‘ಗೋಲ್ಡನ್​ ಗ್ಯಾಂಗ್​’ ಶೋ ಅದ್ದೂರಿ ಪ್ರೀ-ಲಾಂಚ್​ ಕಾರ್ಯಕ್ರಮ; ಗಣೇಶ್​ ಅಭಿಮಾನಿಗಳಿಗೆ ಹಬ್ಬ

| Updated By: ಮದನ್​ ಕುಮಾರ್​

Updated on: Jan 01, 2022 | 4:53 PM

Golden Gang Reality Show: ‘ಗೋಲ್ಡನ್ ಗ್ಯಾಂಗ್’ ಪ್ರೀ-ಲಾಂಚ್​ ಇವೆಂಟ್​ನಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಕಲರ್​ಫುಲ್​ ಸಂಚಿಕೆ ಹೊಸ ವರ್ಷದ ಪ್ರಯುಕ್ತ ಜ.2ರ ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.

‘ಗೋಲ್ಡನ್​ ಗ್ಯಾಂಗ್​’ ಶೋ ಅದ್ದೂರಿ ಪ್ರೀ-ಲಾಂಚ್​ ಕಾರ್ಯಕ್ರಮ; ಗಣೇಶ್​ ಅಭಿಮಾನಿಗಳಿಗೆ ಹಬ್ಬ
ಯೋಗರಾಜ್​ ಭಟ್​, ಗಣೇಶ್​
Follow us on

ಕಿರುತೆರೆಯ ಕಾರ್ಯಕ್ರಮಗಳು ಕೂಡ ಸಿನಿಮಾದ ಗುಣಮಟ್ಟದಲ್ಲೇ ನಿರ್ಮಾಣ ಆಗುತ್ತಿವೆ. ಇಂಥ ಶೋಗಳನ್ನು ಜನರಿಗೆ ತಲುಪಿಸಲು ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ಪ್ರೀ-ರಿಲೀಸ್​ ಇವೆಂಟ್​ ಮಾಡುವ ಟ್ರೆಂಡ್​ ಚಾಲ್ತಿಯಲ್ಲಿದೆ. ಅದೇ ರೀತಿ ಜೀ ಕನ್ನಡ (Zee Kannada) ವಾಹಿನಿ ಕೂಡ ತನ್ನ ಕಾರ್ಯಕ್ರಮವೊಂದರ ಪ್ರಸಾರಕ್ಕೂ ಮುನ್ನ ಭರ್ಜರಿಯಾಗಿ ಪ್ರೀ-ಲಾಂಚ್​ ಇವೆಂಟ್​ ಮಾಡಿದೆ. ಅದು, ‘ಗೋಲ್ಡನ್​ ಗ್ಯಾಂಗ್​’ (Golden Gang) ಕಾರ್ಯಕ್ರಮದ ಪ್ರೀ-ಲಾಂಚ್​ ಇವೆಂಟ್​. ಈ ಶೋ ನಡೆಸಿಕೊಡಲಿರುವುದು ‘ಗೋಲ್ಡನ್​ ಸ್ಟಾರ್​’ ಗಣೇಶ್​ (Golden Star Ganesh) ಎಂಬುದು ವಿಶೇಷ. ಈ ಕಾರ್ಯಕ್ರಮದ ಮೂಲಕ ಅವರು ಮತ್ತೆ ಕಿರುತೆರೆಗೆ ಮರಳಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ ‘ಗೋಲ್ಡನ್ ಗ್ಯಾಂಗ್’. ಸ್ನೇಹಿತರಿಂದ, ಸ್ನೇಹಿತರಿಗಾಗಿ, ಸ್ನೇಹಿತರಿಗೋಸ್ಕರವೇ ಸಿದ್ಧಗೊಂಡಿರುವ ಈ ಕಾರ್ಯಕ್ರಮಕ್ಕೆ ನಟ ಗಣೇಶ್ ಸಾರಥಿ ಆಗಿದ್ದಾರೆ. ಶೀಘ್ರವೇ ಈ ಶೋ ಪ್ರಸಾರ ಆರಂಭಿಸಲಿದೆ. ಅದಕ್ಕೂ ಮುನ್ನ ನಡೆದ ಪ್ರೀ-ಲಾಂಚ್​ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಈ ಕಲರ್​ಫುಲ್​ ಕಾರ್ಯಕ್ರಮವು ಹೊಸ ವರ್ಷದ ಪ್ರಯುಕ್ತ ಜ.2ರ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಆ ಮೂಲಕ ಗಣೇಶ್​ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ.

‘ಗೋಲ್ಡನ್​ ಗ್ಯಾಂಗ್​’ ಪ್ರೀ-ಲಾಂಚ್​ ಇವೆಂಟ್​ನಲ್ಲಿ ಜೀ ಕನ್ನಡ ಕುಟುಂಬದ ಕಲಾವಿದರ ಜೊತೆಗೆ ಗಣೇಶ್​ ಹೆಜ್ಜೆ ಹಾಕಿ, ಹಾಡಿ, ಆಡಿ, ನಲಿದಿದ್ದಾರೆ. ತಮ್ಮ ನಿರೂಪಣೆಯ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ನಿರೂಪಕಿ ಅನುಶ್ರೀ ಅವರೊಡನೆ ಜತೆಗೂಡಿ ಅವರು ನಿರೂಪಣೆ ಮಾಡಿದ್ದಾರೆ. ವಿಶೇಷ ಅತಿಥಿಯಾಗಿ ಆಗಮಿಸಿದ್ದ ನಿರ್ದೇಶಕ, ಗೀತರಚನಕಾರ ಯೋಗರಾಜ್ ಭಟ್ ಅವರು ‘ಮುಂಗಾರು ಮಳೆ’ ಚಿತ್ರದ ಆ ದಿನಗಳನ್ನು ಮೆಲುಕು ಹಾಕಿದರು. ಗಣೇಶ್​ ಜೊತೆಗಿನ ತರಲೆ, ತಮಾಷೆಯ ಪ್ರಸಂಗಗಳನ್ನು ಕೂಡ ಹಂಚಿಕೊಂಡರು.

ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ‘ಗೋಲ್ಡನ್ ಗ್ಯಾಂಗ್’ ಕಾರ್ಯಕ್ರಮದ ಶೀರ್ಷಿಕೆ ಗೀತೆಗೆ ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದಾರೆ. ಯೋಗರಾಜ್​ ಭಟ್​ ಸಾಹಿತ್ಯ ರಚಿಸಿದ್ದಾರೆ. ಇದೀಗ ಈ ಫ್ರೆಂಡ್ಸ್ ಆಂಥೆಮ್ ಬಿಡುಗಡೆ ಆಗಿದ್ದು ಸಖತ್​ ಮೆಚ್ಚುಗೆ ಗಳಿಸುತ್ತಿದೆ.

ಹಿರಿತೆರೆ, ಕಿರುತೆರೆ, ರಾಜಕೀಯ, ಕ್ರೀಡಾವಲಯ ಹೀಗೆ ವಿವಿಧ ಕ್ಷೇತ್ರಗಳ ಸಾಧಕರು ಅವರ ಸ್ನೇಹಿತರ ಜೊತೆ ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ವೀಕ್ಷಕರಿಗೆ ತಮ್ಮ ಬಾಲ್ಯ, ಯೌವ್ವನದ ದಿನಗಳಲ್ಲಿ ತಾವು ಆಡಿದ ಆಟ-ತುಂಟಾಟಗಳನ್ನು ನೆನಪಿಸಲಿದ್ದಾರೆ. ಅದಕ್ಕೆ ಜೀ ಕನ್ನಡದ ‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮ ವೇದಿಕೆ ಕಲ್ಪಿಸಿಕೊಡಲಿದೆ.

ಇದನ್ನೂ ಓದಿ:

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’

Sakath Movie Review: ‘ಸಖತ್’​ ಮನರಂಜನೆ, ‘ಸಖತ್’​ ಸಂದೇಶ; ಇದು ಗಣೇಶ್​-ಸುನಿ ಪಂಚ್​