ಹಿಂದಿ ಬಿಗ್ ಬಾಸ್ (BiggBoss) ಹಾಗೂ ಕನ್ನಡ ಬಿಗ್ ಬಾಸ್ ಒಂದೇ ದಿನ ಪೂರ್ಣಗೊಂಡಿದೆ. ಜನವರಿ 28ರಂದು ಎರಡೂ ಫಿನಾಲೆ ನಡೆದಿದೆ. ಹಿಂದಿಯಲ್ಲಿ 17 ಸೀಸನ್ಗಳು ಹಾಗೂ ಕನ್ನಡದಲ್ಲಿ 10 ಸೀಸನ್ಗಳು ಪೂರ್ಣಗೊಂಡಿವೆ. ಬಿಗ್ ಬಾಸ್ ಪೂರ್ಣಗೊಂಡ ಬಳಿಕವೂ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಮಧ್ಯೆ ‘ಬಿಗ್ ಬಾಸ್’ ನೋಡಿದ ವೀಕ್ಷಕರು ಒಂದು ಹೊಸ ಥಿಯರಿಯೊಂದಿಗೆ ಬಂದಿದ್ದಾರೆ. ‘ಬಿಗ್ ಬಾಸ್ನಲ್ಲಿ ಗೆಲ್ಲೋ ಸ್ಪರ್ಧಿ ಯಾವಾಗಲೂ ನಿರೂಪಕನ ಎಡಭಾಗದಲ್ಲಿ ಇರುತ್ತಾರೆ ಎನ್ನುವ ಥಿಯರಿಯನ್ನು ಕೆಲವರು ಮುಂದಿಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಒದಗಿಸುವ ವಿಡಿಯೋ ಕೂಡ ತಂದಿದ್ದಾರೆ.
ಬಿಗ್ ಬಾಸ್ ಫಿನಾಲೆ ಮೂಮೆಂಟ್ ಸಖತ್ ಟೆನ್ಷನ್ನಿಂದ ಕೂಡಿರುತ್ತದೆ. ನಿರೂಪಕನ ಅಕ್ಕ-ಪಕ್ಕ ಇಬ್ಬರು ನಿಂತಿರುತ್ತಾರೆ. ಇವರ ಪೈಕಿ ಯಾರ ಕೈ ಎತ್ತಲಾಗುತ್ತದೆ ಎನ್ನುವ ಕುತೂಹಲ ಇರುತ್ತದೆ. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಕಾರ್ತಿಕ್ ಮಹೇಶ್ ಗೆದ್ದಿದ್ದಾರೆ. ಹಿಂದಿಯಲ್ಲಿ ಮುನಾವರ್ ಫಾರೂಖಿ ಗೆದ್ದು ಬೀಗಿದ್ದಾರೆ. ಇವರಿಬ್ಬರೂ ನಿಂತಿದ್ದು ನಿರೂಪಕನ ಎಡಭಾಗದಲ್ಲಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ ಸೀಸನ್ 10 ಗೆದ್ದ ಕಾರ್ತಿಕ್ ಮಹೇಶ್, ಡ್ರೋನ್ ಪ್ರತಾಪ್ ರನ್ನರ್ ಅಪ್
ಹಾಗಂತ ಈ ರೀತಿ ಆಗುತ್ತಿರುವುದು ಇದು ಮೊದಲೇನು ಅಲ್ಲ. ಹಿಂದಿಯಲ್ಲಿ ಗೆಲುವು ಕಂಡ ಸಿದ್ದಾರ್ಥ್ ಶುಕ್ಲ, ಕನ್ನಡದಲ್ಲಿ ಗೆಲುವು ಕಂಡ ಶೈನ್ ಶೆಟ್ಟಿ, ಒಳ್ಳೆ ಹುಡುಗ ಪ್ರಥಮ್ ಸೇರಿ ಅನೇಕರು ನಿರೂಪಕನ ಎಡಭಾಗದಲ್ಲೇ ನಿಂತಿದ್ದರು. ಅವರೇ ವಿನ್ ಆಗಿದ್ದಾರೆ. ಹೀಗಾಗಿ, ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ವಿನ್ ಆಗುವವರನ್ನು ಎಡಭಾಗದಲ್ಲಿ ನಿಲ್ಲಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದನ್ನು ಹೌದು ಎಂದು ಕೆಲವರು ಒಪ್ಪಿದರೆ, ಇನ್ನೂ ಕೆಲವರು ಕಾಕತಾಳೀಯ ಎಂದಿದ್ದಾರೆ.
ಕನ್ನಡದಲ್ಲಿ ‘ಬಿಗ್ ಬಾಸ್’ ಆರಂಭ ಆಗಿ 112 ದಿನಗಳು ಕಳೆದಿದ್ದವು. ಈ ಸೀಸನ್ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಿನಯ್ ಗೌಡ, ಸಂಗೀತಾ ಶೃಂಗೇರಿ, ಪ್ರತಾಪ್ ಅವರಂಥ ಘಟಾನುಘಟಿಯವರನ್ನು ಹಿಂದಿಕ್ಕಿ ಕಾರ್ತಿಕ್ ಕಪ್ ಎತ್ತಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಜೊತೆ ಮಾರುತಿ ಸುಜುಕಿ ಬ್ರೇಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಸಿಕ್ಕಿದೆ. ಹಿಂದಿಯಲ್ಲಿ ವಿನ್ ಆದ ಮುನಾವರ್ಗೆ ಹ್ಯೂಂಡೈ ಕ್ರೆಟಾ ಕಾರು, 50 ಲಕ್ಷ ರೂಪಾಯಿ ಸಿಕ್ಕಿದೆ. ಕನ್ನಡದಲ್ಲಿ ಕಾರ್ತಿಕ್ ಪಕ್ಕ ಡ್ರೋನ್ ಪ್ರತಾಪ್ ಇದ್ದರು. ಹಿಂದಿಯಲ್ಲಿ ಮುನಾವರ್ ಪಕ್ಕ ಅಭಿಷೇಕ್ ಕುಮಾರ್ ಇದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ