ಅತಿ ಬುದ್ಧಿವಂತಿಕೆ ತೋರಿಸಲು ಬಂದು ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್

ಟಾಸ್ಕ್ ನಡುವೆಯೂ ಸ್ನೇಹ ಮುಂದುವರಿಸಿಕೊಂಡ ಹೋಗಲು ಜಾಹ್ನವಿ ಮತ್ತು ಅಶ್ವಿನಿ ಗೌಡ ಪ್ರಯತ್ನಿಸಿದರು. ಆದರೆ ಅದಕ್ಕೆ ಬಿಗ್ ಬಾಸ್ ಅವಕಾಶ ನೀಡಲಿಲ್ಲ. ಸರಿಯಾಗಿ ಆಟ ಆಡುವಂತೆ ಖಡಕ್ ಎಚ್ಚರಿಕೆ ನೀಡಲಾಯಿತು. ಇದರಿಂದಾಗಿ ಜಾಹ್ನವಿ ಮತ್ತು ಅಶ್ವಿನಿ ಗೌಡ ನಡುವೆ ಈಗ ಕಿರಿಕ್ ಆಗಿದೆ. ಇನ್ಮೇಲೆ ಆಟದ ವರಸೆ ಬದಲಾಗಲಿದೆ.

ಅತಿ ಬುದ್ಧಿವಂತಿಕೆ ತೋರಿಸಲು ಬಂದು ಜಾಹ್ನವಿ, ಅಶ್ವಿನಿ ಗೌಡಗೆ ಪಾಠ ಕಲಿಸಿದ ಬಿಗ್ ಬಾಸ್
Ashwini Gowda

Updated on: Oct 27, 2025 | 10:53 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶುರು ಆದಾಗಿನಿಂದ ಅಶ್ವಿನಿ ಗೌಡ ಮತ್ತು ಜಾಹ್ನವಿ (Jahnavi) ಅವರು ಸ್ನೇಹ ಹೊಂದಿದ್ದರು. ಅದೇ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುವುದು ಅವರ ಉದ್ದೇಶ ಆದಂತಿತ್ತು. ಹಾಗಾಗಿ ಬಿಗ್ ಬಾಸ್ ಕೊಟ್ಟ ಟಾಸ್ಕ್ ನಿಭಾಯಿಸುವ ವೇಳೆಯೂ ಅವರು ಅತಿ ಬುದ್ಧಿವಂತಿಕೆ ತೋರಿಸಲು ಪ್ರಯತ್ನಿಸಿದರು. ಆದರೆ ಅದಕ್ಕೆ ಬಿಗ್ ಬಾಸ್ ಅವಕಾಶ ಕೊಡಲಿಲ್ಲ. ಈ ವಾರ ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಜಾಹ್ನವಿ ಮತ್ತು ಅಶ್ವಿನಿ ಗೌಡ (Ashwini Gowda) ಅವರು ಎದುರುಬದರು ಟೀಮ್​​ನಲ್ಲಿ ಇದ್ದಾರೆ. ಇಬ್ಬರಲ್ಲಿ ಯಾರಿಗೆ ಅರ್ಹತೆ ಇಲ್ಲ ಎಂಬುದನ್ನು ಚರ್ಚೆ ಮಾಡಲು ಬಿಗ್ ಬಾಸ್ ವೇದಿಕೆ ನಿರ್ಮಿಸಿಕೊಟ್ಟರು. ಆದರೆ ಜಾಹ್ನವಿ ಮತ್ತು ಅಶ್ವಿನಿ ಒಬ್ಬರನ್ನೊಬ್ಬರು ಬಿಟ್ಟಕೊಡಲಿಲ್ಲ. ಆಗ ಬಿಗ್ ಬಾಸ್ ಚಾಟಿ ಬೀಸಬೇಕಾಯಿತು.

‘ಜಾನ್ವಿ ಸ್ನೇಹದ ತೆಕ್ಕೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಅವರು ತಮ್ಮದಲ್ಲದ ವ್ಯಕ್ತಿತ್ವನ್ನು ತೋರಿಸುತ್ತಿದ್ದಾರೆ. ಅವರಿಗೆ ಇಲ್ಲಿ ಇರಲು ಅರ್ಹತೆ ಇಲ್ಲದಂತಹ ವ್ಯಕ್ತಿತ್ವವನ್ನು ತೋರಿಸುತ್ತಿದ್ದಾರೆ. ನಾನು ಅವರನ್ನು ಡಾಮಿನೇಟ್ ಮಾಡುತ್ತೇನೆ ಎಂಬುದು ಕೆಲವರ ಅಭಿಪ್ರಾಯ. ಆ ಮಾತನ್ನು ತೆಗೆದುಕೊಂಡು ಹೋಗಲು ನಾನು ತಯಾರಿಲ್ಲ. ಸ್ನೇಹದಿಂದ ನನಗೆ ಕಳಂಕ ಬಂದಿದೆ. ನೀವು ಉತ್ತರ ಕೊಡದೇ ಮೌನ ವಹಿಸಿದ್ದೀರಿ’ ಎಂದು ತುಂಬ ನಯವಾಗಿ ಮಾತನಾಡಿಕೊಂಡು ಜಾರಿಕೊಳ್ಳಲು ಅಶ್ವಿನಿ ಗೌಡ ಪ್ರಯತ್ನಿಸಿದರು.

‘ನಾನು ಫೇಕ್ ಮಾಡುವ ವ್ಯಕ್ತಿ ಅಲ್ಲ. ಅದಕ್ಕೆ ಕಾರಣ ಕೂಡ ನಿಮಗೆ ಗೊತ್ತಿದೆ. ಫೇಕ್ ಆಗಿದ್ದರೆ ಎಂದೂ ಆ ಸ್ನೇಹ ಹೋಗುತ್ತಿತ್ತು’ ಎಂದು ಭಾರಿ ನಾಜೂಕಾಗಿ ಮಾತನಾಡಿ ಜಾರಿಕೊಳ್ಳಲು ಜಾಹ್ನವಿ ಪ್ರಯತ್ನಿಸಿದರು. ಅವರಿಬ್ಬರಿಗೂ ಬಿಗ್ ಬಾಸ್ ಚಾಟಿ ಬೀಸಿದರು. ಈ ರೀತಿ ಹುರುಳಿಲ್ಲದೇ ವಾದ-ಪ್ರತಿವಾದ ಮಾಡಿ ಇಡೀ ಪ್ರಕ್ರಿಯೆಯನ್ನು ತಮಾಷೆಯಾಗಿ ಪರಿವರ್ತಿಸಿದ್ದಕ್ಕೆ ಬಿಗ್ ಬಾಸ್ ಎಚ್ಚರಿಕೆ ನೀಡಿದರು. ಆಗ ಅವರಿಬ್ಬರು ಎಚ್ಚೆತ್ತುಕೊಂಡು ಅಸಲಿ ಮುಖ ತೋರಿಸಿದರು.

‘ಜಾಹ್ನವಿ ನನ್ನ ಜೊತೆಗೆ ಇದ್ದುಕೊಂಡು ನನಗೇ ಭಾವಿ ತೋಡುತ್ತಿದ್ದಾರೆ ಅಂತ ನನಗೆ ಈಗ ಗೊತ್ತಾಯಿತು’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ‘ಮೊಲ ಮತ್ತು ಆಮೆ ಕಥೆ ನಿಮಗೆ ಗೊತ್ತಿದೆ ಅಲ್ವಾ? ತುಂಬಾ ಮಾತನಾಡಿದರೆ ಗೆಲ್ಲೋಕೆ ಆಗುತ್ತೆ ಅಂತ ಭಾವಿಸಬೇಡಿ’ ಎಂದು ಜಾಹ್ನವಿ ಹೇಳಿದರು. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಯಿತು.

ಇದನ್ನೂ ಓದಿ: ಬಿಗ್ ಬಾಸ್ ರಘು ಸಾಮಾನ್ಯ ಶಕ್ತಿವಂತನಲ್ಲ; ವಿಡಿಯೋ ನೋಡಿ

ಇವು ಟಾಸ್ಕ್ ಸಲುವಾಗಿ ಆಡಿದ ಮಾತುಗಳು ಆದರೂ ಕೂಡ ಅಶ್ವಿನಿ ಗೌಡ ಮತ್ತು ಜಾಹ್ನವಿ ನಡುವೆ ಮನಸ್ತಾಪ ಉಂಟಾಗಿದೆ. ಜಾಹ್ನವಿ ಹೇಳಿದ್ದು ಅಶ್ವಿನಿ ಗೌಡ ಅವರಿಗೆ ಬೇಸರ ಉಂಟುಮಾಡಿದೆ. ಅಲ್ಲದೇ, ಅಶ್ವಿನಿ ಗೌಡ ಅವರು ಖಾರವಾಗಿ ಮಾತನಾಡಿದ್ದರಿಂದ ಜಾಹ್ನವಿ ಅವರಿಗೆ ನೋವಾಗಿದೆ. ಇದರಿಂದಾಗಿ ಬಿಗ್ ಬಾಸ್ ಮನೆಯಲ್ಲಿ ಅವರಿಬ್ಬರ ನಡುವೆ ಕಿರಿಕ್ ಹೆಚ್ಚಾಗಿದೆ.

ಇಡೀ ವಾರ ಬಿಗ್ ಬಾಸ್ ಮನೆ ಒಂದು ಕಾಲೇಜ್ ಕ್ಯಾಂಪಸ್ ಆಗಿ ಬದಲಾಗಿದೆ. ಕಾಲೇಜು ದಿನಗಳ ತರಲೆ, ತಮಾಷೆ, ಕಿತಾಪತಿ ಮಾಡಲು ಹೇರಳ ಅವಕಾಶ ಸಿಕ್ಕಿದೆ. ಮೊದಲ ದಿನವೇ ಗಿಲ್ಲಿ ನಟ ತಮ್ಮ ಅಸಲಿ ಆಟ ಶುರು ಮಾಡಿಕೊಂಡಿದ್ದಾರೆ. ಅದೇ ರೀತಿ, ಚಂದ್ರಪ್ರಭ ಕೂಡ ಕಾಮಿಡಿ ಮೂಲಕ ಎಲ್ಲರನ್ನೂ ನಗಿಸಲು ಆರಂಭಿಸಿದ್ದಾರೆ. ಬಿಗ್ ಬಾಸ್ ವೀಕ್ಷಕರಿಗೆ ಕಾಮಿಡಿ ಕಿಕ್ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.