ಜೀ ಕನ್ನಡದಲ್ಲಿ ಹೊಸಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಸಾವಿರಾರು ಎಪಿಸೋಡ್ ಕಂಡ ಧಾರಾವಾಹಿಗಳು ಶೀಘ್ರವೇ ಪೂರ್ಣಗೊಳ್ಳುವ ಸೂಚನೆ ಸಿಕ್ಕಿದೆ. ಈ ಬೆನ್ನಲ್ಲೆ ಹೊಸ ಧಾರಾವಾಹಿ ಆರಂಭ ಆಗಿದೆ. ಇತ್ತೀಚೆಗಷ್ಟೇ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸಾರ ಆರಂಭ ಕಂಡಿದೆ. ಈಗ ‘ಅಮೃತಧಾರೆ’ (Amruthadhaare) ಧಾರಾವಾಹಿ ಆರಂಭಕ್ಕೆ ದಿನಾಂಕ ಫಿಕ್ಸ್ ಆಗಿದೆ. ಪ್ರೋಮೋ ಮೂಲಕ ಗಮನ ಸೆಳೆದ ಈ ಧಾರಾವಾಹಿ ಮೇ 29ರಿಂದ ಆರಂಭ ಆಗಲಿದೆ.
ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಹಲವು ಪ್ರೋಮೋಗಳು ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ಅಂತಿಮಘಟ್ಟ ತಲುಪಿದೆ. ಈ ಧಾರಾವಾಹಿ ಪೂರ್ಣಗೊಂಡ ಬಳಿಕ ‘ಅಮೃತಧಾರೆ’ ಪ್ರಸಾರ ಕಾಣಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.
‘ಹುಡುಗ-ಹುಡುಗಿ ಹೊಂದ್ಕೊಂಡಿದ್ರೆ ಅದೊಂದು ಚೆಂದದ ಕಥೆ. ಅವರಿಬ್ರೂ ಕಿತ್ತಾಡ್ಕೊಂಡಿದ್ರೆ ಅದು ಬೇರೇನೇ ಕಥೆ. ಬರ್ತಿದೆ ಒಂದು ಬೊಂಬಾಟ್ ಕಥೆ. ಅಮೃತಧಾರೆ, ಮೇ 29ರಿಂದ’ ಎಂದು ಹೊಸ ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಧಾರಾವಾಹಿ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ರಾಜೇಶ್ ನಟರಂಗ ಅವರು ಉದ್ಯಮಿ ಆಗಿ ಕಾಣಿಸಿಕೊಂಡರೆ, ಛಾಯಾ ಸಿಂಗ್ ಮಧ್ಯಮ ವರ್ಗದ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ‘ಬಡೇ ಅಚ್ಚೆ ಲಗ್ತೇ ಹೈ’ ಹೆಸರಿನ ಹಿಂದಿ ಧಾರಾವಾಹಿಯ ರಿಮೇಕ್ ಇದಾಗಿದೆ. ‘ಅಮೃತಧಾರೆ’ ಪ್ರೋಮೋ ನೋಡಿದವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗಿದೆ. ವಯಸ್ಸಿನ ಅಂತರ ಹೆಚ್ಚಿರುವ ಹುಡುಗ-ಹುಡುಗಿಯ ಪ್ರೇಮ್ ಕಹಾನಿ ಈ ಧಾರಾವಾಹಿಯಲ್ಲಿತ್ತು. ‘ಅಮೃತಧಾರೆ’ ಕೂಡ ಇದೇ ರೀತಿ ಇರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಅಮೃತಧಾರೆ’; ಇದರ ಕಥೆ ಏನು?
ಛಾಯಾ ಸಿಂಗ್ ಅವರು 2000ನೇ ಇಸವಿಯಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ‘ಮುನ್ನುಡಿ’ ಅವರ ಮೊದಲ ಸಿನಿಮಾ. ಹಲವು ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಸದ್ಯ ಅವರು ‘ಅನು ಅನೆ ನೇನು’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಾಜೇಶ್ ನಟರಂಗ ಕೂಡ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಛಾಯಾ ಸಿಂಗ್ ಹಾಗೂ ರಾಜೇಶ್ ಒಟ್ಟಾಗಿ ತೆರೆಹಂಚಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:55 am, Wed, 17 May 23