ಪವನ್ ಕಲ್ಯಾಣ್ ಸಿನಿಮಾಕ್ಕೆ ಅನುಮತಿ ತಿರಸ್ಕರಿಸಿದ ತೆಲಂಗಾಣ ಸರ್ಕಾರ

Pawan Kalyan: ಪವನ್ ಕಲ್ಯಾಣ್, ಪ್ರಸ್ತುತ ದಕ್ಷಿಣ ಭಾರತದ ಬಲು ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರು. ಆಂಧ್ರ ಪ್ರದೇಶದ ಡಿಸಿಎಂ ಅವರು. ಜೊತೆಗೆ ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಮುಂದಿನ ವಾರ ಅವರ ಹೊಸ ಸಿನಿಮಾ ‘ಓಜಿ’ ಬಿಡುಗಡೆ ಆಗಲಿದೆ. ಆದರೆ ತೆಲಂಗಾಣ ಸರ್ಕಾರ ‘ಓಜಿ’ ಸಿನಿಮಾಕ್ಕೆ ಅನುಮತಿ ನಿರಾಕರಿಸಿದೆ. ಏಕೆ?

ಪವನ್ ಕಲ್ಯಾಣ್ ಸಿನಿಮಾಕ್ಕೆ ಅನುಮತಿ ತಿರಸ್ಕರಿಸಿದ ತೆಲಂಗಾಣ ಸರ್ಕಾರ
Pawan Kalyan

Updated on: Sep 20, 2025 | 6:00 PM

ಪವನ್ ಕಲ್ಯಾಣ್ (Pawan Kalyan) ದಕ್ಷಿಣ ಭಾರತ ರಾಜಕೀಯದ ಜನಪ್ರಿಯ ನಾಯಕರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಉಪಮುಖ್ಯ ಮಂತ್ರಿ ಆಗಿರುವ ಪವನ್ ಕಲ್ಯಾಣ್ ಆಡಳಿತದ ಜೊತೆಗೆ ಸಿನಿಮಾ ಕೆಲಸಗಳನ್ನೂ ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೆಲ ವಾರಗಳ ಹಿಂದಷ್ಟೆ ಅವರ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕಮಾಲ್ ಮಾಡಲಿಲ್ಲ. ಇದೀಗ ಅವರ ನಟನೆಯ ಮತ್ತೊಂದು ಸಿನಿಮಾ ‘ಓಜಿ’ ಬಿಡುಗಡೆ ಆಗುತ್ತಿದೆ.

ಪವನ್ ಕಲ್ಯಾಣ್ ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೆ ಧುಮುಕುವ ಮೊದಲು ‘ಓಜಿ’ ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ಆದರೆ ಚುನಾವಣೆಯಲ್ಲಿ ಬ್ಯುಸಿ ಆದ ಕಾರಣ ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡು ಪವನ್ ಅವರು ಸಿನಿಮಾ ಮುಗಿಸಿಕೊಟ್ಟಿದ್ದಾರೆ. ‘ಓಜಿ’ ಸಿನಿಮಾ ಮುಂದಿನ ಗುರುವಾರ (ಸೆಪ್ಟೆಂಬರ್ 25) ಬಿಡುಗಡೆ ಆಗಲಿದೆ.

ತೆಲುಗು ರಾಜ್ಯಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗುವ ಮೊದಲು ಸಿನಿಮಾಗಳ ಹೆಚ್ಚುವರಿ ಶೋಗಳಿಗೆ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಗಳಿಂದ ಅನುಮತಿ ಪಡೆಯಬೇಕೆಂಬ ನಿಯಮವಿದೆ. ಪವನ್ ಕಲ್ಯಾಣ್ ನಟನೆಯ ಈ ಹಿಂದಿನ ಸಿನಿಮಾ ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೂ ಟಿಕೆಟ್ ದರ ಹೆಚ್ಚಿಸಲು ಮತ್ತು ಶೋಗಳ ಸಂಖ್ಯೆ ಹೆಚ್ಚಿಸಲು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳಿಂದ ಅನುಮತಿ ಪಡೆಯಲಾಗಿತ್ತು.

ಇದನ್ನೂ ಓದಿ:ಪವನ್ ಕಲ್ಯಾಣ್ ಜನ್ಮದಿನ: 5 ಲಕ್ಷ ರೂಪಾಯಿಗೆ ಹರಾಜಾಯ್ತು ‘ಒಜಿ’ ಚಿತ್ರದ ಮೊದಲ ಟಿಕೆಟ್

ಅಂತೆಯೇ ಈ ಬಾರಿಯೂ ಸಹ ‘ಓಜಿ’ ಸಿನಿಮಾದ ಹೆಚ್ಚುವರಿ ಶೋ ಮತ್ತು ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ಕೋರಲಾಗಿತ್ತು. ಆಂಧ್ರ ಸರ್ಕಾರ ನಿರೀಕ್ಷೆಯಂತೆಯೇ ಅನುಮತಿ ನೀಡಿದೆ. ಆದರೆ ನೆರೆಯ ತೆಲಂಗಾಣ ಸರ್ಕಾರ, ‘ಓಜಿ’ ಸಿನಿಮಾದ ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಿಸಿದೆ. ಆದರೆ ಸಿನಿಮಾ ಬಿಡುಗಡೆಯಾದ ಮೊದಲ ನಾಲ್ಕು ದಿನ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.

ಆಂಧ್ರ ಪ್ರದೇಶದಲ್ಲಿ ‘ಓಜಿ’ ಸಿನಿಮಾದ ಶೋಗಳು ಮಧ್ಯರಾತ್ರಿ 1 ಗಂಟೆಯಿಂದಲೇ ಪ್ರಾರಂಭ ಆಗಲಿವೆ. ಆದರೆ ತೆಲಂಗಾಣದಲ್ಲಿ ರಾತ್ರಿ 1 ಗಂಟೆ ಶೋಗಳಿಗೆ ಅನುಮತಿ ನೀಡಲಾಗಿಲ್ಲ. ‘ಪುಷ್ಪ 2’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಆದ ಅವಘಡದ ಬಳಿಕ ಮಧ್ಯರಾತ್ರಿ ಶೋಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ ಈಗ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಿನಿಮಾಕ್ಕೂ ಸಹ ಮಧ್ಯ ರಾತ್ರಿ ಶೋಗಳಿಗೆ ಅನುಮತಿ ನಿರಾಕರಿಸಲಾಗಿದೆ. ಆದರೆ ಸೆಪ್ಟೆಂಬರ್ 24ರ ರಾತ್ರಿ 9 ಗಂಟೆಗೆ ಶೋ ಪ್ರದರ್ಶಿಸಲು ಅಭ್ಯಂತರವಿಲ್ಲ ಎಂದಿದೆ.

ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಅನ್ನು ಸುಜೀತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಡಿವಿವಿ ದಯಾನಂದ. ಬಾಲಿವುಡ್ ಸ್ಟಾರ್ ನಟ ಇಮ್ರಾನ್ ಹಾಶ್ಮಿ ಈ ಸಿನಿಮಾದ ವಿಲನ್. ಪ್ರಿಯಾಂಕಾ ಮೋಹನ್ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ