಶುಭ ಹಾರೈಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್

ಧೋನಿ ಮತ್ತು ವಿಜಯ್ ಅವರ ಈ ಅಪರೂಪದ ಜುಗಲ್‌ಬಂದಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ವಿಜಯ್ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಅಭಿಮಾನಿಯೊಬ್ಬರು, ‘ಥಲಾ X ದಳಪತಿ ಕಾಂಬಿನೇಷನ್ ಅದ್ಭುತ’ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ, ‘ನಿಮ್ಮಿಬ್ಬರಲ್ಲೂ ಒಂದು ಸಾಮ್ಯತೆ ಇದೆ. ನೀವಿಬ್ಬರೂ ನಿಮ್ಮ ಟೀಕಾಕಾರರಿಗೆ ಬಾಯಿ ಮಾತಿನಿಂದ ಉತ್ತರಿಸುವುದಿಲ್ಲ, ಬದಲಿಗೆ ನಿಮ್ಮ ಕೆಲಸದ ಮೂಲಕವೇ ಖಡಕ್ ಉತ್ತರ ನೀಡುತ್ತೀರಿ’ ಎಂದು ಕೊಂಡಾಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾದ ಟಿಕೆಟ್ ದರಕ್ಕೆ ನಟ, ಸಿಎಂ ವಿಜಯ್ ಖಡಕ್ ರೂಲ್ಸ್

2021ರ ಆ ಸುಂದರ ಭೇಟಿ ನೆನೆದ ಅಭಿಮಾನಿಗಳು:

ಸಿಎಂ ವಿಜಯ್ ಹಂಚಿಕೊಂಡಿರುವ ಫೋಟೋ ಆಗಸ್ಟ್ 2021ರದ್ದಾಗಿದೆ. ಚೆನ್ನೈನ ಗೋಕುಲಂ ಸ್ಟುಡಿಯೋಸ್‌ನಲ್ಲಿ ವಿಜಯ್ ಅವರು ‘ಬೀಸ್ಟ್’ ಸಿನಿಮಾದ ಶೂಟಿಂಗ್‌ನಲ್ಲಿದ್ದಾಗ ಮತ್ತು ಧೋನಿ ಜಾಹೀರಾತೊಂದರ ಚಿತ್ರೀಕರಣದಲ್ಲಿದ್ದಾಗ ಇಬ್ಬರೂ ಭೇಟಿಯಾಗಿದ್ದರು. ವಿಜಯ್ ಅವರ ಕ್ಯಾರವಾನ್ ಒಳಗಡೆ ಇಬ್ಬರೂ ಕೆಲ ಕಾಲ ಮಾತುಕತೆ ನಡೆಸಿದ್ದರು. ಬಳಿಕ ವಿಜಯ್ ಅವರೇ ಖುದ್ದಾಗಿ ನಡೆದುಕೊಂಡು ಬಂದು ಧೋನಿಯನ್ನು ಅವರ ಕ್ಯಾರವಾನ್‌ವರೆಗೆ ಬಿಟ್ಟು ಬಂದಿದ್ದರು. ಆ ಸಂದರ್ಭದ ಫೋಟೋಗಳು ಆಗಲೂ ಭಾರಿ ವೈರಲ್ ಆಗಿದ್ದವು. ವಿಶೇಷವೆಂದರೆ, 2008ರ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಸಿಎಸ್‌ಕೆ ತಂಡದ ಬ್ರಾಂಡ್ ಅಂಬಾಸೆಡರ್ ಆಗಿ ವಿಜಯ್ ಕಾರ್ಯನಿರ್ವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us