ಬದರಿನಾಥ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಸಿಕ್ತು ತಮಿಳು ನಟ ಅಜಿತ್ ಸಹಾಯ; ಇಲ್ಲಿದೆ ಇಂಟರೆಸ್ಟಿಂಗ್ ಕಥೆ

ಬದರಿನಾಥ್ ಟ್ರಿಪ್ ಮುಗಿಸಿ ಹಿಂದಿರುಗುವಾಗ ಮೈಸೂರು ಮೂಲದ ಮಂಜು ಕಶ್ಯಪ ಎಂಬುವವರಿಗೆ ಅಜಿತ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಂಜು ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿದ್ದಾರೆ.

ಬದರಿನಾಥ್ ಟ್ರಿಪ್ ತೆರಳಿದ್ದ ಕನ್ನಡಿಗನಿಗೆ ಸಿಕ್ತು ತಮಿಳು ನಟ ಅಜಿತ್ ಸಹಾಯ; ಇಲ್ಲಿದೆ ಇಂಟರೆಸ್ಟಿಂಗ್ ಕಥೆ
ಅಜಿತ್-ಮಂಜು
TV9kannada Web Team

| Edited By: Rajesh Duggumane

Sep 20, 2022 | 5:06 PM

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್(Ajith Kumar) ಅವರು ಸಿನಿಮಾ ಜತೆಗೆ ಇನ್ನೂ ಹಲವು ವಿಚಾರಕ್ಕೆ ಗುರುತಿಸಿಕೊಂಡಿದ್ದಾರೆ. ಅವರು ವಿಮಾನ ಚಾಲನೆ ತರಬೇತಿ ಹೊಂದಿದ್ದಾರೆ. ಬೈಕ್ ರೈಡಿಂಗ್ ಮಾಡುತ್ತಾರೆ. ಇತ್ತೀಚೆಗೆ 47ನೇ ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ಅಜಿತ್ ಸ್ಪರ್ಧಿಯಾಗಿ ಭಾಗವಹಿಸಿ ನಾಲ್ಕು ಚಿನ್ನದ ಪದಕ ಗೆದ್ದಿದ್ದರು. ಈಗ ಅವರು ಕನ್ನಡಿಗನೊಬ್ಬನಿಗೆ ಸಹಾಯ ಮಾಡಿದ್ದಾರೆ. ಬದರಿನಾಥ್ ಟ್ರಿಪ್ ಮುಗಿಸಿ ಹಿಂದಿರುಗುತ್ತಿದ್ದ ಮೈಸೂರು ಮೂಲದ ಮಂಜು ಕಶ್ಯಪ ಎಂಬುವವರಿಗೆ ಅಜಿತ್ ಸಹಾಯ ಹಸ್ತ ಚಾಚಿದ್ದಾರೆ. ಈ ಬಗ್ಗೆ ಮಂಜು ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿದ್ದಾರೆ.

‘ನಾನು ಬದರಿನಾಥ್ ಟ್ರಿಪ್​ಗೆ ತೆರಳಿದ್ದೆ. ಟ್ರಿಪ್ ಮುಗಿಸಿ ಹಿಂದಿರುಗುವಾಗ ಬಿಎಂಡಬ್ಲ್ಯೂ 1250 ಜಿಎಸ್ಎ  ಬೈಕ್ ಪಾಸ್ ಆಯ್ತು. ನಾನು ಆ ಬೈಕ್​ನ ಎರಡು ಬಾರಿ ಹಿಂದಿಕ್ಕಿ ಹೋಗಿದ್ದೆ. ಆ ಬೈಕ್​ನಲ್ಲಿ ತಮಿಳು ನಟಿ ಅಜಿತ್ ಕುಮಾರ್ ಇದ್ದರು ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ನನ್ನ ಬೈಕ್​ ಟಯರ್​ನ ಗಾಳಿ ಹೋಗಿತ್ತು. ಇದು ನನ್ನ ಗಮನಕ್ಕೆ ಬಂತು. ಈ ಮೊದಲು ಆರ್ಗನೈಸ್​ ಟ್ರಿಪ್ ಮಾಡ್ತಿದ್ವಿ. ಆದರೆ, ಈ ಬಾರಿ ಆ ರೀತಿ ಆಗಿರಲಿಲ್ಲ. ಹೀಗಾಗಿ, ನನ್ನ ಬಳಿ ಬೈಕ್​ ಸಲಕರಣೆಗಳು ಇರಲಿಲ್ಲ. ನಾನು ಬಿಎಂಡಬ್ಲ್ಯೂ ಬೈಕ್ ಇದ್ದ ವ್ಯಕ್ತಿ ಬಳಿ ಏರ್​ಕಂಪ್ರೆಸರ್ ಇದೆಯೇ ಎಂದು ಕೇಳಿದೆ. ಅವರು ನನ್ನ ಹತ್ತಿರ ಇಲ್ಲ, ನನ್ನ ಹಿಂದೆ ಬರುತ್ತ ಇರುವ ಬೈಕ್​ನವರ ಬಳಿ ಇದೆ ಎಂದಿದ್ದರು’ ಎಂದು ಆ ದಿನದ ಘಟನೆ ಹೇಳಿದ್ದಾರೆ ಮಂಜು.

‘ಹಿಂದಿದ್ದವರು ಬರೋಕೆ ಐದು ನಿಮಿಷ ಆಯ್ತು. ಆ ಸಮಯದಲ್ಲಿ ನಾನು ಆ ವ್ಯಕ್ತಿಯ ಜತೆ ಬೈಕ್ ಬಗ್ಗೆ ಮಾತನಾಡುತ್ತಾ ನಿಂತಿದ್ದೆ. ಆ ವ್ಯಕ್ತಿ ಹೆಲ್ಮೆಟ್ ಹಾಕಿದ್ದರಿಂದ ಅವರು ಅಜಿತ್ ಎಂಬುದು ನಮಗೆ ಗೊತ್ತೇ ಆಗಲಿಲ್ಲ. ಹಿಂದೆ ಇದ್ದ ಬೈಕ್​ನವರು ಬಂದರು. ಅವರ ಬಳಿಯೂ ಏರ್​ಕಂಪ್ರೆಸರ್​ ಇರಲಿಲ್ಲ. ಹಿಂದೆ ಕಾರೊಂದು ಬರುತ್ತಿದೆ ಅದರಲ್ಲಿ ಇರಬಹುದು ಎಂಬ ಪ್ರತಿಕ್ರಿಯೆ ಅವರಿಂದ ಬಂತು. ನಾನು ಇರಲಿ ಸರ್ ನೀವು ಹೋಗಿ ಎಂದು ಹೇಳಿದೆ. ಆದರೂ ಅವರು ಕೇಳಲಿಲ್ಲ. ನಿಮಗೆ ಸಹಾಯ ಮಾಡಿಯೇ ಹೋಗುತ್ತೇನೆ ಎಂದರು’ ಎಂದಿದ್ದಾರೆ ಮಂಜು.

ಇದನ್ನೂ ಓದಿ: ಅಜಿತ್ ಕುಮಾರ್ ಹೊಸ ಸಾಧನೆ; ಶೂಟಿಂಗ್ ಚಾಂಪಿಯನ್​ಶಿಪ್​ನಲ್ಲಿ ನಾಲ್ಕು ಚಿನ್ನ, ಎರಡು ಕಂಚು ಗೆದ್ದ ನಟ

‘ಹಿಂದೆ ಬಂದವರು ನಗುತ್ತಿದ್ದರು. ನಾವು ಅಜಿತ್ ಅವರನ್ನು ನೋಡದೇ ಬೈಕ್ ನೋಡುತ್ತಿದ್ದೆವು. ಕೊನೆಗೆ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡೆವು. ಅವರು ಅಜಿತ್ ಎಂದು ಪರಿಚಯಿಸಿಕೊಂಡರು. ನನ್ನ ಗೆಳೆಯನಿಗೆ ಅನುಮಾನ ಬಂತು. ನೀವು ಸೂಪರ್​​ಸ್ಟಾರ್ ಅಜಿತ್ ಅವರೇ ಎಂದು ಕೇಳಿದ. ಅದಕ್ಕೆ ಅಜಿತ್ ಹೌದು ಎಂದರು. ಅವರು ತುಂಬಾ ಸಿಂಪಲ್ ಆಗಿದ್ದರು. ಅವರೇ ಕೆಳಗೆ ಕೂತು ಬೈಕ್ ಟೈಯರ್​​ನ ಪ್ರೆಷರ್ ನೋಡಿದರು. ಅವರು ನಡೆದುಕೊಂಡ ರೀತಿ ಇಷ್ಟವಾಯಿತು’ ಎಂದಿದ್ದಾರೆ ಮಂಜು. ನಂತರ ಇಬ್ಬರೂ ಒಟ್ಟಿಗೆ ಕೂತು ಟೀ ಕೂಡ ಹೀರಿದ್ದಾರೆ. ಈ ಫೋಟೋಗಳನ್ನು ಮಂಜು ಕಶ್ಯಪ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada