AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಗೋಪಾಲ್ ವರ್ಮ ನಿರ್ದೇಶನದ ‘ವ್ಯೂಹಂ’ ಸೆನ್ಸಾರ್ ಪ್ರಮಾಣಪತ್ರ ಅಮಾನತು ಆದೇಶ ಮತ್ತೆ ಮೂರು ವಾರ ವಿಸ್ತರಣೆ

ಒಂದು ಕಾಲದ ಭಾರತದ ಟಾಪ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕಳೆದ ಕೆಲವು ವರ್ಷಗಳಿಂದ ವಿವಾದಗಳನ್ನು ಹುಟ್ಟುಹಾಕಲೆಂದೇ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ನಿರ್ದೇಶನದ ‘ವ್ಯೂಹಂ’ ಸಿನಿಮಾ ಸದ್ದು ಮಾಡುತ್ತಿದೆ.

ರಾಮ್ ಗೋಪಾಲ್ ವರ್ಮ ನಿರ್ದೇಶನದ ‘ವ್ಯೂಹಂ’ ಸೆನ್ಸಾರ್ ಪ್ರಮಾಣಪತ್ರ ಅಮಾನತು ಆದೇಶ ಮತ್ತೆ ಮೂರು ವಾರ ವಿಸ್ತರಣೆ
ವ್ಯೂಹಂ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Jan 23, 2024 | 2:31 PM

Share

ರಾಮ್ ಗೋಪಾಲ್ ವರ್ಮಾ (Ram Gopal Varma) ನಿರ್ದೇಶನದ ‘ವ್ಯೂಹಂ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಪ್ರಾಮಣಪತ್ರ ನೀಡಿತ್ತು. ಇನ್ನು ಕೆಲವೇ ತಿಂಗಳುಗಳಲ್ಲಿ ಆಂಧ್ರದಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಈ ಚಿತ್ರ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸೆನ್ಸಾರ್​ ಪ್ರಮಾಣ ಪತ್ರವನ್ನು ಅಮಾತು ಮಾಡಲಾಗಿತ್ತು. ಆದೇಶವನ್ನು ಈಗ ವಿಸ್ತರಿಸಲಾಗಿದೆ. ತೆಲಂಗಾಣ ಹೈಕೋರ್ಟ್​ನ ಏಕ ಸದಸ್ಯ ಪೀಠ ಮೂರು ವಾರಗಳ ಈ ರದ್ದತಿಯನ್ನು ವಿಸ್ತರಿಸಿದೆ.

ನ್ಯಾಯಮೂರ್ತಿ ಸುರೇಪಳ್ಳಿ ನಂದ ಅವರು ಸೆನ್ಸಾರ್ ಬೋರ್ಡ್​ಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈ ಸಿನಿಮಾವನ್ನು ಮತ್ತೊಂದು ಬಾರಿ ವೀಕ್ಷಿಸಿ ವಿವಾದಾತ್ಮಕ ದೃಶ್ಯಗಳನ್ನು ಡಿಲೀಟ್ ಮಾಡಲು ಸೆನ್ಸಾರ್ ಮಂಡಳಿಗೆ ಸೂಚಿಸಲಾಗಿದೆ. ಮೂರು ವಾರಗಳಲ್ಲಿ ಹೊಸ ಸೆನ್ಸಾರ್ ಪ್ರಮಾಣ ಪತ್ರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ.

ಮತ್ತೊಂದೆಡೆ, ಮಧ್ಯಂತರ ಆದೇಶವನ್ನು ತೆಗೆದುಹಾಕುವಂತೆ ನಿರ್ಮಾಪಕ ದಾಸರಿ ಕಿರಣ್‌ಕುಮಾರ್ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು. ‘ಆಂಧ್ರಪ್ರದೇಶ ಚುನಾವಣೆ ಮೇಲೆ ವ್ಯೂಹಮ್ ಚಿತ್ರ ಪ್ರಭಾವ ಬೀರಲಿದೆ ಎಂದಾದರೆ ಈ ಚಿತ್ರವನ್ನು ತೆಲಂಗಾಣದಲ್ಲಿ ರಿಲೀಸ್ ಮಾಡಲು ಅವಕಾಶ ನೀಡಬೇಕು’ ಎಂದು ಅವರು ಹೈಕೋರ್ಟ್‌ಗೆ ಮನವಿ ಮಾಡಿದರು. ಇದಕ್ಕೆ ಲೋಕೇಶ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಡಿಸೆಂಬರ್ 29ರಂದು ‘ವ್ಯೂಹಂ’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಈ ಚಿತ್ರ ಆಂಧ್ರಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ವರ್ಚಸ್ಸಿಗೆ ದಕ್ಕೆ ತರುವ ರೀತಿ ಇದೆ ಎಂದು ಟಿಡಿಪಿ ಮುಖ್ಯ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಆರೋಪಿಸಿದ್ದರು. ಅವರು ಸೆನ್ಸಾರ್ ಮಂಡಳಿ ನೀಡಿದ ಪ್ರಮಾಣ ಪತ್ರವನ್ನು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದರು. ಡಿಸೆಂಬರ್ 28ರಂದು ಹೈಕೋರ್ಟ್​ ಸೆನ್ಸಾರ್ ಮಂಡಳಿ ನೀಡಿದ್ದ ಪ್ರಮಾಣಪತ್ರವನ್ನು ರದ್ದು ಮಾಡಿತು. ಇದರಿಂದ ಸಿನಿಮಾಗೆ ಹಿನ್ನಡೆ ಆಯಿತು.

ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ಕಚೇರಿ ಮುಂದೆ ಗಲಾಟೆ, ‘ವ್ಯೂಹಂ’ ಪೋಸ್ಟರ್​ಗೆ ಬೆಂಕಿ

‘ವ್ಯೂಹಂ’ ಸಿನಿಮಾಗೆ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ ಬರೆದು, ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್ ಅವರು ಚಂದ್ರಬಾಬು ನಾಯ್ಡು ಪಾತ್ರ ಮಾಡಿದ್ದಾರೆ. ವಾಸು, ಕೋಟ ಜಯರಾಮ್, ಮಾನಸಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ರಾಮ್ ಗೋಪಾಲ್ ವರ್ಮ ಸಿನಿಮಾಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಅವರ ಸಿನಿಮಾಗಳಲ್ಲಿ ವಿವಾದ ಹೆಚ್ಚಿರುತ್ತದೆ. ಈಗ ‘ವ್ಯೂಹಂ’ ಚಿತ್ರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ