ಕೆಬಿಸಿ 13: ಅಮೀತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯ 13ನೇ ಸೀಸನ್ ಪ್ರಸ್ತುತ ಉತ್ತಮವಾಗಿ ಮೂಡಿಬರುತ್ತಿದೆ. ಈಗಾಗಲೇ ಇಬ್ಬರು ಕೋಟ್ಯಧಿಪತಿಗಳು ಈ ಸೀಸನ್ನಲ್ಲಿ ಹೊರಹೊಮ್ಮಿದ್ದಾರೆ. ಅಲ್ಲದೇ ಪ್ರತಿ ಶುಕ್ರವಾರ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ರಂಗದ ಖ್ಯಾತ ತಾರೆಯರು ಆಗಮಿಸಿ, ಚಾರಿಟಿಯ ಉದ್ದೇಶದಿಂದ ಭಾಗವಹಿಸುತ್ತಾರೆ. ಅದೂ ಕೂಡ ಯಶಸ್ವಿಯಾಗಿ ನಡೆಯುತ್ತಿದೆ. ಈ ಶೋ ಆರಂಭವಾಗಿ 20 ವರ್ಷಗಳು ಕಳೆದಿದ್ದು, ಬಹುತೇಕ ಅಮಿತಾಭ್ ನಿರೂಪಕರಾಗಿ ಶೋ ನಡೆಸಿಕೊಟ್ಟಿದ್ದಾರೆ. ದೀರ್ಘಾವಧಿಯಿಂದ ನಡೆಯುತ್ತಿರುವ ಯಶಸ್ವಿ ಶೋ ಇದಾಗಿದ್ದು, ಬಹುತೇಕರಿಗೆ ಇದರ ಪರಿಚಯವಿರುತ್ತದೆ. ಆದರೆ ಎಲ್ಲರಿಗೂ ಈ ಸ್ಪರ್ಧೆಯ ನಿಯಮಗಳು ಸ್ಪಷ್ಟವಾಗಿ ತಿಳಿದಿರಬೇಕು ಎಂದೇನೂ ಇಲ್ಲ. ಅಂಥದ್ದೇ ಪ್ರಸಂಗಕ್ಕೆ ಕೆಬಿಸಿ ವೇದಿಕೆ ಇತ್ತೀಚೆಗೆ ಸಾಕ್ಷಿಯಾಗಿದೆ. ಬಾಲಿವುಡ್ನ ಖ್ಯಾತ ನಟಿ ಕತ್ರೀನಾ ಕೈಫ್ ಇತ್ತೀಚೆಗೆ ಶೋನಲ್ಲಿ ಭಾಗಿಯಾಗಿದ್ದು, ಸ್ಪರ್ಧೆಯ ನಿಯಮಗಳ ಕುರಿತು ಇದುವರೆಗೆ ಯಾರೂ ಕೇಳಿರದ ಪ್ರಶ್ನೆಯೊಂದನ್ನು ಅಮಿತಾಭ್ ಮುಂದಿಟ್ಟಿದ್ದಾರೆ.
‘ಸೂರ್ಯವಂಶಿ’ ಚಿತ್ರದ ಪ್ರಚಾರದ ಉದ್ದೇಶದಿಂದ ಕೆಬಿಸಿ 13ರ ಕಾರ್ಯಕ್ರಮದಲ್ಲಿ ಕತ್ರೀನಾ ಕೈಫ್ ಹಾಗೂ ನಟ ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಆಗ ಅಮಿತಾಭ್ ಮಾತನಾಡುತ್ತಾ ಕರೀನಾ ಅವರ ಬಳಿ, ನೀವು ಸ್ಪರ್ಧೆಗೆ ಹೇಗೆ ತಯಾರಾಗಿದ್ದೀರಿ ಎಂದು ಪ್ರಶ್ನಿಸಿದರು. ಆಗ ಕತ್ರೀನಾ, ಇತಿಹಾಸದ ಕೆಲವೊಂದು ಘಟನೆಗಳನ್ನು ಓದಿಕೊಂಡೆ, ನಂತರ ಒಂದಷ್ಟು ಗೂಗಲ್ ಸರ್ಚ್ ಮಾಡಿ ಮಾಹಿತಿ ಕಲೆಹಾಕಿಕೊಂಡಿದ್ದೇನೆ ಎಂದರು. ಇದೇ ಪ್ರಶ್ನೆಯನ್ನು ಬಿಗ್ಬಿ ಅಕ್ಷಯ್ಗೆ ಕೇಳಿದರು. ಆಗ ಅಕ್ಷಯ್, ‘ನನಗೇನೋ ತಿಳಿದಿದೆಯೋ ಅದನ್ನು ನಾನು ಹೇಳುತ್ತೇನೆ. ಇಲ್ಲಿ ಗೆಲ್ಲಬೇಕೆಂದು ಬಂದಿರುವವರು ಕತ್ರೀನಾ’ ಎಂದು ಹೇಳಿದರು.
ನಂತರ ಕತ್ರೀನಾ ಅಮಿತಾಭ್ ಬಳಿ, ‘ನಾವು ಲೈಫ್ಲೈನ್ ಅನ್ನು ಪ್ರತೀ ಪ್ರಶ್ನೆಗೂ ಒಮ್ಮೆ ಬಳಸಬಹುದೇ?’ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಅಮಿತಾಭ್ ಅಕ್ಷರಶಃ ದಂಗಾಗಿ, ಮೌನವಾಗಿ ಕುಳಿತರು. ಆಗ ಅಕ್ಷಯ್ ಅಮಿತಾಭ್ ಬಳಿ, ‘‘ನೀವು ಇಷ್ಟು ವರ್ಷ ಸ್ಪರ್ಧೆ ನಡೆಸುತ್ತಿದ್ದೀರಿ. ಆದರೆ ಇದುವರೆಗೆ ಯಾರೂ ಆ ಪ್ರಶ್ನೆಯನ್ನು ನಿಮಗೆ ಕೇಳಿಲ್ಲ’’ ಎಂದು ತಮಾಷೆ ಮಾಡಿದರು. ಅಕ್ಷಯ್ ಮಾತಿಗೆ ಇಡೀ ಸೆಟ್ ನಗೆಗಡಲಲ್ಲಿ ತೇಲಿದೆ. ಈ ಸಂಚಿಕೆ ಶುಕ್ರವಾರ ಪ್ರಸಾರವಾಗಲಿದೆ.
ವಾಹಿನಿ ಹಂಚಿಕೊಂಡ ಪ್ರೋಮೋ ಇಲ್ಲಿದೆ:
ಅಕ್ಷಯ್ ಕುಮಾರ್ ಹಾಗೂ ಕತ್ರೀನಾ ಕೈಫ್ ನಟನೆಯ ಸೂರ್ಯವಂಶಿ ಚಿತ್ರ ನವೆಂಬರ್ 5ಕ್ಕೆ ತೆರೆಗೆ ಬರಲಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರ, ಪೊಲೀಸ್ ಸರಣಿಯ ಮೂರನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
ವಿಶೇಷ ಹಾಡಿನ ಮೂಲಕ ಪುನೀತ್ಗೆ ನಮನ ಸಲ್ಲಿಸಿದ ಯುವತಿ
ಆತ್ಮಹತ್ಯೆ ಮಾಡಿಕೊಳ್ಳುವ ಹುಚ್ಚು ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಅಪ್ಪು ಅಭಿಮಾನಿಗಳನ್ನು ಮತ್ತೊಮ್ಮೆ ಕೋರಿದ ಶಿವಣ್ಣ