ಬುದ್ಧಿ ಇಲ್ಲ ಅಂತ ಒಪ್ಪಿಕೊಂಡು ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ

ಅಶ್ವಿನಿ ಗೌಡ ಅವರು ಅಷ್ಟು ಸುಲಭವಾಗಿ ಯಾರ ಬಳಿಯೂ ಹೋಗಿ ಕ್ಷಮೆ ಕೇಳುವ ವ್ಯಕ್ತಿ ಅಲ್ಲವೇ ಅಲ್ಲ. ಆದರೆ ಚೈತ್ರಾ ಕುಂದಾಪುರ ಎದುರು ನಿಂತು ಕ್ಷಮೆ ಕೇಳುವುದು ಅಶ್ವಿನಿ ಗೌಡ ಅವರಿಗೆ ಅನಿವಾರ್ಯ ಆಯಿತು. ಚೈತ್ರಾ ಕೇಳಿದ್ದ ಒಂದು ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದ ಕಾರಣ ಅಶ್ವಿನಿ ಗೌಡ ಅವರು ಕ್ಷಮೆ ಕೇಳಿದರು.

ಬುದ್ಧಿ ಇಲ್ಲ ಅಂತ ಒಪ್ಪಿಕೊಂಡು ಚೈತ್ರಾ ಎದುರು ಕ್ಷಮೆ ಕೇಳಿದ ಅಶ್ವಿನಿ ಗೌಡ
Chaithra Kundapura, Ashwini Gowda

Updated on: Nov 27, 2025 | 10:17 PM

ನಟಿ, ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ (Ashwini Gowda) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಡಾಮಿನೇಟ್ ಮಾಡುತ್ತಿದ್ದರು. ಆದರೆ ಈ ವಾರ ಬಿಗ್ ಬಾಸ್ (Bigg Boss Kannada Season 12) ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. 11ನೇ ಸೀಸನ್ ಸ್ಪರ್ಧಿಗಳು ಈ ವಾರ ದೊಡ್ಮನೆಗೆ ಅತಿಥಿಗಳಾಗಿ ಬಂದಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ರಜತ್, ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಪೈ ಅವರು ಅತಿಥಿಗಳಾಗಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿರುವುದು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಕರ್ತವ್ಯ. ಇದೇ ಪರಿಸ್ಥಿತಿಯ ಲಾಭ ಪಡೆದುಕೊಂಡು ಚೈತ್ರಾ ಕುಂದಾಪುರ (Chaithra Kundapura) ಅವರು ಎಲ್ಲರ ಬಳಿ ಕ್ಷಮೆ ಕೇಳಿಸಿದ್ದಾರೆ.

ಬಿಗ್ ಬಾಸ್ ಮನೆಯನ್ನು ಈ ಬಾರಿ ಕರ್ನಾಟಕದ ಸಂಸ್ಕೃತಿಯ ಥೀಮ್​​ನಲ್ಲಿ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ವಿವಿಧ ಭಾಗಗಳನ್ನು ಪ್ರತಿನಿಧಿಸುವ ಚಿತ್ರಗಳು ಬಿಗ್ ಬಾಸ್ ಮನೆಯಲ್ಲಿ ಇವೆ. ಅದರಲ್ಲಿ ದರ್ಪಣ ಸುಂದರಿಯ ಪ್ರತಿಮೆ ಕೂಡ ಇದೆ. ಆ ಶಿಲಾಬಾಲಿಕೆಯ ಹೆಸರು ಏನು ಎಂದು ಚೈತ್ರಾ ಅವರು ಪ್ರಶ್ನೆ ಕೇಳಿದರು. ಅದಕ್ಕೆ ಬಿಗ್ ಬಾಸ್​ ಮನೆಯ ಯಾರೂ ಕೂಡ ಉತ್ತರ ನೀಡಲಿಲ್ಲ.

ಕೇಳಿದ ಪ್ರಶ್ನೆಗೆ ಉತ್ತರಿಸಲು ಸೋತುಹೋದ ಬಿಗ್ ಬಾಸ್ ಮನೆಯವರು ತಮ್ಮ ಬಳಿ ಕ್ಷಮೆ ಕೇಳಬೇಕು ಎಂದು ಚೈತ್ರಾ ಕುಂದಾಪುರ ಅವರು ಪಟ್ಟು ಹಿಡಿದರು. ‘ಈ ಪ್ರಶ್ನೆಗೆ ತಮ್ಮ ಬಳಿ ಉತ್ತರ ಇಲ್ಲ. ನಮ್ಮ ತಲೆಯಲ್ಲಿ ಬುದ್ಧಿ ಇಲ್ಲ’ ಎಂದು ಹೇಳಿ ಆರಂಭದಲ್ಲಿ ಬಹುತೇಕ ಎಲ್ಲರೂ ಕ್ಷಮೆ ಕೇಳಿದರು. ಆದರೆ ಅಶ್ವಿನಿ ಗೌಡ ಅವರು ಆ ರೀತಿ ಕ್ಷಮೆ ಕೇಳಲು ಒಪ್ಪಿಕೊಂಡಿರಲಿಲ್ಲ.

ಅಶ್ವಿನಿ ಗೌಡ ಅವರಿಗೆ ಬಿಗ್ ಬಾಸ್ ಮನೆಯ ಹೊರಗಡೆ ಒಂದು ಇಮೇಜ್ ಇದೆ. ಕನ್ನಡಪರ ಹೋರಾಟಗಾರ್ತಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಮನೆಯ ಒಳಗೆ ‘ನನಗೆ ಬುದ್ಧಿ ಇಲ್ಲ’ ಎಂದು ಹೇಳಿಕೆ ನೀಡಲು ಅವರು ನಿರಾಕರಿಸಿದ್ದರು. ಆದರೆ ಇದು ಟಾಸ್ಕ್ ಆಗಿರುವುದರಿಂದ ಕ್ಷಮೆ ಕೇಳುವುದೇ ಉತ್ತಮ ಎಂದು ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ಅಶ್ವಿನಿಯ ಮನವೊಲಿಸಿದರು.

ಇದನ್ನೂ ಓದಿ: ಅತಿಥಿಗಳು ನಡೆದುಕೊಂಡ ರೀತಿಗೆ ಒಂದಾದ ಗಿಲ್ಲಿ-ಅಶ್ವಿನಿ; ಮೂಡಿತು ಗೆಳೆತನ

ಅಂತಿಮವಾಗಿ ಚೈತ್ರಾ ಎದುರು ನಿಂತು ಅಶ್ವಿನಿ ಗೌಡ ಅವರು ಕ್ಷಮೆ ಕೇಳಿದರು. ‘ಅಧ್ಯಕ್ಷನೋ, ಸೈನಿಕನೋ ಕಾಯಕವೇ ಧ್ಯೇಯ. ಚೈತ್ರಾ ಅವರು ಕೇಳಿದ ಪ್ರಶ್ನೆಗೆ ನನ್ನಲ್ಲಿ ಉತ್ತರ ಇರಲಿಲ್ಲ. ಆ ಪ್ರಶ್ನೆಗೆ ನನ್ನಲ್ಲಿ ಬುದ್ಧಿವಂತಿಕೆ ಇಲ್ಲ. ಹಾಗಾಗಿ ನಾನು ಇಂದು ನನ್ನ ಬಿಬಿ ಪ್ಯಾಲೇಸ್​ನ ಎಲ್ಲ ಸಿಬ್ಬಂದಿಯ ಪರವಾಗಿ ಚೈತ್ರಾ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಅಶ್ವಿನಿ ಗೌಡ ಅವರು ಹೇಳಿದರು. ಬಳಿಕ ಇತರೆ ಸ್ಪರ್ಧಿಗಳ ಜೊತೆ ಮಾತನಾಡಿದ ಚೈತ್ರಾ ಕುಂದಾಪುರ ಅವರು ‘ಇಂದು ಕರ್ನಾಟಕ ಬಹಳ ಖುಷಿಪಟ್ಟಿರುತ್ತದೆ’ ಎಂದು ವ್ಯಂಗ್ಯವಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.