ನಟಿ ಆಲಿಯಾ ಭಟ್ (Alia Bhatt) ಅವರು ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ‘ಆರ್ಆರ್ಆರ್’ (RRR Movie) ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ಒಮಿಕ್ರಾನ್ ಕಾರಣದಿಂದ ಆ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ‘ಆರ್ಆರ್ಆರ್’ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳಲ್ಲಿ ಚಿತ್ರತಂಡ ಭಾಗವಹಿಸಿದೆ. ಅವುಗಳಲ್ಲಿ ‘ದಿ ಕಪಿಲ್ ಶರ್ಮಾ ಶೋ’ (The Kapil Sharma Show) ಕಾರ್ಯಕ್ರಮ ಹೆಚ್ಚು ಹೈಲೈಟ್ ಆಗಿದೆ. ಈ ಶೋನಲ್ಲಿ ಆಲಿಯಾ ಭಟ್ ಜೊತೆ ಜ್ಯೂ. ಎನ್ಟಿಆರ್, ರಾಮ್ ಚರಣ್ (Ram Charan), ರಾಜಮೌಳಿ ಕೂಡ ಭಾಗಿ ಆಗಿದ್ದರು. ಈ ವೇಳೆ ಆಲಿಯಾ ಮತ್ತು ಜ್ಯೂ. ಎನ್ಟಿಆರ್ (Jr NTR) ನಡುವೆ ಒಂದಷ್ಟು ತಮಾಷೆಯ ಮಾತುಕತೆ ನಡೆದಿದೆ.
ಕಪಿಲ್ ಶರ್ಮಾ ಶೋ ಎಂದರೆ ಅಲ್ಲಿ ತಮಾಷೆಗೆ ಬರವಿಲ್ಲ. ಬಂದ ಅತಿಥಿಗಳನ್ನು ಕಪಿಲ್ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಅವರ ಹಾಸ್ಯದ ಲಹರಿಗೆ ಅತಿಥಿಗಳು ಕೂಡ ಸಾಥ್ ನೀಡುತ್ತಾರೆ. ನಟಿ ಆಲಿಯಾ ಭಟ್ ಅವರು ಜ್ಯೂ. ಎನ್ಟಿಆರ್ ಬಗ್ಗೆ ಒಂದು ಆರೋಪ ಮಾಡಿದರು. ‘ಇವರು ತುಂಬ ಚೆನ್ನಾಗಿ ಅಡುಗೆ ಮಾಡುತ್ತಾರೆ. ಆದರೆ ಒಂದು ಬಾರಿ ಕೂಡ ನಮಗೆ ಅಡುಗೆ ಮಾಡಿ ಕೊಟ್ಟಿಲ್ಲ’ ಎಂದು ಆಲಿಯಾ ತಕರಾರು ತೆಗೆದರು. ಅದಕ್ಕೆ ಜ್ಯೂ. ಎನ್ಟಿಆರ್ ಕಡೆಯಿಂದ ಬಂದ ಪ್ರತಿಕ್ರಿಯೆ ಕೂಡ ಅಷ್ಟೇ ಫನ್ನಿ ಆಗಿತ್ತು.
ಎಲ್ಲರಿಗೂ ತಿಳಿದಿರುವಂತೆ ಜ್ಯೂ. ಎನ್ಟಿಆರ್ ಅವರ ಹಾಸ್ಯಪ್ರಜ್ಞೆ ಸೂಪರ್ ಆಗಿದೆ. ಆಲಿಯಾ ಮಾಡಿದ ಆರೋಪಕ್ಕೆ ಅವರು ತಮಾಷೆಯಾಗಿಯೇ ಉತ್ತರ ನೀಡಿದರು. ‘ಇವರು ಸೈಜ್ ಜೀರೋ ಆಗಿದ್ದಾರೆ. ಇವರಿಗೆ ನಾನು ಅಡುಗೆ ಮಾಡಿ ಬಡಿಸಲು ಹೇಗೆ ಸಾಧ್ಯ’ ಎಂದು ಅವರು ಕಾಲೆಳೆದರು. ಆ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು. ‘ನಾನು ಕೇಳಿಕೊಂಡ್ರೂ ಸಹ ಇವರು ನನಗೆ ಅಡುಗೆ ಮಾಡಿ ಬಡಿಸುವುದಿಲ್ಲ’ ಎಂದು ಆಲಿಯಾ ಪ್ರತ್ಯಾರೋಪ ಮಾಡಿದರು.
ಇಂಥ ಅನೇಕ ಫನ್ನಿ ಮಾತುಕತೆಗಳು ಈ ಎಪಿಸೋಡ್ನಲ್ಲಿ ನಡೆದಿವೆ. ಆದರೆ ಎಲ್ಲವನ್ನೂ ಟಿವಿಯಲ್ಲಿ ಪ್ರಸಾರ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅನ್-ಸೆನ್ಸಾರ್ಡ್ ವಿಡಿಯೋವನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಆ ವಿಡಿಯೋ 37 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನ ಮಿತಿ ನಿರ್ಬಂಧ ಹೇರಲಾಗಿದೆ. ಹಾಗಾಗಿ ‘ಆರ್ಆರ್ಆರ್’ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದ್ದು, ಹೊಸ ರಿಲೀಸ್ ಡೇಟ್ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ:
‘ಆರ್ಆರ್ಆರ್’ ಚಿತ್ರದಲ್ಲಿ ಆಲಿಯಾ, ಅಜಯ್ ದೇವಗನ್ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ
ಶರ್ಟ್ ಬಟನ್ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್ ಸಹಾಯ; ವಿಡಿಯೋ ವೈರಲ್