‘ಹಿಂದಿ ಬಿಗ್ ಬಾಸ್ ಸೀಸನ್ 16’ (Bigg Boss Hindi 16) ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಇದರಲ್ಲಿ ಅರ್ಚನಾ ಗೌತಮ್ ಅವರು ಟಾಪ್ 5ರಲ್ಲಿ ಸ್ಥಾನ ಪಡೆದಿದ್ದರು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ಸುದ್ದಿಯಲ್ಲಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪಿಎ ಸಂದೀಪ್ ಸಿಂಗ್ ವಿರುದ್ಧ ಗಂಭೀರ ಆರೋಪ ಒಂದನ್ನು ಮಾಡಿದ್ದಾರೆ. ಅವರಿಂದ ನನಗೆ ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅರ್ಚನಾ ಅವರ ತಂದೆ ಗೌತಮ್ ಬುದ್ಧ ಅವರು ಮೀರತ್ನಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಸಿನಿಮಾ ಮಾತ್ರವಲ್ಲದೆ ರಾಜಕೀಯದಲ್ಲೂ ಅರ್ಚನಾ ಸಕ್ರಿಯರಾಗಿದ್ದಾರೆ. ಕ್ರಾಂಗ್ರೆಸ್ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಪ್ರಿಯಾಂಕಾ ಗಾಂಧಿ ಅವರು ಅರ್ಚನಾಗೆ ಆಹ್ವಾನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 26ರಂದು ಅರ್ಚನಾ ಅವರು ರಾಯಪುರಕ್ಕೆ ತೆರಳಿದ್ದರು. ಪ್ರಿಯಾಂಕಾ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಪ್ರಿಯಾಂಕಾ ಪಿಎ ಸಂದೀಪ್ ಬಳಿ ಅರ್ಚನಾ ಅವರು ಮನವಿ ಮಾಡಿಕೊಂಡರು.
‘ಸಂದೀಪ್ ನನ್ನ ಮಗಳಿಗೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಕೆಟ್ಟ ಶಬ್ದಗಳಲ್ಲಿ ನನ್ನ ಮಗಳನ್ನು ಬೈದರು. ಅರ್ಚನಾ ವಿರುದ್ಧ ಜಾತಿ ನಿಂದನೆ ಮಾಡಿದರು. ಅವರನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು’ ಎಂದು ಅರ್ಚನಾ ತಂದೆ ಗೌತಮ್ ಬುದ್ಧ ದೂರಿನಲ್ಲಿ ಹೇಳಿದ್ದಾರೆ. ಈ ಕುರಿತು ಮೀರತ್ನ ಎಸ್ಪಿ ಪಿಯುಷ್ ಸಿಂಗ್ ಮಾತನಾಡಿದ್ದು, ‘ಗೌತಮ್ ಅವರು ನೀಡಿರುವ ದೂರನ್ನು ಸ್ವೀಕರಿಸಿದ್ದೇವೆ. ಎಫ್ಐಆರ್ ದಾಖಲಾಗಿದೆ’ ಎಂದಿದ್ದಾರೆ.
ಅರ್ಚನಾ ಅವರು 2014ರಲ್ಲಿ ಮಿಸ್ ಉತ್ತರ ಪ್ರದೇಶ ಆಗಿ ಹೊರಹೊಮ್ಮಿದರು. 2018ರಲ್ಲಿ ‘ಮಿಸ್ ಬಿಕಿನಿ ಇಂಡಿಯಾ’, ಮಿಸ್ ಬಿಕಿನಿ ಯೂನಿವರ್ಸ್ ಇಂಡಿಯಾ’ ಮೊದಲಾದ ಕಿರೀಟವನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ರಿಲೀಸ್ ಆದ ‘ಹಸೀನಾ ಪಾರ್ಕರ್’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈ ವರ್ಷ ನಡೆದ ‘ಬಿಗ್ ಬಾಸ್ ಕನ್ನಡ ಸೀಸನ್ 16’ರಲ್ಲಿ ಅವರು ಸ್ಪರ್ಧಿಸಿ ಎಲ್ಲರ ಗಮನ ಸೆಳೆದರು. ವಿನ್ ಆಗಲೇಬೇಕು ಎಂದು ಅವರು ಅಂದುಕೊಂಡಿದ್ದರು. ಮೂರನೇ ರನ್ನರ್ಅಪ್ ಸ್ಥಾನಕ್ಕೆ ಖುಷಿಪಟ್ಟರು.
ಅರ್ಚನಾ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2021 ನವೆಂಬರ್ ತಿಂಗಳಲ್ಲಿ ಅವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸೇರಿದರು. 2022ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿದ್ದರು. ಇವರ ಬಿಜೆಪಿ ಪ್ರತಿಸ್ಪರ್ಧಿಗೆ 1 ಲಕ್ಷ ಮತ ಸಿಕ್ಕರೆ, ಅರ್ಚನಾಗೆ 1 ಸಾವಿರ ಮತಗಳು ಸಿಕ್ಕಿದ್ದವು.
Published On - 11:53 am, Wed, 8 March 23